ಹಾವೇರಿ:ಜಿಲ್ಲೆಯ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಜಿ ಸಚಿವ ಬಿ.ಸಿ.ಪಾಟೀಲ್ ರೋಡ್ ಶೋ ನಡೆಸಿದರು. ಸವಣೂರು ಮತ್ತು ಶಿಗ್ಗಾಂವ್ ಪಟ್ಟಣದಲ್ಲಿ ಉಭಯ ನಾಯಕರು ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಸಿಎಂ ಆಗಿ ಎರಡು ವರ್ಷ ಕಳೀತಾ ಬಂತು. ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಶಾಸಕರು ಸೇರಿದಂತೆ ಯಾವುದೇ ವಿಪಕ್ಷ ಶಾಸಕರು ಶಾಲೆ, ರಸ್ತೆ ಸೇರಿದಂತೆ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಹಣವಿಲ್ಲದೇ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. 15 ಬಜೆಟ್ ಮಂಡನೆ ಮಾಡಿದ್ದೇನೆ ಅಂತ ಹೇಳಿ ಬೆನ್ನು ತಟ್ಟಿಕೊಳ್ಳುವ ಸಿಎಂ ಆಡಳಿತ ಹೇಗೆ ಆಗಿದೆ ಎಂದು ಒಮ್ಮೆ ಅವಲೋಕನ ಮಾಡಿಕೊಳ್ಳಲಿ ಎಂದರು.
ನೌಕರರ ಆತ್ಮಹತ್ಯೆ:ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಅಂತ ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ ಆಗಬೇಕು. ಬೆಂಗಳೂರು, ದಾವಣಗೆರೆಯಲ್ಲಿ ಕಾಂಟ್ರಾಕ್ಟರ್ಗಳು ಆತ್ಮಹತ್ಯೆ ಮಾಡಿಕೊಳ್ಳುತಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಹೆಸರು ಬರೆದಿಟ್ಟು ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭ್ರಷ್ಟಾಚಾರ ರಹಿತ ಆಡಳಿತ ನೀಡ್ತೀವಿ ಅಂತ ಸಿಎಂ ಹೇಳ್ತಾರೆ. ಅವರೇ ಮುಡಾ ಹಗರಣದಲ್ಲಿ ಆರೋಪಿಯಾಗಿದ್ದಾರೆ ಎಂದು ವಿಜಯೇಂದ್ರ ಮೂದಲಿಸಿದರು.
ಸಿದ್ದರಾಮಯ್ಯನವರೇ, ಯಡಿಯೂರಪ್ಪ ಅವರ ಬಗ್ಗೆ ಮಾತಾಡಬೇಕಾದರೆ ಎಚ್ಚರಿಕೆ ಇರಬೇಕು. ಅಂತ ಮೊನ್ನೆ ಸಂಡೂರಿನಲ್ಲಿಯೇ ಹೇಳಿದ್ದೆ. ಯಡಿಯೂರಪ್ಪ ಅವರು ಸರ್ವರಿಗೂ ಸಮಪಾಲ ಎಂಬಂತ ಆಡಳಿತ ನೀಡಿದ್ದಾರೆ. ಸಿದ್ದರಾಮಯ್ಯ ಅದೃಷ್ಟದ ಮುಖ್ಯಮಂತ್ರಿ ಹೊರತು ಯಡಿಯೂರಪ್ಪ ಅವರ ತರಹದ ಹೋರಾಟದ ಮುಖ್ಯಮಂತ್ರಿ ಅಲ್ಲ ಎಂದು ಟೀಕಿಸಿದರು.