ಬೆಂಗಳೂರು : ನಾವು ಪ್ರತಿಪಕ್ಷದಲ್ಲಿ ಸಂತೋಷದಿಂದ ಇದ್ದೇವೆ, ಯಾವ ಕಾರಣಕ್ಕೂ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡಲ್ಲ. ಯಾವುದೇ ರೀತಿಯ ಆಪರೇಷನ್ ಮಾಡುವ ಪ್ರಶ್ನೆಯೂ ಇಲ್ಲ. ಆದರೆ ಲೋಕಸಭೆ ಚುನಾವಣಾ ಫಲಿತಾಂಶ ಯಾವ ರೀತಿ ಪ್ರಭಾವ ಬೇಕಾದರೂ ಬೀರಬಹುದು. ಅದರ ಪರಿಣಾಮ ಏನು ಬೇಕಾದರೂ ಆಗಬಹುದು. ಅದಕ್ಕೆ ನಾವು ಜವಾಬ್ದಾರರು ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ತಿಳಿಸಿದ್ದಾರೆ.
ಶಾಂತಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಕಾಂಗ್ರೆಸ್ ಪತನದ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಏನು ಹೇಳಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ವಿರೋಧಪಕ್ಷವಾಗಿ ನಮ್ಮ ಜವಾಬ್ದಾರಿಯನ್ನು ನಾವು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಬೀಳಿಸುವ ಕೆಲಸವನ್ನು ನಾವು ಮಾಡುವುದಿಲ್ಲ. ಆದರೆ, ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ನಲ್ಲಿ ಯಾವ ರೀತಿ ಅಲ್ಲೋಲ ಕಲ್ಲೋಲವಾಗಲಿದೆ ಎನ್ನುವುದನ್ನು ನಾನು ಹೇಳಲ್ಲ ಎಂದರು.
ಶಿಂಧೆ ಹೇಳಿಕೆ ಕುರಿತು ಮಾತನಾಡಿದ ಮಾಜಿ ಡಿಸಿಎಂ ಅಶ್ವತ್ಥನಾರಾಯಣ, ಈ ಸರ್ಕಾರ ಪತನಕ್ಕೆ ನಾವು ಏನೂ ಮಾಡುವ ಅಗತ್ಯ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಿಎಂ ಸ್ಥಾನಕ್ಕೆ ಜಗಳ ನಡೆಯುತ್ತಲೇ ಇದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ನಡುವೆ ದೊಡ್ಡ ಸಂಘರ್ಷವಾಗುತ್ತಿದೆ. ನಿತ್ಯ ಗುಂಪುಗಾರಿಕೆ ಜಗಳ ನಡೆಯುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಹೇಳಿದರು.