ಕರ್ನಾಟಕ

karnataka

ETV Bharat / state

ರಾಜ್ಯ ಬಿಜೆಪಿ ನಾಯಕರ ಜೊತೆ ನಡ್ಡಾ ಚರ್ಚೆ: ಅಂತ್ಯವಾಗುವುದೇ ಬಣ ರಾಜಕೀಯ? - JP NADDA VISITS KARNATAKA

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬಣ ರಾಜಕೀಯ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ರಾಜ್ಯದ ನಾಯಕರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.

JP NADDA VISITS KARNATAKA
ಜೆ.ಪಿ.ನಡ್ಡಾ, ಬಿ.ವೈ.ವಿಜಯೇಂದ್ರ, ಆರ್​.ಅಶೋಕ್ (ETV Bharat)

By ETV Bharat Karnataka Team

Published : Jan 3, 2025, 8:20 PM IST

ಬೆಂಗಳೂರು:ರಾಜ್ಯ ಬಿಜೆಪಿಯಲ್ಲಿರುವ ಬಣ ರಾಜಕೀಯವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ಬಿಜೆಪಿ ನಾಯಕರುಗಳ ಜೊತೆ ಶುಕ್ರವಾರ ಚರ್ಚೆ ನಡೆಸಿದ್ದಾರೆ.

ಬೆಂಗಳೂರಿಗೆ ಆಗಮಿಸಿದ್ದ ಜೆ.ಪಿ.ನಡ್ಡಾ, ಬಿಜೆಪಿಯ ಬಣ ರಾಜಕೀಯಕ್ಕೆ ಅಂತ್ಯ ಹಾಡಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಹುಡುಕಲು ಏನೆಲ್ಲಾ ಮಾಡಬೇಕು, ಪಕ್ಷದ ಮಟ್ಟದಲ್ಲಿ ಯಾವ ತೀರ್ಮಾನಗಳು ಆಗಬೇಕು, ಯಾವ ರೀತಿ ಪಕ್ಷದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂಬೆಲ್ಲ ವಿಚಾರವಾಗಿ ರಾಜ್ಯ ಬಿಜೆಪಿಯ ಪ್ರಮುಖ ಮುಖಂಡರ ಜತೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಬಿ.ವೈ.ವಿಜಯೇಂದ್ರ, ಜೆ.ಪಿ.ನಡ್ಡಾ (ETV Bharat)

ಕುಮಾರಕೃಪಾ ಗೆಸ್ಟ್ ಹೌಸ್​​ನಲ್ಲಿ ಜೆ.ಪಿ. ನಡ್ಡಾ ಅವರನ್ನು ರಾಜ್ಯ ಬಿಜೆಪಿಯ ಹಲವು ನಾಯಕರು ಭೇಟಿ ಮಾಡಿ, ಪಕ್ಷದಲ್ಲಿನ ಬಣ ರಾಜಕೀಯದಿಂದ ಪಕ್ಷ ಸಂಘಟನೆಗೆ ತೊಂದರೆಯಾಗಿದೆ. ಪಕ್ಷದ ವರ್ಚಸ್ಸಿಗೂ ಧಕ್ಕೆಯಾಗಿದೆ. ಇದಕ್ಕೆ ಪರಿಹಾರ ದೊರಕಿಸಿ ಎಂಬ ಮನವಿ ಮಾಡಿದ್ದಾರೆ. ನಾಯಕರುಗಳ ಅಹವಾಲುಗಳನ್ನು ಆಲಿಸಿರುವ ಜೆ.ಪಿ.ನಡ್ಡಾ, ಬಣ ರಾಜಕೀಯಕ್ಕೆ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ಜೆ.ಪಿ.ನಡ್ಡಾ ಅವರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕರುಗಳಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರು ಭೇಟಿ ಮಾಡಿದ್ದರು. ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲೇ ನಡ್ಡಾ ಅವರು ಈ ನಾಯಕರುಗಳ ಜೊತೆ ಕೆಲ ಸಮಯ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು ಎಂದು ಗೊತ್ತಾಗಿದೆ.

