ಬೆಳಗಾವಿ :ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ರೆಬಲ್ಸ್ ನಾಯಕರು ತೊಡೆ ತಟ್ಟಿದ್ದು, ಮುಂದಿನ ಹೋರಾಟದ ರೂಪುರೇಷೆ ತಯಾರಿ ಕುರಿತು ಇಂದು ಬೆಳಗಾವಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಬಂಡಾಯ ನಾಯಕರ ಈ ಸಭೆ ತೀವ್ರ ಕುತೂಹಲ ಮೂಡಿಸಿದೆ.
ಮೈಸೂರು ಪಾದಯಾತ್ರೆ ಮುಗಿದ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದ್ದು, ಮೈಸೂರು ಪಾದಯಾತ್ರೆಯಿಂದ ದೂರ ಉಳಿದಿದ್ದ ಬಿಜೆಪಿ ನಾಯಕರು ಬೆಳಗಾವಿ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ಸಭೆ ನಡೆಸಿದರು.
ಸಭೆಯಲ್ಲಿ ಪ್ರಮುಖವಾಗಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ. ಪಿ ಹರೀಶ, ಮಾಜಿ ಸಂಸದರಾದ ಜಿ. ಎಂ ಸಿದ್ದೇಶ್ವರ್, ಪ್ರತಾಪ್ ಸಿಂಹ, ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಅರಸಿಕೇರಿ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಎನ್. ಆರ್ ಸಂತೋಷ್ ಸೇರಿ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮೊದಲಿಂದಲೂ ವಿಜಯೇಂದ್ರ ನಾಯಕತ್ವ ಒಪ್ಪದ ಈ ನಾಯಕರು ಹೈಕಮಾಂಡ್ಗೆ ವಿಜಯೇಂದ್ರ ವಿರುದ್ಧ ದೂರು ನೀಡುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆ ಉದ್ದೇಶದಿಂದಲೇ ಮೈಸೂರು ಪಾದಯಾತ್ರೆಯಲ್ಲಿ ಇವರೆಲ್ಲ ಭಾಗಿಯಾಗಿರಲಿಲ್ಲ. ಇನ್ನು ಗಣೇಶ ಚತುರ್ಥಿ ಬಳಿಕ ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ಕೂಡಲಸಂಗಮದಿಂದ ಬಳ್ಳಾರಿವರೆಗೂ ಪಾದಯಾತ್ರೆ ಆರಂಭಿಸುವುದು ಬಹುತೇಕ ಅಂತಿಮವಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಯಡಿಯೂರಪ್ಪ ವಿರೋಧಿ ಬಣದ ಮತ್ತಷ್ಟು ನಾಯಕರನ್ನು ಸೇರಿಸಿ ಸಭೆ ಮಾಡುವ ಬಗ್ಗೆಯೂ ಪ್ಲಾನ್ ರೂಪಿಸಿದ್ದಾರೆ.
ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾಧ್ಯಮಗಳ ಜೊತೆಗೆ ಮಾತನಾಡಿ, 'ಇದು ಅತೃಪ್ತರ ಅಥವಾ ಭಿನ್ನಮತಿಯರ ಸಭೆ ಅಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾವು ಹೀನಾಯವಾಗಿ ಸೋತಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿಸಿದಷ್ಟು ಆಗದಿದ್ದರೂ ಸ್ವಲ್ಪ ಮಟ್ಟಿಗೆ ಸುಧಾರಣೆ ಆಗಿದೆ. ಹಾಗಾಗಿ, ಬಿಜೆಪಿ ಪಕ್ಷದ ಬಲವರ್ಧನೆ ದೃಷ್ಟಿಯಿಂದ ಪಕ್ಷದಲ್ಲಿನ ದೋಷಗಳನ್ನು ಸರಿಪಡಿಸಿಕೊಂಡು ಪಕ್ಷ ಬಲಪಡಿಸಲು ಸಭೆಯಲ್ಲಿ ಚರ್ಚಿಸಲಾಗಿದೆ' ಎಂದರು.
ಮುಖ್ಯವಾಗಿ ವಾಲ್ಮೀಕಿ ನಿಗಮದ ಹಣ ದುರುಪಯೋಗ ಮತ್ತು ಎಸ್ಸಿಪಿ, ಟಿಎಸ್ಪಿ ಮೀಸಲಿಟ್ಟಿರುವ ಹಣವನ್ನು ತಮ್ಮ ಗ್ಯಾರಂಟಿಗಳಿಗೆ ಬಳಸಿರುವ ಬಗ್ಗೆಯೂ ಸುದೀರ್ಘ ಹೋರಾಟ ಕೈಗೆತ್ತಿಕೊಳ್ಳಲು ಇಂದಿನ ಸಭೆಯಲ್ಲಿ ಚರ್ಚಿಸಿದ್ದೇವೆ. ಈ ಎಲ್ಲ ಸಂಗತಿಗಳನ್ನು ಹೈಕಮಾಂಡ್ ಮತ್ತು ರಾಷ್ಟ್ರೀಯ ನಾಯಕತ್ವಕ್ಕೆ ತಿಳಿಸುತ್ತೇವೆ ಎಂದು ಹೇಳಿದರು.