ಕರ್ನಾಟಕ

karnataka

ETV Bharat / state

ಇಂದಿನಿಂದ ಜಂಟಿ ಅಧಿವೇಶನ ಆರಂಭ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸದನದಲ್ಲಿ ಹೋರಾಟಕ್ಕೆ ಬಿಜೆಪಿ ಸಜ್ಜು - ವಿಧಾನ ಮಂಡಲ ಜಂಟಿ ಅಧಿವೇಶನ

ಸೋಮವಾರದಿಂದ ಜಂಟಿ ಅಧಿವೇಶನ ಆರಂಭಗೊಳ್ಳಲಿದ್ದು, ಸದನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಸಜ್ಜಾಗಿದೆ.

ನಾಳೆಯಿಂದ ಜಂಟಿ ಅಧಿವೇಶನ ಆರಂಭ
ನಾಳೆಯಿಂದ ಜಂಟಿ ಅಧಿವೇಶನ ಆರಂಭ

By ETV Bharat Karnataka Team

Published : Feb 11, 2024, 10:17 PM IST

Updated : Feb 12, 2024, 7:32 AM IST

ಬೆಂಗಳೂರು:ಇಂದಿನಿಂದ ವಿಧಾನ ಮಂಡಲ ಜಂಟಿ ಅಧಿವೇಶನ ಆರಂಭಗೊಳ್ಳುತ್ತಿದ್ದು, ಆಡಳಿತರೂಢ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. 40 ಪರ್ಸೆಂಟ್ ಕಮೀಷನ್ ಆರೋಪ ಮತ್ತು ಬರ ಪರಿಹಾರದ ಹಣ ಬಿಡುಗಡೆ ಮಾಡದಿರುವ ವಿಷಯವನ್ನೇ ಪ್ರಮುಖವಾಗಿರಿಸಿಕೊಂಡು ಸರ್ಕಾರದ ವಿರುದ್ಧ ಸದನದಲ್ಲಿ ಹೋರಾಟ ನಡೆಸಲಿದೆ.

ಮೊದಲ ದಿನ ಸೋಮವಾರ ರಾಜ್ಯಪಾಲರ ಭಾಷಣ ನಡೆಯಲಿದ್ದು, ಮಂಗಳವಾರದಿಂದ ಕಲಾಪಗಳು ನಡೆಯಲಿವೆ. ಮೊದಲ ದಿನದಿಂದಲೇ ಸರ್ಕಾರದ ವಿರುದ್ಧ ಕಮೀಷನ್ ಆರೋಪದ ಪ್ರಸ್ತಾಪ ಮಾಡಿ ಸರ್ಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆ ಇದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ಸರ್ಕಾರವೂ 40 ಪರ್ಸೆಂಟ್ ಕಮೀಷನ್ ಸರ್ಕಾರ ಎನ್ನುವ ಆರೋಪ ಮಾಡಿದ್ದು, ಇದನ್ನೇ ಸದನದಲ್ಲಿ ಪ್ರಸ್ತಾಪಿಸಿ ಭ್ರಷ್ಟಾಚಾರದ ಆರೋಪ ಕುರಿತು ಚರ್ಚೆಗೆ ಪಟ್ಟುಹಿಡಿಯುವ ಸಾಧ್ಯತೆಗಳಿವೆ.

ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿದ್ದ 40 ಪರ್ಸೆಂಟ್ ಆರೋಪದ ರೀತಿಯಲ್ಲಿಯೇ ಇದೀಗ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪ ವಿಚಾರದಲ್ಲಿ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಹಾಗು ವಿಧಾನ ಪರಿಷತ್​ನಲ್ಲಿ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಹೋರಾಟ ನಡೆಸಲಿವೆ.

