ಕರ್ನಾಟಕ

karnataka

ETV Bharat / state

ಧಮ್ ಇದ್ದರೆ ಹಗರಣಗಳನ್ನು ಸಿಬಿಐಗೆ ವಹಿಸಿ: ಸಿದ್ದರಾಮಯ್ಯಗೆ ಬಿಜೆಪಿ ಚಾಲೆಂಜ್ - BJP Protest - BJP PROTEST

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು.

ಬಿಜೆಪಿ ಬೃಹತ್ ಪ್ರತಿಭಟನೆ
ಬಿಜೆಪಿ ಬೃಹತ್ ಪ್ರತಿಭಟನೆ (ETV Bharat)

By ETV Bharat Karnataka Team

Published : Aug 22, 2024, 6:17 PM IST

ಬೆಂಗಳೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ. ದಲಿತರ ವಿರುದ್ಧ ಕಾಂಗ್ರೆಸ್ ಪಕ್ಷದ ಅನ್ಯಾಯವನ್ನು ಪ್ರತಿಭಟಿಸಿ ಕಾಂಗ್ರೆಸ್‌ನಲ್ಲಿರುವ ದಲಿತ ಮುಖಂಡರು, ಜನಪ್ರತಿನಿಧಿಗಳು ರಾಜೀನಾಮೆ ಕೊಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ನಡೆದ ಬಿಜೆಪಿಯ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲ ದಲಿತ ಮುಖಂಡರಿಗೂ ಧಿಕ್ಕಾರ. ದಲಿತರಿಗೆ ಅನ್ಯಾಯ ಮಾಡಿದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು. ನಾನು ಹಿಂದುಳಿದ ವರ್ಗದ ನಾಯಕ. ಆದ್ದರಿಂದಲೇ ನನಗೆ ಬಿಜೆಪಿಯವರು ತೊಂದರೆ ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಹಾಗಿದ್ದರೆ ಈ ದೇಶದ ಪ್ರಧಾನಮಂತ್ರಿ ಯಾರು? ಅವರು ಕೂಡ ಹಿಂದುಳಿದವರು. ಅವರು ಕಳಂಕವೇ ಇಲ್ಲದವರು ಎಂದರು.

ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೆ ನಾವು ವಿರಮಿಸುವುದಿಲ್ಲ. ಭ್ರಷ್ಟಾಚಾರದ ಕಪ್ಪನ್ನು ಅಳಿಸುವವರೆಗೆ, ನಿಮ್ಮನ್ನು ಮನೆಗೆ ಕಳಿಸುವವರೆಗೆ ನಾವು ವಿರಮಿಸುವುದಿಲ್ಲ. ನಿಮ್ಮ ಮಂಡೆಯಲ್ಲಿ ಬುದ್ಧಿ ಇಲ್ಲ. ಹುಲಿಯಾ ಎಂದಾಗ ಖುಷಿ ಪಡುತ್ತಿದ್ದ ನೀವೀಗ ಕರಿಯ ಆಗಿ ಕೂತಿದ್ದೀರಲ್ಲಾ? ಎಷ್ಟು ವೈಟ್ನರ್ ಹಾಕಿದ್ರೂ ಬಿಳಿ ಆಗೋದಿಲ್ಲ. ದಯವಿಟ್ಟು ರಾಜೀನಾಮೆ ಕೊಟ್ಟು ಹೋಗಿಬಿಡಿ. ಇಡೀ ರಾಜ್ಯ ಸಿದ್ದರಾಮಯ್ಯನವರ ವಿರುದ್ಧ ಇದೆ. ದಲಿತರಿಗೆ ಮೀಸಲಿಟ್ಟ ಹಣ ವರ್ಗಾವಣೆ ಪ್ರಕರಣ, ವಾಲ್ಮೀಕಿ ನಿಗಮದ ಹಗರಣ, ಮೂಡಾ ಹಗರಣ- ಇವೆಲ್ಲವೂ ದಲಿತ ಸಮುದಾಯಕ್ಕೆ ಸೇರಿದ ವಿಚಾರಗಳು. ಕಾಂಗ್ರೆಸ್ ಪಕ್ಷ ದಲಿತರ ಸಮಾಧಿ ಮಾಡುತ್ತಿದ್ದರೆ, ಸ್ವಾಮೀಜಿಗಳು ಆ ಸಮಾಧಿ ಮೇಲೆ ಕುಳಿತು ಅವರಿಗೆ ಬೆಂಬಲ ಕೊಡುವುದು ಸರಿಯೇ ಎಂದು ಪ್ರಶ್ನಿಸಿದರು.

