ಕರ್ನಾಟಕ

karnataka

ETV Bharat / state

ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗೆ ಯೋಗ ಸಹಾಯಕ: ಬಿ.ವೈ.ವಿಜಯೇಂದ್ರ - B Y Vijayendra - B Y VIJAYENDRA

ಯೋಗಾಭ್ಯಾಸವನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಆರೋಗ್ಯ ಕಾಪಾಡಿಕೊಂಡು ಮಾನಸಿಕ ನೆಮ್ಮದಿಯಿಂದ ಬದುಕಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ನೀಡಿದರು.

ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ (ETV Bharat)

By ETV Bharat Karnataka Team

Published : Jun 21, 2024, 4:49 PM IST

Updated : Jun 21, 2024, 5:18 PM IST

ಬಿ.ವೈ.ವಿಜಯೇಂದ್ರ (ETV Bharat)

ಬೆಂಗಳೂರು: "ಯೋಗವನ್ನು ಒಂದು ದಿನ ಮಾಡಿದರೆ ಸಾಲದು, ದಿನನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಆರೋಗ್ಯ ಕಾಪಾಡಿಕೊಂಡು ಮಾನಸಿಕ ನೆಮ್ಮದಿಯಿಂದ ಬದುಕಬಹುದು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಯೋಗಾಸನ ಪೂರ್ವಭಾವಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

"ಯೋಗ ಸುಮಾರು 6 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿದೆ. ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಕೇವಲ ಭಾರತದಲ್ಲಷ್ಟೇ ಅಲ್ಲ, ವಿಶ್ವಸಂಸ್ಥೆ ಒಳಗೊಂಡಂತೆ ಅನೇಕ ರಾಷ್ಟ್ರಗಳಲ್ಲೂ ಸಹ ಯೋಗ ದಿನಾಚರಣೆಯ ನಡೆಯುತ್ತದೆ. ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಯೋಗ ದಿನಾಚರಣೆ ಮಾಡಲು ಅದರ ಕೀರ್ತಿ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ" ಎಂದರು.

ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಧನಾರಾಯಣ್ ಮಾತನಾಡಿ, "ಯೋಗವು ವಿಶ್ವಕ್ಕೆ ಭಾರತ ಕೊಟ್ಟ ಕೊಡುಗೆ. ಮೋದಿಜೀ ಅವರ ಈ ಕೊಡುಗೆಗೆ ವಿಶ್ವದ ಮೆಚ್ಚುಗೆ ಲಭಿಸಿದೆ. ಯೋಗವು ಪ್ರತಿಯೊಬ್ಬರ ಬದುಕಿಗೂ ಒಂದು ಆಶಾಕಿರಣ ಮತ್ತು ಭರವಸೆ. ಯೋಗವನ್ನು ಬಲವಾಗಿ ನಂಬಿ ಪ್ರತಿಯೊಂದು ವಿಚಾರವನ್ನೂ ತಿಳಿದುಕೊಂಡು ಯೋಗಾಭ್ಯಾಸ ಮಾಡಬೇಕು" ಎಂದು ಸಲಹೆ ನೀಡಿದರು.

ಯೋಗಾಸನ ಮಾಡಿದ ಬಿ.ವೈ ವಿಜಯೇಂದ್ರ (ETV Bharat)

ಕನ್ನಡ ಚಲನಚಿತ್ರ ನಟ ಮತ್ತು ನಿರ್ದೇಶಕ ವಿಕ್ಕಿ ವರುಣ್ ಮಾತನಾಡಿ, "ಯೋಗದ ಮೂಲಕ ನಿಸರ್ಗದ ಜೊತೆ ಬೆರೆಯುವ ಅನುಭವ ಅನನ್ಯವಾದುದು. ಕೆಲಸದ ಒತ್ತಡ, ಜಂಜಾಟಗಳ ನಡುವೆ ಶಾಂತಿಯಿಂದ ನಿರ್ಧಾರ ತೆಗೆದುಕೊಳ್ಳಲು ಯೋಗವನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು" ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್ ರೆಡ್ಡಿ, ಪಿ.ರಾಜೀವ್, ರಾಜ್ಯ ಕಾರ್ಯದರ್ಶಿಗಳಾದ ತಮ್ಮೇಶ್ ಗೌಡ, ಲಕ್ಷ್ಮಿ ಅಶ್ವಿನಿ ಗೌಡ, ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಮತ್ತು ಪಕ್ಷದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯೋಗ ಬರೀ ಆಸನಗಳಿಗೆ ಸೀಮಿತವಾಗಿಲ್ಲ-ಸುಚೇಂದ್ರ ಪ್ರಸಾದ್:"ಯೋಗ ಕೇವಲ ಆಸನಗಳಿಗೆ ಸೀಮಿತವಾಗಿಲ್ಲ. ಈ ಪದಕ್ಕೆ ಅನೇಕ ಅರ್ಥಗಳಿವೆ. ಪ್ರತಿ ಕಾರ್ಯ ಕೈಂಕರ್ಯಗಳನ್ನು ಸೂಕ್ಮವಾಗಿ ಗಮನಿಸುವುದು ಯೋಗ. ಪ್ರಸ್ತುತ ಕಾಲಮಾನದ ಸ್ಥಿತ್ಯಂತರಗಳನ್ನು ಅರಿತು ಬದುಕಲು ಯೋಗಿಗಳಾಗುವುದು ಅತಿ ಮುಖ್ಯವಾಗಿದೆ" ಎಂದು ನಟ-ನಿರ್ದೇಶಕ, ಸಂಸ್ಕಾರ ಭಾರತೀಯ ಪ್ರಾಂತ್ಯಾಧ್ಯಕ್ಷ ಸುಚೇಂದ್ರ ಪ್ರಸಾದ್ ತಿಳಿಸಿದರು.