ಇದರ ಜೊತೆಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಸದನದಲ್ಲಿಯೇ ತಕ್ಕ ಉತ್ತರ ನೀಡಲು ಬಿಜೆಪಿ ನಾಯಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಹಿರಿಯ ನಾಯಕ ಬಸವರಾಜ ಬೊಮ್ಮಾಯಿ ಈ ವಿಷಯದಲ್ಲಿ ಅಂಕಿ ಅಂಶಗಳನ್ನು ಸದನದಲ್ಲಿ ಪ್ರಸ್ತಾಪಿಸಿ ರಾಜ್ಯ ಸರ್ಕಾರದ ಟೀಕೆಗೆ ತಿರುಗೇಟು ನೀಡಲಿದ್ದು, ಅನುದಾನ ಹಂಚಿಕೆ ವ್ಯವಸ್ಥೆ, ಈವರೆಗೆ ಅನುಸರಿಸಿಕೊಂಡು ಬಂದಿರುವ ಪದ್ಧತಿ, ಹಿಂದಿನ ಕಾಂಗ್ರೆಸ್ ಸರ್ಕಾರ ಮತ್ತು ಈಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿರುವ ಅನುದಾನದ ವಿಷಯಗಳನ್ನು ಪ್ರಸ್ತಾಪಿಸಿ ದೆಹಲಿಯಲ್ಲಿ ಕಾಂಗ್ರೆಸ್ ನಡೆಸಿದ್ದ ಪ್ರತಿಭಟನೆಗೆ ತಕ್ಕ ಉತ್ತರ ನೀಡಲು ಯತ್ನಿಸಲಿದ್ದಾರೆ.

ಪ್ರಮುಖವಾಗಿ ಬರ ಪರಿಹಾರದ ವಿಚಾರದಲ್ಲಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟಕ್ಕೆ ಬಿಜೆಪಿ ಸಿದ್ಧತೆ ನಡೆಸಿದೆ. ಈ ಹಿಂದೆ ಬಿಜೆಪಿ ಸರ್ಕಾರದ ವೇಳೆ ಬರ ಹಾಗೂ ನೆರೆ ಬಂದಾಗ ತಕ್ಷಣವೇ ಕೇಂದ್ರದ ನೆರವು ಕಾಯದೆ ರಾಜ್ಯ ಸರ್ಕಾರವೇ ಪರಿಹಾರದ ಹಣ ಬಿಡುಗಡೆ ಮಾಡಿತ್ತು. ಹಾಗೂ, ನಂತರ ಕೇಂದ್ರದಿಂದ ಬಂದಾಗ ಖಜಾನೆಗೆ ಪಾವತಿಸಿಕೊಂಡು ಸರಿದೂಗಿಸಿ ಆಡಳಿತ ನಡೆಸಿದ್ದನ್ನು ವಿವರಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದೆ.

ಈ ಕುರಿತು ಮಾಹಿತಿ ನೀಡಿರುವ ವಿಧಾನ ಪರಿಷತ್ ಪ್ರತಿಪಕ್ಷ ಸಚೇತಕ ರವಿಕುಮಾರ್, ''ಕಾಂಗ್ರೆಸ್ ಸರ್ಕಾರದ ವಿರುದ್ಧ ಸದನದಲ್ಲಿ ಹೋರಾಟಕ್ಕೆ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಬರ ಪರಿಹಾರ ವಿತರಣೆ ವಿಳಂಬ, ಆಡಳಿತ ವೈಫಲ್ಯ, ಕೇಂದ್ರದ ವಿರುದ್ಧದ ನಿರಾಧಾರ ಆರೋಪ ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುತ್ತದೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಗ್ಯಾರಂಟಿ ಯೋಜನೆಗಳನ್ನು ಎಲ್ಲಾ ವರ್ಗದ ಜನರಿಗೆ ತಲುಪಿಸುತ್ತೇವೆ : ಸಂತೋಷ್ ಲಾಡ್

Last Updated : Feb 12, 2024, 7:32 AM IST

ABOUT THE AUTHOR

...view details