ಬಳ್ಳಾರಿ :ರಾಜ್ಯದಲ್ಲಿಅಸಮರ್ಥಸರ್ಕಾರವಿದೆ,ಒಬ್ಬ ಅಸಮರ್ಥ ಸಿಎಂ ಇದ್ದಾರೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್ದಾರೆ.
ಜಿಲ್ಲೆಯ ಸಂಡೂರು ತಾಲೂಕಿನ ಜಿಂದಾಲ್ನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 15 ಬಾರಿ ಬಜೆಟ್ ಮಂಡನೆ ಮಾಡಿರುವ ಸಿಎಂಗೆ ಅಸಮರ್ಥ ಎನ್ನುತ್ತಿದ್ದೇನೆ ಎಂಬುದನ್ನ ನೀವು ಕೇಳಬಹುದು. ಈ ಪ್ರಶ್ನೆಯನ್ನ ನನ್ನನ್ನು ಕೇಳುವ ಬದಲಾಗಿ ಆಡಳಿತ ಪಕ್ಷದ ಶಾಸಕರನ್ನು ಕೇಳಿದ್ರೆ ನಿಮಗೆ ಉತ್ತರ ಸಿಗುತ್ತೆ ಎಂದರು.
ಬಿಜೆಪಿಯ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಮಾತನಾಡಿದರು (ETV Bharat) ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಮೇಲೆ ಗೂಬೆ ಕೂರಿಸಿ, ಭ್ರಷ್ಟಾಚಾರ ಆರೋಪವನ್ನು ಹೊರಿಸಿತ್ತು. ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ ರಾಜ್ಯದ ಜನರ ಕಣ್ಣಿಗೆ ಮಣ್ಣನ್ನು ಎರಚುತ್ತಾ ಇವತ್ತು ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದರು.
ಕಳೆದ ಒಂದೂವರೆ ಎರಡು ವರ್ಷದಲ್ಲಿ ಸಿಎಂ ಸಿದ್ದರಾಮಯ್ಯನವರ ಆಡಳಿತ ವೈಖರಿಯನ್ನ ನೋಡಿದ್ರೆ, ಈ ಅವಧಿಯಲ್ಲೇ ತನ್ನ ಜನಪ್ರಿಯತೆಯನ್ನ ಕಳೆದುಕೊಂಡಿರುವಂತಹ ಸರ್ಕಾರ ಯಾವುದಾದ್ರು ದೇಶದಲ್ಲಿ ಇದ್ರೆ ಅದು ರಾಜ್ಯದಲ್ಲಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ಟೀಕಿಸಿದರು.
ಜಮೀನನ್ನು ಕಬಳಿಸುವ ಕೆಲಸ ಆಗುತ್ತಿದೆ: ವಕ್ಫ್ ವಿವಾದದ ಕುರಿತು ಮಾತನಾಡಿದ ಅವರು, ಆ ಜಮೀನಿನ ಪಹಣಿಯಲ್ಲಿ ಇನ್ನೂ ಕೂಡಾ ಕರಾಬು ಎಂದು ನಮೂದು ಮಾಡಿ, ಜಮೀನು ಕಬಳಿಸುವ ಕೆಲಸ ಆಗುತ್ತಿದೆ. ಅದರಿಂದ ರೈತರನ್ನು ಕಾಪಾಡುವ ಕೆಲಸ ಶಾಸಕರಿಂದ ಆಗಲಿಲ್ಲ ಎಂದು ವಿಜಯೇಂದ್ರ ಆರೋಪಿಸಿದರು.
ಮುಡಾದಲ್ಲಿ 50:50 ಅನುಪಾತದ ಹಗರಣ ಮುಚ್ಚಿ ಹಾಕೋ ಕೆಲಸ ಮಾಡಿದ್ದಾರೆ. ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ತಾತ್ಕಾಲಿಕವಾಗಿ ಇರುತ್ತವೆ ಎಂದು ಹೇಳಿದರು.
ಕೋಟಿಗಟ್ಟಲೆ ಭ್ರಷ್ಟಾಚಾರ ಮಾಡಿದ್ದಾರೆ: ಅಹಿಂದ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರನ್ನು ಹೋಲಿಕೆ ಮಾಡ್ತಾ ಇದಾರೆ. ದೇವರಾಜ ಅರಸು, ಅಂಬೇಡ್ಕರ್, ವೀರಶೈವ ನಿಗಮ ಮಂಡಳಿಗಳಲ್ಲಿ ಕೋಟಿಗಟ್ಟಲೆ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದೂರಿದರು.
ಸಿಎಂ ಸಿದ್ದರಾಮಯ್ಯ ಅವರೇ ಆರೋಪಿ ನಂಬರ್ 1. ಆದರೆ ಅವರು ನಾನು ನಿರಾಪರಾಧಿ ಎಂದು ಹೇಳ್ತಾರೆ. ಬಿಜೆಪಿ ಅವರು ಹೇಳೋದನ್ನು ಬದಿಗೆ ಇಡಿ. ಆದರೆ ಉಚ್ಚ ನ್ಯಾಯಾಲಯ ಎಳೆಎಳೆಯಾಗಿ ಮಾಹಿತಿ ಇಟ್ಟಿದೆ. ತನಿಖೆ ಸಹ ಮಾಡಿದೆ ಎಂದು ಹೇಳಿದರು.
ಸಿಎಂ ಭಾಷಣದಲ್ಲಿ ಖಾಲಿ ಕುರ್ಚಿಗಳೇ ಹೆಚ್ಚಾಗಿದ್ದವು :ಬಿ. ಎಸ್ ಯಡಿಯೂರಪ್ಪ, ಶ್ರೀರಾಮುಲು ಹಾಗೂ ಬಿ. ವೈ ವಿಜಯೇಂದ್ರ ಚುನಾವಣೆಯಲ್ಲಿ ಪ್ರಚಾರ ಮಾಡಬಾರದು ಎಂದರು. ಸಿದ್ದರಾಮಯ್ಯ ಭಾಷಣ ಮಾಡುವಾಗ ಖಾಲಿ ಕುರ್ಚಿಗಳೇ ಹೆಚ್ಚಾಗಿದ್ದವು. ಜತೆಗೆ ₹ 500 ಹಣಕೊಟ್ಟು ಜನರನ್ನು ಕರೆದುಕೊಂಡು ಬಂದಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಮೂರು ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸುತ್ತದೆ ಎಂದರು. ಈ ಸಮಯದಲ್ಲಿ ಶಾಸಕ ಗಾಲಿ ಜರ್ನಾರ್ದನ್ ರೆಡ್ಡಿ, ಶಾಸಕ ಶೈಲಜ್, ಚನ್ನಬಸವನಗೌಡ, ನವೀನ್ ಸುರೇಶ್, ಪ್ರಶಾಂತ ಮತ್ತು ಬಿಜೆಪಿಯ ಹಿರಿಯ ಮುಖಂಡರು ಹಾಜರಿದ್ದರು.
ಇದನ್ನೂ ಓದಿ :ಆಯೋಗಗಳ ರಚನೆ, ಅನುಕೂಲಕರ ವರದಿ ಪಡೆದುಕೊಳ್ಳುವುದರಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರು - ಬಿ ವೈ ವಿಜಯೇಂದ್ರ