ಶನಿವಾರ ಜಯನಗರದ ಶಾಲಿನಿ ಮೈದಾನದಲ್ಲಿ ರಾಷ್ಟ್ರೋತ್ತಾನ ಪರಿಷತ್ ಆಯೋಜಿಸಿದ್ದ 10ನೇ ಅಂತಾರಾಷ್ಟೀಯ ಯೋಗ ದಿನದ ಅಂಗವಾಗಿ ನೆಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, "ಯೋಗ ಪದಕ್ಕೆ ನಾನಾ ಅರ್ಥಗಳಿವೆ. ಬರೀ ಆಸನಗಳಿಗೆ ಸೀಮಿತವಾಗಿಲ್ಲ. ಪತಂಜಲಿ ಮಹರ್ಷಿಗಳು ಸೇರಿದಂತೆ ನಮ್ಮ ಪೂರ್ವಜರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಕೆಳ ಪಂಕ್ತಿಗೆ ಸರಿಸದಿದ್ದರೆ ಅದೇ ದೊಡ್ಡ ಯೋಗವಾಗಿದೆ" ಎಂದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ (ETV Bharat)

ರಾಷ್ಟ್ರೋತ್ತಾನ ಪರಿಷತ್​ನ ಕಾರ್ಯದರ್ಶಿ ಎನ್.ದಿನೇಶ್ ಹೆಗಡೆ ಮಾತನಾಡಿ, "ಈ ವರ್ಷ ರಾಷ್ಟ್ರೋತ್ತಾನ ಪರಿಷತ್ ಆರಂಭವಾಗಿ 60 ವರ್ಷಗಳು ತುಂಬುತ್ತಿವೆ. 1965 ರಲ್ಲಿ ಸೌತ್ ಎಂಡ್ ವೃತ್ತದ ಬಾಡಿಗೆ ಮನೆಯಲ್ಲಿ ಸಂಸ್ಥೆಯನ್ನು ಚಿಕ್ಕ ರೀತಿಯಲ್ಲಿ ಆರ್​ಎಸ್​ಎಸ್ ಪ್ರೇರಣೆಯಿಂದ ಪರಿಷತ್ ನಾಲ್ಕೈದು ಜನರ ತಂಡ ಕೂಡಿ ಆರಂಭಿಸಿತ್ತು. ಸ್ವಸ್ಥ ಸುಸ್ಥಿರ ಸಮಾಜದ ಉದ್ದೇಶದಿಂದ ಯೋಗ ದಿನಾಚರಣೆಯನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ" ಎಂದು ನುಡಿದರು.

ಸಾವಿರಾರು ಯೋಗಪಟುಗಳು ಯೋಗಾಸನ ಮಾಡಿ ಯೋಗ ದಿನದ ಮಹತ್ವ ಸಾರಿದರು.

ಇದನ್ನೂ ಓದಿ:ಜನರಲ್ಲಿ ಹೆಚ್ಚುತ್ತಿದೆ ಯೋಗಾಸಕ್ತಿ: ಬೆಂಗಳೂರಿನಲ್ಲಿವೆ ಸಾವಿರಾರು ಯೋಗ ಅಕಾಡೆಮಿಗಳು - Yoga Academies In Bengaluru

Last Updated : Jun 21, 2024, 5:18 PM IST

ABOUT THE AUTHOR

...view details