ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಫಿಲ್ಮ್ ಚೇಂಬರ್ (ETV Bharat) ಚಿತ್ರದುರ್ಗ: ಯಾರೇ ಮಾಡಿದರೂ ತಪ್ಪು ತಪ್ಪೇ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಇಂತಹ ತಪ್ಪನ್ನು ಖಂಡಿಸುತ್ತದೆ ಎಂದು ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ಹೇಳಿದರು. ಇಂದು ಚಿತ್ರದುರ್ಗಕ್ಕೆ ಭೇಟಿ ನೀಡಿದ ಅವರು, ಕೊಲೆಗೀಡಾದ ರೇಣುಕಾಸ್ವಾಮಿ ಕುಟುಂಬಕ್ಕೆ ಧೈರ್ಯ ತುಂಬಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೃತ ರೇಣುಕಾಸ್ವಾಮಿಯ ತಂದೆ-ತಾಯಿಯ ಪರಿಸ್ಥಿತಿ ಕಂಡು ನಮಗೂ ಕಣ್ಣೀರು ಬಂತು. ಕುಟುಂಬಕ್ಕೆ ಧೈರ್ಯ ಹೇಳಿದ್ದೇವೆ. ನಾವಿಲ್ಲಿಗೆ ಯಾವುದೇ ರಾಜಿ ಮಾಡಿಕೊಳ್ಳಲು ಬಂದಿಲ್ಲ, ಸಂತಾಪ ಹೇಳಲು ಇಲ್ಲಿಗೆ ಬಂದಿದ್ದೇವೆ. ಪ್ರಕರಣವನ್ನು ಪೊಲೀಸರು ಕಾನೂನು ಅಡಿಯಲ್ಲಿ ತನಿಖೆ ನಡೆಸಿದ್ದಾರೆ ಎಂದರು.
ದರ್ಶನ್ ಬ್ಯಾನ್ ವಿಚಾರ ಕುರಿತು ಪ್ರತಿಕ್ರಿಯಿಸಿ, ಈ ನಿರ್ಧಾರವನ್ನು ನಾವು ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಸಹಕಾರ ಮಾಡಬಹುದು. ಆರೋಪ ಸಾಬೀತಾದರೆ ಕಲಾವಿದರ ಸಂಘ, ನಿರ್ಮಾಪಕರ ಸಂಘ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಆದರೆ, ಈ ಘಟನೆ ನಮಗೂ ಬೇಸರ ತರಿಸಿದೆ ಎಂದು ಹೇಳಿದರು.
ನಟನಿಗೆ ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ. ಈ ಹಿಂದೆಯೂ ಡಾ. ರಾಜ್ಕುಮಾರ, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಶ್ ಅವರಿಗೂ ಅಭಿಮಾನಿಗಳಿದ್ದರು, ಇಗಲೂ ಇದ್ದಾರೆ. ಆದರೆ, ಇತ್ತೀಚೆಗೆ ಅಭಿಮಾನಿಗಳು ಪ್ರಚೋದನೆಗೆ ಒಳಗಾಗುತ್ತಿದ್ದಾರೆ. ಯಾರೂ ಕೂಡ ಪ್ರಚೋದನೆಗೆ ಒಳಗಾಗಬಾರದು ಎಂದು ಸುರೇಶ್ ಮನವಿ ಮಾಡಿದರು.
ಕಷ್ಟ ಕಾಲದಲ್ಲಿ ಕುಟುಂಬಕ್ಕೆ ಅನುಕೂಲವಾಗಲೆಂದು ನಿಯೋಗದಿಂದ ಸಾಂಕೇತಿಕವಾಗಿ 5 ಲಕ್ಷ ರೂ. ನೀಡಲಾಗಿದೆ. ಮುಂದೆಯೂ ಸಹಾಯ ಮಾಡುತ್ತೇವೆ. ಶಾಶ್ವತ ಪರಿಹಾರ ನೀಡಲು ನಿರ್ಧರಿಸಲಾಗಿದೆ. ವಾಣಿಜ್ಯ ಮಂಡಳಿ ಇರುವುದು ಒಳ್ಳೆಯದಕ್ಕೆ. ಚಿತ್ರರಂಗದಿಂದ ಕ್ಷಮೆ ಕೇಳಿದ್ದೇವೆ. ಅವರ ಬಗ್ಗೆ ವೈಭವೀಕರಿಸಬಾರದು. ಕೊರೊನಾ ಬಳಿಕ ಜನರು ಚಿತ್ರಮಂದಿರಗಳಿಗೆ ಬರುತ್ತಿಲ್ಲ. ಚಿತ್ರರಂಗದ ಬಗ್ಗೆ ವಾಣಿಜ್ಯ ಮಂಡಳಿ ಬಗ್ಗೆ ದೂಷಣೆ ಮಾಡಬೇಡಿ ಎಂದು ಸಹ ಅವರು ಮನವಿ ಮಾಡಿಕೊಂಡರು.
