ಬೆಂಗಳೂರು: ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಅರವಿಂದ ಕೇಜ್ರಿವಾಲ್ ಅವರ ಪರಿಸ್ಥಿತಿಯನ್ನು ದೇಶ, ರಾಜ್ಯದ ಜನರು ನೋಡಿದ್ದಾರೆ. ಸುತ್ತಿ ಬಳಸಿ ಮಾತನಾಡುವುದಿಲ್ಲ, ನೇರವಾಗಿ ಹೇಳುತ್ತೇನೆ. ಮುಖ್ಯಮಂತ್ರಿಗಳು ಭಂಡತನ, ಹುಡುಗಾಟಿಕೆ ಬಿಟ್ಟು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಒತ್ತಾಯಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಅವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ನ ಬೆಂಬಲ ಇದೆ ಎಂಬಂತೆ ವರ್ತಿಸುತ್ತಿದ್ದಾರೆ. ಎಸ್‍ಟಿ ಅಭಿವೃದ್ಧಿ ನಿಗಮದಲ್ಲಿ ದೋಚಿದ ಹಣವು ಕಾಂಗ್ರೆಸ್ ಹೈಕಮಾಂಡ್ಗೆ ತಲುಪಿದೆ ಎಂಬ ವಿಷಯವೂ ಕೇಳಿಬರುತ್ತಿದೆ. ಆದ್ದರಿಂದ ಹೈಕಮಾಂಡ್ ಸಿದ್ದರಾಮಯ್ಯರ ಪರ ನಿಂತಿದೆ ಎಂಬುದು ದೊಡ್ಡ ವಿಚಾರವಲ್ಲ. ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದ ವಿಚಾರಗಳು, ಜನಪ್ರತಿನಿಧಿಗಳ ಕೋರ್ಟಿನ ಆದೇಶದ ಕುರಿತು ಸಿದ್ದರಾಮಯ್ಯನವರು ಇನ್ನೊಂದು ಬಾರಿ ಓದಿದರೆ ತಕ್ಷಣ ರಾಜೀನಾಮೆ ಕೊಡಲು ಅವರಿಗೂ ಅನುಕೂಲವಾಗುತ್ತದೆ ಎಂದರು.
ಬಿ.ವೈ. ವಿಜಯೇಂದ್ರ (ETV Bharat) ಮುಖ್ಯಮಂತ್ರಿಯವರು ರಾಜೀನಾಮೆ ಕೊಡುತ್ತಾರೆ. ಕೊಡಲೇಬೇಕಾಗುತ್ತದೆ. ಬಹಳ ದಿನ ಓಡಿಹೋಗಲು ಸಾಧ್ಯವಿಲ್ಲ. ಗೌರವಯುತವಾಗಿ ರಾಜೀನಾಮೆ ಕೊಟ್ಟರೆ ರಾಜ್ಯಕ್ಕೂ ಒಳ್ಳೆಯದು, ಅವರ ಗೌರವವೂ ಅಲ್ಪಸ್ವಲ್ಪ ಉಳಿಯುತ್ತದೆ ಎಂದು ಹೇಳಿದರು.
ಮುಡಾ ಹಗರಣ ನಡೆದಿಲ್ಲ, ಬಿಜೆಪಿಯವರಿಗೆ ತಲೆ ಕೆಟ್ಟಿದೆ ಎಂಬಂತೆ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು. 62 ಕೋಟಿ ಪರಿಹಾರ ಅಪೇಕ್ಷಿಸದೆ 14 ನಿವೇಶನ ಹಿಂತಿರುಗಿಸುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ. ಹೈಕೋರ್ಟಿನ ತೀರ್ಪು, ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಬಳಿಕವೂ ಮುಖ್ಯಮಂತ್ರಿಗಳು ತಮ್ಮ ಭಂಡತನ ಮುಂದುವರೆಸಿದ್ದಾರೆ ಎಂದು ಕಿಡಿಕಾರಿದರು.
