ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಘಟಾನುಘಟಿಗಳಿಂದ ತಮ್ಮದೇ ಪಕ್ಷದ ಶಾಸಕರ ಖರೀದಿಗೆ ಪ್ರಯತ್ನ: ಬಿ.ವೈ. ವಿಜಯೇಂದ್ರ

ಸಿದ್ದರಾಮಯ್ಯನವರೇ, ನಿಮ್ಮ ಅಕ್ಕಪಕ್ಕ ಇರುವ ಹಿರಿಯ ಸಚಿವರಿಗೆ ತಾವು ಭಯ ಪಡಬೇಕಿದೆ. ಬಿಜೆಪಿ ಬಗ್ಗೆ ಆತಂಕ ಬೇಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ (ETV Bharat)

By ETV Bharat Karnataka Team

Published : 4 hours ago

ಬೆಂಗಳೂರು: ಮೊನ್ನೆ ನಡೆದ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಹಿನ್ನಡೆ ಆಗುವುದಾಗಿ ಖಾತ್ರಿಯಾಗಿ, ಕಾಂಗ್ರೆಸ್ಸಿನ ಘಟಾನುಘಟಿಗಳು ಇವತ್ತು ಸಾವಿರಾರು ಕೋಟಿಯೊಂದಿಗೆ ತಮ್ಮದೇ ಪಕ್ಷದ ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ ಎಂಬ ಮಾಹಿತಿ ನಮಗೂ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಸ್ಫೋಟಕ ಹೇಳಿಕೆ ನೀಡಿದರು.

ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಡಳಿತದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರಿಗೂ ಈ ಮಾಹಿತಿ ಸಿಕ್ಕಿದೆ. ಹಾಗಾಗಿ, ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಆರೋಪ ಮಾಡಲು ಸಾಧ್ಯವಾಗದೇ ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಶಾಸಕರ ಖರೀದಿ ವಿಚಾರಕ್ಕೆ ಬರುವ ದಿನಗಳಲ್ಲಿ ಕಾಲವೇ ಉತ್ತರ ಕೊಡಲಿದೆ ಎಂದರು.

ಬಿ.ವೈ. ವಿಜಯೇಂದ್ರ (ETV Bharat)

ರಾಜೀನಾಮೆ ಕೊಡುವ ಕಾಲ ಸನ್ನಿಹಿತವಾಗಿದೆ ಎಂಬುದು ಸ್ವತಃ ಸಿದ್ದರಾಮಯ್ಯ ಅವರಿಗೆ ಮನವರಿಕೆ ಆಗಿದೆ. ಹಾಗಾಗಿ ಬಿಜೆಪಿ ವಿರುದ್ಧ ಈ ರೀತಿ ಆರೋಪ, ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಯಾವತ್ತು ರಾಜೀನಾಮೆ ಕೊಡುತ್ತಾರೆ? ಯಾರು ಹೊಸ ಸಿಎಂ ಎಂಬುದೇ ಪ್ರಶ್ನೆ. ಕಾಂಗ್ರೆಸ್ ಪಕ್ಷದೊಳಗಡೆ ಕುದುರೆ ವ್ಯಾಪಾರ ನಡೆದಿದೆ. ಬಿಜೆಪಿಯಲ್ಲಿ ಇರುವುದು ಕೇವಲ 66 ಶಾಸಕರು ಮಾತ್ರ, ಆ ಪ್ರಶ್ನೆ ಉದ್ಭವಿಸುವುದಿಲ್ಲ. ಸಿದ್ದರಾಮಯ್ಯನವರೇ, ನಿಮ್ಮ ಅಕ್ಕಪಕ್ಕ ಇರುವ ಹಿರಿಯ ಸಚಿವರಿಗೆ ತಾವು ಭಯ ಪಡಬೇಕಿದೆ. ಬಿಜೆಪಿ ಬಗ್ಗೆ ಆತಂಕ ಬೇಕಿಲ್ಲ ಎಂದು ತಿರುಗೇಟು ನೀಡಿದರು.

ಅತಿ ಶೀಘ್ರದಲ್ಲೇ ಸಿಎಂ ರಾಜೀನಾಮೆ:ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ವಿಚಾರದಲ್ಲಿ ಬದಲಾವಣೆ ಆಗುವುದಿಲ್ಲ. ಮಹಾರಾಷ್ಟ್ರ ಚುನಾವಣೆ ಫಲಿತಾಂಶದ ಬಳಿಕ ಯಾವಾಗ ಬೇಕಿದ್ದರೂ ತೀರ್ಮಾನ ಆಗಲಿದೆ. ಸಿದ್ದರಾಮಯ್ಯ ಅವರು ಅತಿ ಶೀಘ್ರದಲ್ಲೇ ರಾಜೀನಾಮೆ ನೀಡುತ್ತಾರೆ ಎಂದು ಭವಿಷ್ಯ ನುಡಿದರು.

