ಬೆಂಗಳೂರು: ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಖರ್ಚು ಮಾಡದೇ ಇರುವ ಕಾರಣದಿಂದಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 5300 ಕೋಟಿ ಅನುದಾನ ಬಿಡುಗಡೆ ಆಗಿಲ್ಲ. ಈ ವಿಷಯವನ್ನು ಮುಚ್ಚಿಟ್ಟು ಅನುದಾನ ಕೊಡುತ್ತಿಲ್ಲ ಎಂದು ರಾಜ್ಯ ಸರ್ಕಾರವು ಕೇಂದ್ರವನ್ನು ಟೀಕಿಸುತ್ತಿದೆ ಎಂದು ಕೈ ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯ ನವೀನ್ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ಕಲಾಪದಲ್ಲಿ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಮಾತನಾಡಿದ ಅವರು, ಎಐಬಿಪಿ ಕೇಂದ್ರ ಪ್ರಾಯೋಜಿತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದು ದೇವೇಗೌಡರು. ಆಗ ಕೇಂದ್ರದ ಪಾಲು ಶೇ.75, ರಾಜ್ಯದ ಪಾಲು ಶೇ.25 ಅಂತಾ ಇತ್ತು. 2012 ರಲ್ಲಿ ಯುಪಿಎ ಸರ್ಕಾರ ಹೊಸ ನಿಯಮ ತಂದು ಕೇಂದ್ರ ಮತ್ತು ರಾಜ್ಯದ ಪಾಲನ್ನು 50-50 ರಂತೆ ಮಾರ್ಪಡಿಸಿತು. ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ರಾಜ್ಯಗಳು ಮೊದಲೇ ತಮ್ಮ ಪಾಲಿನ ಹಣ ಖರ್ಚು ಮಾಡಿದ್ದರೆ ಮಾತ್ರ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ. 50 ಹಣ ಬಿಡುಗಡೆ ಮಾಡುವ ಷರತ್ತು ಹಾಕಿದರು. ಈಗ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ 5300 ಕೋಟಿ ನಮಗೆ ಬರಬೇಕಾದ ಹಣ ಎನ್ನುತ್ತಿದ್ದಾರೆಯೇ ಹೊರತು ರಾಜ್ಯ ಸರ್ಕಾರದ ವೆಚ್ಚದ ಪ್ರಮಾಣಪತ್ರ ಕೇಂದ್ರದ ಮುಂದೆ ಮಂಡನೆ ಮಾಡುವ ಕೆಲಸ ಆಗಿಲ್ಲ. ಹಾಗಾಗಿ, ಹಣ ಬಿಡುಗಡೆ ಆಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಮೊದಲು ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಖರ್ಚು ಮಾಡಿದರೆ ನಂತರ ಕೇಂದ್ರ ತನ್ನ ಪಾಲಿನ ಹಣ ಬಿಡುಗಡೆ ಮಾಡಲಿದೆ ಎಂದು ಕೇಂದ್ರದ ಮೇಲೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಆರೋಪದ ಕುರಿತು ಸ್ಪಷ್ಟವಾಗಿ ವಿವರಣೆ ನೀಡಿ ಕಾಂಗ್ರೆಸ್ಗೆ ತಿರುಗೇಟು ನೀಡಿದರು.