ನಿರಪರಾಧಿ ಎಂಬಂತೆ ಬಿಂಬಿಸಿಕೊಳ್ಳುವ ಪ್ರಯತ್ನ:ಇ.ಡಿ. ಅಖಾಡಕ್ಕೆ ಇಳಿದಿದೆ. ಮೈಸೂರು ಮುಡಾ ಮೇಲೆ ದಾಳಿಯನ್ನೂ ನಡೆಸಿದೆ. ಇವತ್ತು ಕೂಡ ದಾಳಿ ಮುಂದುವರೆದಿದೆ. ಆದರೆ, ಮುಖ್ಯಮಂತ್ರಿಗಳು ತಾವು ನಿರಪರಾಧಿ ಎಂಬಂತೆ ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇ.ಡಿ. ಕೇಂದ್ರ ಸರ್ಕಾರದ ಕೈಗೊಂಬೆ ಎನ್ನುವ ರೀತಿಯಲ್ಲಿ ಟೀಕಿಸುತ್ತಿದ್ದಾರೆ. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬ ಭಾವನೆಯಲ್ಲಿ ಮುಖ್ಯಮಂತ್ರಿಗಳು ಇದ್ದಂತಿದೆ ಎಂದು ಟೀಕಿಸಿದರು.
ಚನ್ನಪಟ್ಟಣ ಅಭ್ಯರ್ಥಿ ಕುರಿತು ಚರ್ಚಿಸಿ ನಿರ್ಧಾರ : ಚನ್ನಪಟ್ಟಣ ಅಭ್ಯರ್ಥಿ ಕುರಿತು ಕುಮಾರಸ್ವಾಮಿಯವರ ಜೊತೆ ಇವತ್ತು ಅಥವಾ ನಾಳೆ ಕುಳಿತು ಚರ್ಚಿಸುತ್ತೇವೆ. ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಆ ಕ್ಷೇತ್ರಕ್ಕೆ ಅವರದೇ ಆದ ಕೊಡುಗೆ ನೀಡಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಅವರು ಬಳಿಕ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಈಗ ಸಂಸದ, ಕೇಂದ್ರದ ಸಚಿವರಾಗಿದ್ದಾರೆ. ಆ ಕ್ಷೇತ್ರದ ಕುರಿತು ಹೆಚ್ಡಿಕೆಯವರು ನಮ್ಮ ಪಕ್ಷದ ವರಿಷ್ಠರ ಜೊತೆ ಚರ್ಚೆ ಮಾಡಿದ್ದಾರೆ ಎಂದು ತಿಳಿಸಿದರು.
ಯೋಗೇಶ್ವರ್ ಅವರಿಗೆ ಅನ್ಯಾಯ ಆಗಬಾರದೆಂಬ ಆಸೆ ನನಗೂ ಇದೆ. ಇಲ್ಲಿಯೂ ಚರ್ಚೆ ಮಾಡುತ್ತೇವೆ. ಕೇಂದ್ರದ ವರಿಷ್ಠರು ಅಂತಿಮ ತೀರ್ಮಾನ ಮಾಡುತ್ತಾರೆ ಎಂದರು.
ಸಚಿವ ಬೈರತಿ ಸುರೇಶ್ ಅವರನ್ನು ಬಂಧಿಸಬೇಕು:ಮತ್ತೊಂದೆಡೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಮುಖ್ಯಮಂತ್ರಿಗಳು ತಮ್ಮ ಪರಮಾಪ್ತ, ಮುಡಾ ಚೇರ್ಮನ್ ಮರಿಗೌಡರ ರಾಜೀನಾಮೆ ಪಡೆದದ್ದು ಯಾಕೆ?. ಅವರ ರಾಜೀನಾಮೆ ಪಡೆದು ಅವರ ಮೇಲೆ ಹಗರಣವನ್ನು ಹೊರಿಸಲು ಹೊರಟಿದ್ದಾರೆ. ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು. ಸಚಿವ ಬೈರತಿ ಸುರೇಶ್ ಅವರನ್ನು ತಕ್ಷಣ ಬಂಧಿಸಬೇಕು. ಬೈರತಿ ಸುರೇಶ್ ಬಂಧನವಾದೊಡನೆ ಸತ್ಯ ಹೊರಕ್ಕೆ ಬರಲಿದೆ. ಅವರ ತನಿಖೆ ನಡೆಸಬೇಕಿದೆ. ತಪಾಸಣೆ ಮಾಡಬೇಕಿದೆ. ಅವರು ತಂದ ಕಡತಗಳ ವಿವರ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು : ಸಂಸದ ಯದುವೀರ್ ಒಡೆಯರ್