ಭಿನ್ನ ನಾಯಕರ ವಿರುದ್ಧ ದೂರು:ಈ ಚರ್ಚೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಇತರ ನಾಯಕರುಗಳು, ಪ್ರತ್ಯೇಕ ವಕ್ಫ್ ಹೋರಾಟ ನಡೆಸುತ್ತಿರುವ ಭಿನ್ನ ನಾಯಕರ ವಿರುದ್ಧ ದೂರು ನೀಡಿದ್ದು, ಭಿನ್ನರ ಪ್ರತ್ಯೇಕ ಹೋರಾಟಗಳಿಂದ ಪಕ್ಷ ಸಂಘಟನೆಗೆ ಅಡ್ಡಿಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇಂದು ಬೆಳಗ್ಗೆ ಸಹ ಬಿಜೆಪಿಯ ಹಲವು ನಾಯಕರು ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ರಾಜ್ಯ ಬಿಜೆಪಿಯಲ್ಲಿನ ಬಣ ಕಚ್ಚಾಟಕ್ಕೆ ಅಂತ್ಯ ಹಾಡುವಂತೆ ಮನವಿ ಮಾಡಿದ್ದು, ಎಲ್ಲದಕ್ಕೂ ಶೀಘ್ರದಲ್ಲೇ ಪರಿಹಾರ ದೊರಕಿಸುವ ಭರವಸೆಯನ್ನು ನಡ್ಡಾ ಅವರು ಈ ನಾಯಕರುಗಳಿಗೆ ನೀಡಿದ್ದಾರೆ ಎನ್ನಲಾಗಿದೆ.

ಜೆ.ಪಿ.ನಡ್ಡಾರನ್ನು ಭೇಟಿ ಮಾಡದ ಭಿನ್ನ ನಾಯಕರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದರೂ, ರಾಜ್ಯ ಬಿಜೆಪಿಯಲ್ಲಿನ ಭಿನ್ನ ನಾಯಕರು ನಡ್ಡಾ ಅವರನ್ನು ಭೇಟಿ ಮಾಡಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಕ್ಕೆ ಬಂದಿದ್ದರೂ ಭಿನ್ನ ನಾಯಕರು ಮಾತ್ರ ಅವರನ್ನು ಭೇಟಿ ಮಾಡದಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಬಿಜೆಪಿಯ ಎಲ್ಲ ಪ್ರಮುಖ ನಾಯಕರುಗಳು ಭೇಟಿ ಮಾಡಿದ್ದರೂ ಭಿನ್ನರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಗೊಳಿ, ಅರವಿಂದ ಬೆಲ್ಲದ್, ಕುಮಾರ್ ಬಂಗಾರಪ್ಪ ಸೇರಿದಂತೆ ಯಾವುದೇ ನಾಯಕರು ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿಲ್ಲ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದಾರೆ. ಪಕ್ಷದ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಬಂದಿಲ್ಲ. ಹಾಗಾಗಿ ನಾವು ಭೇಟಿ ಮಾಡಿಲ್ಲ. ನಾಳೆ ಬಳ್ಳಾರಿಯ ಕಂಪ್ಲಿಯಲ್ಲಿ ವಕ್ಫ್ ವಿರುದ್ಧದ ಹೋರಾಟವಿದೆ. ಅಲ್ಲಿಗೆ ನಾವೆಲ್ಲಾ ತೆರಳಿದ್ದೇವೆ. ಈ ಹೋರಾಟದ ನಂತರ ಈ ತಿಂಗಳ 7 ಇಲ್ಲವೇ 8 ರಂದು ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತೇವೆ. ಹಾಗಾಗಿ, ಇಂದು ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿಲ್ಲ ಎಂದು ಭಿನ್ನರ ಗುಂಪಿನ ನಾಯಕರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಲೆ ಏರಿಕೆಗೆ ವರ್ಷ ಪೂರ್ತಿ ತಯಾರಾಗಿ ಎಂದು ಸರ್ಕಾರದಿಂದ ಜನರಿಗೆ ಸಂದೇಶ: ಹೆಚ್​ಡಿಕೆ

ABOUT THE AUTHOR

...view details