ನಾನು ಸಿಎಂ ರೀತಿ ಜನರ ಮುಂದೆ ಹೋಗಿ ಭಾಷಣ ಮಾಡಲ್ಲ. ಎಲ್ಲ ದಾಖಲೆ ನನ್ನ ಬಳಿ ಇವೆ. ಬೇಕಾದರೆ ಸದನದಲ್ಲಿ ಬಿಡುಗಡೆ ಮಾಡಲು ಸಿದ್ಧ. ಚಿತ್ರದುರ್ಗ ಜಿಲ್ಲೆಗೆ 2012 ರಲ್ಲಿ ಮೆಡಿಕಲ್ ಕಾಲೇಜನ್ನು ಬಿಜೆಪಿ ಸರ್ಕಾರದಲ್ಲಿ ಕೊಡಲಾಯಿತು. ಆದರೆ, 2013-18 ರ ವರೆಗೆ ಕಡತ ಹಿಂದೆ ಹಾಕಿದರು. ಬೇರೆ ಜಿಲ್ಲೆಗಳಲ್ಲಿ ಕಾಲೇಜೇ ಆರಂಭವಾದರೂ ನಮ್ಮ ಕಡತ ಬಾಕಿ ಇತ್ತು. ನಮ್ಮ ಸರ್ಕಾರ ಮತ್ತೆ ಬಂದ ನಂತರ ಕಡತ ಮುಂದಕ್ಕೆ ತರಿಸಲಾಯಿತು. ಆದರೆ, 500 ಕೋಟಿ ಯೋಜನೆಗೆ ಇವರು ಬಿಡುಗಡೆ ಮಾಡಿದ್ದು 30 ಕೋಟಿ ಮಾತ್ರ, ಇಷ್ಟರಲ್ಲಿ ಇದು ಯಾವಾಗ ಮುಗಿಯಬೇಕು? ಇಷ್ಟು ಕಡಿಮೆ ಕೊಟ್ಟರೆ ಯೋಜನೆ ಪ್ರಾರಂಭ ಯಾವಾಗ? ಮುಗಿಯುವುದು ಯಾವಾಗ? ಇಂತಹ ಧೋರಣೆ ಸರಿಯಲ್ಲ. ಇದು ತಪ್ಪು ಎಂದು ಸಿದ್ದರಾಮಯ್ಯ ನಿಲುವನ್ನು ಟೀಕಿಸಿದರು.
ಇವರು ಪೋಸ್ ಕೊಟ್ಟರು, ನಮ್ಮ ತೆರಿಗೆ ನಮ್ಮ ಹಕ್ಕು ಎಂದರು. ಕರ್ನಾಟಕದಿಂದ 4,30,000 ಕೋಟಿ ಹಣವನ್ನು ಕೇಂದ್ರಕ್ಕೆ ಕೊಟ್ಟರೆ 12-13 ಪರ್ಸೆಂಟ್ ಮಾತ್ರ ಕೇಂದ್ರದಿಂದ ಬಂದಿದೆ ಎನ್ನುತ್ತಿದ್ದಾರೆ. ಆದರೆ, ಒಕ್ಕೂಟ ಸ್ಥಿತಿಯಲ್ಲಿನ ಹೊಂದಾಣಿಕೆ ಗೊತ್ತಿಲ್ಲವಾ? ಕೇಂದ್ರದ ಪಾಲು, ರಾಜ್ಯದ ಪಾಲು ಯಾರಿಗೆ ಹೋಗಲಿದೆ ಎನ್ನುವ ತಾಳ್ಮೆ, ಸಮಾಧಾನ ಸಿದ್ದರಾಮಯ್ಯ ಅವರಿಗೆ ಇಲ್ಲವಾ? 14-15ನೇ ಹಣಕಾಸು ಆಯೋಗದ ನಡುವೆ ಇರುವ ವತ್ಯಾಸವನ್ನು ಸಿದ್ದರಾಮಯ್ಯ ಜನರನ್ನು ತಪ್ಪು ಹಾದಿಗೆ ಎಳೆಯುತ್ತಿದ್ದಾರೆ. ರಾಜ್ಯದ ತೆರಿಗೆ ಸಂಗ್ರಹದಲ್ಲಿ ಬೆಂಗಳೂರು ನಗರದ್ದು ಶೇ. 68 ರಷ್ಟು ಪಾಲಿದೆ. ತಾವು ಬಜೆಟ್ನಲ್ಲಿ ಬೆಂಗಳೂರಿಗೆ ಎಷ್ಟು ಕೊಟ್ಟಿದ್ದೀರಿ? ಶೇ.1 ರಷ್ಟೂ ಇಲ್ಲ. ನಾಳೆ ಬೆಂಗಳೂರಿನ ಜನ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಬಂದರೆ ನಮ್ಮ ಕಲ್ಯಾಣ ಕರ್ನಾಟಕದ ಕಥೆ ಏನು? ಎಂದು ಪ್ರಶ್ನಿಸಿ ನಮ್ಮ ತೆರಿಗೆ ನಮ್ಮ ಹಕ್ಕು ಘೋಷಣೆಗೆ ತಿರುಗೇಟು ನೀಡಿದರು.