ಮಾಜಿ ಅಧ್ಯಕ್ಷ ಸಾ ರಾ ಗೋವಿಂದ್ ಮಾತನಾಡಿ, ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅವರು ತಪ್ಪು ಮಾಡಿರಬಹುದು. ಆದರೆ, ಆ ತಪ್ಪನ್ನು ವಿಕಾರವಾಗಿ ತೆಗೆದುಕೊಂಡು ಹೋಗಬಾರದಿತ್ತು. ನಡೆದಿರುವ ಘಟನೆಗೆ ಚಿತ್ರರಂಗ ಹೊಣೆಯಲ್ಲ, ಇದಕ್ಕೆ ಸಂಬಂಧಪಟ್ಟ ವ್ಯಕ್ತಿಯೇ ಹೊಣೆ. ಅವರಿಂದ ಚಿತ್ರರಂಗ ತಲೆತಗ್ಗಿಸುವ ಕೆಲಸ ಆಗಿದೆ. ನಾವೂ ಕೂಡ ತಲೆತಗ್ಗಿಸುವ ಕೆಲಸ ಆಗಿದೆ. ಸಿನಿಮಾ ಅಂದರೆ ಜನರು ಕೊಡುವ ಗೌರವವೇ ಬೇರೆ. ರಾಜ್ಕುಮಾರ, ಶಂಕರ್ ನಾಗ್, ವಿಷ್ಣು ವರ್ದನ್ ಇದ್ದ ಕಾಲ ಈಗ ಇಲ್ಲ. ರಾಜ್ಕುಮಾರ್ ಅಭಿಮಾನಿಗಳ ಸಂಘ ಮಾಡಿ ಸಾಕಷ್ಟು ಹೋರಾಟ ಮಾಡಿದ್ದೇವೆ. ಚಿತ್ರದುರ್ಗದಲ್ಲಿ ಕೂಡ ಹೋರಾಟ ನಡೆಸಿದ್ದೇವೆ. ಆದರೆ, ನಡೆದಿರುವ ಘಟನೆ ಸಂತೋಷ ಕೊಡುವಂತಹದ್ದಲ್ಲ. ಇತ್ತೀಚೆಗೆ ಯುವ ನಟರು ದಾರಿ ತಪ್ಪುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಚಿತ್ರರಂಗಕ್ಕೂ ಕೆಟ್ಟ ಹೆಸರು ಬರುತ್ತಿದೆ. ನಾವು ಕಾನೂನುಗಿಂತ ದೊಡ್ಡವರಲ್ಲ. ಪೊಲೀಸ್ ಇಲಾಖೆ ಒಳ್ಳೆಯ ತನಿಖೆ ಮಾಡುತ್ತಿದೆ. ಹಾಗಾಗಿ ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸುವೆ ಎಂದರು.
ವಾಣಿಜ್ಯ ಮಂಡಳಿಯ ಮತ್ತೊಬ್ಬ ಮಾಜಿ ಅಧ್ಯಕ್ಷ ಎಸ್ ಎ ಚಿನ್ನೇಗೌಡ ಮಾತನಾಡಿ, ಈ ಘಟನೆ ಆಗಬಾರದಾಗಿತ್ತು, ಆಗಿ ಹೋಗಿದೆ. ಈ ನೋವು ಕೇವಲ ಆ ಕುಟುಂಬಕ್ಕೆ ಮಾತ್ರ ಅಲ್ಲ, ಚಿತ್ರರಂಗಕ್ಕೂ ಸಹ. ಮನುಷ್ಯ ವಿವೇಕ ಮತ್ತು ಸಹನೆಯನ್ನು ಕಳೆದುಕೊಳ್ಳಬಾರದು. ಅಂದು ಸ್ವಲ್ಪ ಸಮಾಧಾನ ತೆಗೆದುಕೊಂಡಿದ್ದರೇ ಅನಾಹುತ ನಡೆಯುತ್ತಿರಲಿಲ್ಲ. ಮೃತ ರೇಣುಕಾಸ್ವಾಮಿಯ ತಂದೆ-ತಾಯಿ ಗತಿಯೇನು? ಮುಂದೆ ಯಾರೂ ಕೂಡ ಇಂತಹ ಕೃತ್ಯಕ್ಕೆ ಕೈಹಾಕಬಾರದು ಎಂದರು.
ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ: ರಾತ್ರಿ ವೇಳೆ ಚಿತ್ರದುರ್ಗದಲ್ಲಿ ಸ್ಥಳ ಮಹಜರು - Spot Inspection In Chitradurga