ಹಾವೇರಿ: ಶಿಗ್ಗಾಂವ್ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ ಶನಿವಾರ ಶಿಗ್ಗಾಂವ್‌ನಲ್ಲಿ ಬೂತ್ಮಟ್ಟದ ಸದಸ್ಯರ ಸಮಾವೇಶ ನಡೆಸಿತು. ಶಿಗ್ಗಾಂವ್‌ನ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಸಮಾವೇಶಕ್ಕೆ ಸಚಿವರಾದ ಈಶ್ವರ ಖಂಡ್ರೆ, ಶಿವಾನಂದ್ ಪಾಟೀಲ್ ಸೇರಿದಂತೆ ವಿವಿಧ ನಾಯಕರು ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವ ಈಶ್ವರ ಖಂಡ್ರೆ, "ಯಾವುದೇ ಕ್ಷಣದಲ್ಲಿ ಉಪಚುನಾವಣೆ ದಿನಾಂಕ ಘೋಷಣೆ ಆಗಬಹುದು. ಶಿಗ್ಗಾಂವ್, ಸಂಡೂರು, ಚನ್ನಪಟ್ಟಣ ಮೂರೂ ಕಡೆ ಸಿದ್ಧತೆ ನಡೆದಿದೆ. ಹೆದರಿಸಿ ಬೆದರಿಸಿ, ಇಡಿ, ಸಿಬಿಐ ಮೂಲಕ ಬಿಜೆಪಿಯವರು ಕಾಂಗ್ರೆಸ್ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಹೊಟ್ಟೆಕಿಚ್ಚಿನಿಂದ ಸರ್ಕಾರವನ್ನು ಬುಡಮೇಲು ಮಾಡಲು ಪ್ರಯತ್ನ ನಡೆಸಿದ್ದಾರೆ. ಯಾವುದೇ ಶಕ್ತಿ ಬಂದರೂ ಐದು ವರ್ಷ ನಮ್ಮ ಸರ್ಕಾರವನ್ನು ಏನೂ ಮಾಡಲು ಸಾಧ್ಯವಿಲ್ಲ" ಎಂದು ತಿಳಿಸಿದರು.
"ಸುಳ್ಳು ಆರೋಪ ಮಾಡಿ, ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಮೋದಿ, ಅಮಿತ್ ಶಾ ಸಂಚು ಮಾಡಿ ಸಿದ್ದರಾಮಯ್ಯ ಸರ್ಕಾರ ಬುಡಮೇಲು ಮಾಡಲು ಮುಡಾ ಹಗರಣದ ಆರೋಪ ಮಾಡಿದ್ದಾರೆ. ಹೆಣಗಳ ರಾಶಿಗಳ ಮೇಲೆ ರಾಜಕೀಯ ಮಾಡಿದವರು ಬಿಜೆಪಿಯವರು. ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಮಾಡೋರು ಬಿಜೆಪಿಯವರು" ಎಂದು ಖಂಡ್ರೆ ಆರೋಪಿಸಿದರು.
ರಾಹುಲ್ ಗಾಂಧಿ ಪ್ರಧಾನಿ ಆಗ್ತಾರೆ ಎಂದು ಮೋದಿಯವರಿಗೆ ಭಯ ಶುರುವಾಗಿದೆ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಯಾರೇ ಆಗಲಿ, ಹೈಕಮಾಂಡ್ ಹೇಳಿದಂತೆ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕೆಲಸ ಮಾಡಿ. ಕಾಂಗ್ರೆಸ್ಗೆ ಸೋಲಾಗುತ್ತಿರುವುದು ಕಾಂಗ್ರೆಸ್ನವರಿಂದ. ಕಾಂಗ್ರೆಸ್ಗೆ ದ್ರೋಹ ಮಾಡಲು ಹೋಗಬೇಡಿ. ಪಕ್ಷಕ್ಕಾಗಿ ದುಡಿದವರಿಗೆ ಸೂಕ್ತ ಸ್ಥಾನಮಾನ ಪಕ್ಷದಲ್ಲಿ ಸಿಗಲಿದೆ"
ಎಂದು ತಿಳಿಸಿದರು.
ಸಚಿವ ಶಿವಾನಂದ ಪಾಟೀಲ್, "ಹಗಲು ಕಾಂಗ್ರೆಸ್, ರಾತ್ರಿ ಬಿಜೆಪಿ ಮಾಡುವುದು ಬೇಡ. ಇರೋದಾದರೆ ಕಾಂಗ್ರೆಸ್ ಜೊತೆ ಇರಿ, ಇಲ್ಲದಿದ್ದರೆ ನಾಳೆಯೇ ಬೊಮ್ಮಾಯಿ ಜೊತೆ ಹೋಗಿ. ನಮ್ಮದೇನು ಅಭ್ಯಂತರ ಇಲ್ಲ. ಈ ರೀತಿ ಪಕ್ಷ ವಿರೋಧಿ ಚಟುವಟಿಕೆ ಮಾಡುವ ಕಾರ್ಯಕರ್ತರು ಯಾರೂ ಪಕ್ಷದಲ್ಲಿ ಇರಬೇಡಿ" ಎಂದು ಪಕ್ಷ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದರು.