ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದವರು ನಿರ್ವಹಿಸುತ್ತಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್‌ನಿಂದ ನಡೆಸಲ್ಪಡುವ ಕಲಬುರಗಿಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಅಂತಾರಾಷ್ಟ್ರೀಯ ಸಂಸ್ಥೆಗೆ 19 ಎಕರೆ ಸರ್ಕಾರಿ ಭೂಮಿಯನ್ನು ಉಚಿತವಾಗಿ ನೀಡಲಾಗಿದೆ ಎಂದು ಹೊಸ ದಾಖಲೆಗಳು ಬಹಿರಂಗಪಡಿಸುತ್ತವೆ ಎಂದು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿಯ ಸದಸ್ಯ, ಗೃಹ ವ್ಯವಹಾರಗಳ ಸಲಹಾ ಸಮಿತಿಯ ಸದಸ್ಯರೂ ಆಗಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಗಂಭೀರ ಆರೋಪ ಮಾಡಿದ್ದು, ತನಿಖೆಗೆ ಒಳಪಡುವಂತೆ ಖರ್ಗೆ ಕುಟುಂಬವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ದಾಖಲೆಗಳ ಪ್ರತಿಯೊಂದಿಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು,
ಸಿದ್ಧಾರ್ಥ ಟ್ರಸ್ಟ್‌ನ ಟ್ರಸ್ಟಿಗಳಲ್ಲಿ ಖರ್ಗೆ ಅವರ ಪತ್ನಿ, ಅಳಿಯ ಮತ್ತು ಇಬ್ಬರು ಪುತ್ರರು ಸೇರಿದ್ದಾರೆ. ಪಾಲಿ ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ, ಖರ್ಗೆಯವರ ಅಳಿಯ ಮತ್ತು ಕಲಬುರಗಿ ಹಾಲಿ ಸಂಸದ. ಇತ್ತೀಚೆಗೆ, ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಬೆಂಗಳೂರು ಸಮೀಪದ ಏರೋಸ್ಪೇಸ್ ಪಾರ್ಕ್‌ನಲ್ಲಿ 5 ಎಕರೆ ನಾಗರಿಕ ಸೌಲಭ್ಯಗಳನ್ನು ನೀಡಿರುವುದು ಬೆಳಕಿಗೆ ಬಂದಿತ್ತು ಎಂದರು.
ಮಾರ್ಚ್ 2014ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 16 ಎಕರೆ ಸರ್ಕಾರಿ ಭೂಮಿಯನ್ನು 30 ವರ್ಷಗಳ ಕಾಲ ಪಾಲಿ ಸಂಸ್ಥೆಗೆ ಗುತ್ತಿಗೆಗೆ ನೀಡಿತ್ತು. ಒಂದೆರಡು ವರ್ಷಗಳಲ್ಲಿ 16 ಎಕರೆ ಲೀಸ್ ಆಸ್ತಿಗೆ 3 ಎಕರೆ ಹೆಚ್ಚುವರಿ ಜಮೀನು ಸೇರ್ಪಡೆಯಾಯಿತು ಮತ್ತು ಅಂತಿಮವಾಗಿ, ಮಾರ್ಚ್ 2017 ರಲ್ಲಿ ಎಲ್ಲಾ 19 ಎಕರೆಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಖರ್ಗೆ ಕುಟುಂಬ ನಡೆಸುವ ಸಂಸ್ಥೆಗೆ ಉಚಿತವಾಗಿ ವರ್ಗಾಯಿಸಿತು. ಒಂದು ಪ್ರಮುಖ ಸಂಗತಿಯೆಂದರೆ ಖರ್ಗೆಯವರ ಮಗ ಪ್ರಿಯಾಂಕ್ ಖರ್ಗೆ ಅವರು ಭೂಮಿ ಮಂಜೂರು ಮಾಡಿದಾಗ ಅವರು ಈಗಿನಂತೆ ಆಗಿನ ರಾಜ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು ಎಂದು ಆರೋಪಿಸಿದ್ದಾರೆ.