ಜನಹಿತಕ್ಕಾಗಿ ಮುಖ್ಯಮಂತ್ರಿ ರಾಜೀನಾಮೆ ಕೊಡಲಿ: ಜನಹಿತ, ರಾಜ್ಯದ ಹಿತ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷದ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಆಗ್ರಹಿಸಿದರು. ಭ್ರಷ್ಟ ಸರಕಾರದ ವಿರುದ್ಧ ನಾವು ಜನಜಾಗೃತಿ ಮೂಡಿಸಬೇಕು. ಪ್ರತಿನಿತ್ಯ ಹೋರಾಟ ಮಾಡುವುದೇ ನಮ್ಮ ಕರ್ತವ್ಯವಾಗಿ. ಸಾಕ್ಷಿ ಸಮೇತ ಹಿಡಿದರೂ ಇವರು ರಾಜೀನಾಮೆ ಕೊಡುವುದಿಲ್ಲ. ಜನರ ಭಾವನೆಯನ್ನು ಇವರು ಗೌರವಿಸುವುದಿಲ್ಲ. ಕುರ್ಚಿಗೆ ಅಂಟಿಕೊಂಡೇ ಇರುವ ಭಂಡತನ ಇವರದು ಎಂದು ಟೀಕಿಸಿದರು.

ಸಿಬಿಐ ತನಿಖೆಗೆ ಒತ್ತಾಯ:ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಸಿದ್ದರಾಮಯ್ಯನವರಿಗೆ ಧಮ್ಮಿದ್ದರೆ, ತಾಕತ್ತಿದ್ದರೆ ಹಗರಣಗಳ ತನಿಖೆಯನ್ನು ಸಿಬಿಐಗೆ ಕೊಡಬೇಕು ಎಂದು ಒತ್ತಾಯಿಸಿದರು. ವೈಟ್ನರ್ ಹಚ್ಚಿದ್ದು ತಮ್ಮ ಸರ್ಕಾರದ ಅವಧಿಯಲ್ಲಿ ಅಲ್ಲ ಎಂದು ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಿ ಹೇಳಬೇಕು ಎಂದು ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು. ವಿಜಯನಗರ ಸಮಾನಾಂತರ ಬಡಾವಣೆಯಲ್ಲಿ ನಿವೇಶನ ಕೊಡಿ ಎಂದು ಬರೆದುದಕ್ಕೆ ವೈಟ್ನರ್ (ಬಿಳಿ ಬಣ್ಣ) ಹಚ್ಚಿದ್ದಾರೆ. ಸಿದ್ದರಾಮಯ್ಯ ಸುಳ್ಳು ರಾಮಯ್ಯ ಎಂದು ಲೇವಡಿ ಮಾಡಿದರು.

ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಬೆಂಗಳೂರಿನ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರಾದ ಮುನಿರತ್ನ, ಗೋಪಾಲಯ್ಯ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ.ರಾಮಮೂರ್ತಿ, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು, ಬಿಬಿಎಂಪಿ ಮಾಜಿ ಸದಸ್ಯರು ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪರಮೇಶ್ವರ್ ವಿರುದ್ಧ ಆಕ್ರೋಶ:ಪರಮೇಶ್ವರ್ ಗೃಹ ಸಚಿವ ಸ್ಥಾನದಿಂದ ಕೆಳಗೆ ಇಳಿಯಲಿ. ರಾಜ್ಯಪಾಲರಿಗೆ ಬೆದರಿಕೆ ಇರುವ ಬಗ್ಗೆ ಗೃಹ ಸಚಿವ ಜಿ‌.ಪರಮೇಶ್ವರ್​ ಗೊತ್ತಿಲ್ಲ ಅಂತಾರೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ತುಮಕೂರಲ್ಲಿ ಕಿಡಿಕಾರಿದರು.

ABOUT THE AUTHOR

...view details