ವಾಸ್ತವಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿ ಸ್ವತಃ ಮುಖ್ಯಮಂತ್ರಿಗಳು, ಅವರ ಕುಟುಂಬವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಿದ್ದರಾಮಯ್ಯ ಅವರಿಗೆ ತಮ್ಮ ಮುಖ್ಯಮಂತ್ರಿ ಕುರ್ಚಿ ಅಲ್ಲಾಡುತ್ತಿದೆ ಎಂದು ಮನವರಿಕೆಯಾಗಿದೆ. ಕಾಂಗ್ರೆಸ್ಸಿನ ಒಳಗಡೆ ಇವತ್ತು ನಾಲ್ಕಾರು ಜನ ಕಾಂಗ್ರೆಸ್ಸಿನ ಹಿರಿಯ ಮುಖಂಡರು ಹೇಗಾದರೂ ಮಾಡಿ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ಮುಂದಾಗಿದ್ದಾರೆ. ಹೊರಗಡೆಯಿಂದ ಬಂದವರಿಗೆ 5 ವರ್ಷ ಅವಕಾಶ ಕೊಟ್ಟಿದ್ದು, ಈಗ ಮತ್ತೆ 2 ವರ್ಷವಾಗಿದೆ ಎಂಬ ಭಾವನೆ ಇದೆ ಎಂದರು.

3 ಕ್ಷೇತ್ರಗಳಲ್ಲೂ ಎನ್‍ಡಿಎ ಗೆದ್ದು ಹೊಸ ಇತಿಹಾಸ ಸೃಷ್ಟಿ: ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಉಪಚುನಾವಣೆಯಲ್ಲಿ ಎನ್‍ಡಿಎ ಗೆಲ್ಲಲಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ಭ್ರಮೆಯಲ್ಲಿತ್ತು. ಆದರೆ, ಅಲ್ಲಿ ಎನ್‍ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರು ಗೆದ್ದೇ ಗೆಲ್ಲುವ ವಾತಾವರಣ ಇದೆ. ಅದೇ ರೀತಿ ಸಂಡೂರಿನಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿನ ವಿಶ್ವಾಸ ಇದೆ. ಶಿಗ್ಗಾಂವಿಯಲ್ಲೂ ಭರತ್ ಬೊಮ್ಮಾಯಿ ಅವರು ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ. 3 ಕ್ಷೇತ್ರಗಳಲ್ಲೂ ಬಿಜೆಪಿ - ಎನ್‍ಡಿಎ ಗೆದ್ದು ಹೊಸ ಇತಿಹಾಸ ಸೃಷ್ಟಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಅಧಿವೇಶದ ವೇಳೆ ರೈತರ ಬೃಹತ್ ಪ್ರತಿಭಟನೆ: ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಒಟ್ಟಾರೆಯಾಗಿ ಎರಡು ಹಂತದಲ್ಲಿ ಹೋರಾಟಕ್ಕೆ ನಿರ್ಧರಿಸಿದ್ದೇವೆ. ಅದರ ಪ್ರಕಾರ 3 ತಂಡಗಳ ರಚನೆ ಮಾಡಿದ್ದೇವೆ. ರೈತರ ಪರವಾಗಿ ಹೋರಾಟಕ್ಕೆ ಮುಜುಗರ ಯಾಕೆ?. ಅದರ ಬಗ್ಗೆ ನಮ್ಮ ತಕರಾರಿಲ್ಲ. ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಅಯೋಗ್ಯತನ ಪ್ರದರ್ಶಿಸುತ್ತಿದೆ ಎಂದರು.

ರೈತರ ಜಮೀನು ಕಿತ್ತುಕೊಳ್ಳುತ್ತಿದ್ದು, ರಾಜ್ಯದ ರೈತರು ಆತಂಕದಲ್ಲಿದ್ದಾರೆ. ಮಠಮಾನ್ಯಗಳ ಜಮೀನು, ದೇವಸ್ಥಾನಗಳ ಜಮೀನನ್ನು ಕಿತ್ತುಕೊಳ್ಳಲಾಗುತ್ತಿದೆ. ರೈತರಿಗೆ ನಿರಾಳತೆ ಸಿಗುವುದಿಲ್ಲವೋ ಅಲ್ಲಿನವರೆಗೆ ದೃಢವಾಗಿ ಹೋರಾಟ ಮುಂದುವರೆಯಲಿದೆ. ಎಲ್ಲ ಶಾಸಕರು, ಹಿರಿಯರು, ವಿಧಾನ ಪರಿಷತ್ ಸದಸ್ಯರು, ಕೇಂದ್ರ ಸಚಿವರೂ ಹೋರಾಟದಲ್ಲಿ ಇರಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಫೋಟೋ ಫಿನಿಷ್​​ ರಿಸಲ್ಟ್​​​​​​ ಬರುತ್ತೆ, ಗೆಲ್ಲುವ ವಿಶ್ವಾಸ ಇದೆ: ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್

ABOUT THE AUTHOR

...view details