ವಿಜಯಪುರ: ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಇರುವ ಇಪ್ಪತ್ತೆಂಟೂ ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಈ ಮೂಲಕ ಇರುವ ಒಂದು ಸ್ಥಾನವನ್ನು ಸಹ ಕಾಂಗ್ರೆಸ್ ಕಳೆದುಕೊಳ್ಳಲಿದೆ ಎಂದು ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನದಾಸ್ ಅಗರವಾಲ್ ಭವಿಷ್ಯ ನುಡಿದಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಳೆದ ಕೆಲ ತಿಂಗಳುಗಳಿಂದ ರಾಜ್ಯದಲ್ಲಿ ಪ್ರವಾಸಲ್ಲಿದ್ದೇನೆ. ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಜನತೆಯ ನಾಡಿಮಿಡಿತವನ್ನು ಅರಿಯುವ ಪ್ರಯತ್ನ ಮಾಡಿದ್ದೇನೆ. ಜನತೆ ಸಹ ಪಕ್ಷದ ಪರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಪರ ಒಲವು ಹೊಂದಿದ್ದಾರೆ. ವಿಜಯಪುರದಲ್ಲಿ ಹಾಲಿ ಸಂಸದ ರಮೇಶ ಜಿಗಜಿಣಗಿ ಮತ್ತೊಮ್ಮೆ ಜಯಸಾಧಿಸುವುದಲ್ಲದೇ ರಾಜ್ಯದಲ್ಲಿ ಇರುವ ಇಪ್ಪತ್ತೆಂಟಕ್ಕೆ ಇಪ್ಪತ್ತೆಂಟೂ ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ.
ಪಕ್ಷದ ಮುಖಂಡ ಕೆ.ಎಸ್.ಈಶ್ವರಪ್ಪನವರ ಬಂಡಾಯದ ಕುರಿತಂತೆ ಮಾತನಾಡಿದ ಅಗರವಾಲ್, ಅವರು ನಮ್ಮ ಪಕ್ಷದ ಮುಖಂಡರಾಗಿದ್ದರು. ಪಕ್ಷಕ್ಕಾಗಿ ಅವರು ಸಾಕಷ್ಟು ಸಂಘರ್ಷ ಮಾಡಿದ್ದಾರೆ. ಈಶ್ವರಪ್ಪನವರಿಗೆ ದುಃಖವಾಗಿರಬಹುದು, ಆದರೆ ಬಿಜೆಪಿ ಕಾರ್ಯಕರ್ತರಿಗೆ ದುಃಖವಾಗಿಲ್ಲ. ಈಶ್ವರಪ್ಪನವರಿಗೆ ಈಶ್ವರ ಒಳ್ಳೆಯ ಬುದ್ದಿ ಕೊಡಲಿ ಎಂದಷ್ಟೇ ನಾವು ಹೇಳಬಹುದು. ಇದಕ್ಕಿಂತ ಹೆಚ್ಚಿಗೆ ನಾನೇನು ಹೇಳುವುದಿಲ್ಲ ಎಂದರು.
ನಂತರ ಬಿಜೆಪಿ ಪಕ್ಷದ ಜಿಲ್ಲಾ ಪ್ರಮುಖರ ಸಭೆ ನಡೆಯಿತು. ರಾಧಾಮೋಹನದಾಸ್ ಅಗರವಾಲ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಸೇರಿದಂತೆ ಇನ್ನಿತರ ಮುಖಂಡರು ಮತ್ತು ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ, ರಾಧಾಮೋಹನ ದಾಸ್ ಅಗರವಾಲ್ ಎಲ್ಲ ರೀತಿಯಿಂದ ಕಾರ್ಯಕರ್ತರಿಗೆ ಮತ್ತು ಪಕ್ಷದ ಪದಾಧಿಕಾರಿಗಳಿಗೆ ಶಾಸಕರಿಗೆ, ಸಂಸದರಿಗೆ, ಮಾಜಿ ಶಾಸಕರಿಗೆ ಮಾರ್ಗದರ್ಶನವನ್ನು ಮಾಡಿದ್ದಾರೆ. ವಿಜಯಪುರ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದ್ದು ಬಿಜೆಪಿ ಭದ್ರಕೋಟೆಯಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಅಂತರದಿಂದ ಗೆಲ್ಲುವುದು ಹೇಗೆ, ಜನತೆಯ ಮುಂದಿಡಬೇಕಾದ ವಿಷಯಗಳು ಮತ್ತು ಚುನಾವಣೆ ಕಾರ್ಯತಂತ್ರಗಳ ಕುರಿತು ಅವರು ಮಾರ್ಗದರ್ಶನ ಮಾಡಿದ್ದಾರೆ ಎಂದರು. ಮುಂದುವರೆದು ಮಾತನಾಡುತ್ತಾ ಯತ್ನಾಳ, ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರನ್ನು ಸಿಎಂ ಕುರ್ಚಿಯಿಂದ ಇಳಿಸಲು ವ್ಯವಸ್ಥಿತವಾಗಿ ತಯಾರಿ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ:ರಾಜ್ಯದ ಭೂಭಾಗವನ್ನು ಬೇರೆ ರಾಜ್ಯಕ್ಕೆ ಕೊಡುವ ವಿಷಯವೂ ಗ್ಯಾರಂಟಿ ಪ್ರಣಾಳಿಕೆಯಲ್ಲಿ ಸೇರಿದೆಯಾ: ಕಾಂಗ್ರೆಸ್ಗೆ ಸುನೀಲ್ ಕುಮಾರ್ ಪ್ರಶ್ನೆ - Sunil Kumar statement