ಬೆಂಗಳೂರು: ತೆರಿಗೆಯಲ್ಲಿ ವಿನಾಯಿತಿ ನೀಡಿ ಅಥವಾ ದಂಡ ಕಡಿತ ಮಾಡಿ. ಇಲ್ಲವಾದರೆ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಬೀಗ ಹಾಕಿ ಎಂದು ಬಿಜೆಪಿ ಶಾಸಕರ ನಿಯೋಗ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಬೀಗ ಹಾಗೂ ಬೀಗದ ಕೀ ನೀಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆಯು ಕಳೆದ ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳ ಮಾಲೀಕರಿಗೆ ನೋಟಿಸ್ ನೀಡಿದ್ದು, ತೆರಿಗೆ ಪಾವತಿಸದಿದ್ದರೆ ಬೀಗ ಮುದ್ರೆ ಹಾಕಲು ನಿರ್ಧಾರ ಮಾಡಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆೆಯಾಗುತ್ತಿದೆ. ಪಾಲಿಕೆಯ ಈ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಶಾಸಕರ ನಿಯೋಗವು ಆಯುಕ್ತ ತುಷಾರ್ ಗಿರಿನಾಥ್‌ರನ್ನು ಭೇಟಿ ಮಾಡಿ, ಬಾಕಿ ತೆರಿಗೆ ವಸೂಲಿಯನ್ನು ಹಂತ ಹಂತವಾಗಿ ಪಾವತಿಸಲು ಅನುಮತಿ ನೀಡಿ ಎಂದು ಮನವಿ ಪತ್ರ ಸಲ್ಲಿಸಿತು.
ಪಾಲಿಕೆಯು ನಗರದ ನಾಗರಿಕರ ಮೇಲೆ ಬಾಕಿ ತೆರಿಗೆ ವಸೂಲಿ ಹೆಸರಲ್ಲಿ ಯುದ್ಧ ಸಾರಿದ್ದು, ಸ್ವಯಂ ಆಸ್ತಿ ತೆರಿಗೆ ಘೋಷಣೆಯಲ್ಲಿ ದೋಷಪೂರಿತವಾಗಿರುವ ಕಟ್ಟಡಗಳಿಗೆ ದುಪ್ಪಟ್ಟು ದಂಡ, ಬಡ್ಡಿ ಮತ್ತು ಕಾನೂನುಬಾಹಿರವಾಗಿ ಆರೇಳು ವರ್ಷಗಳ ಹಿಂದಿನ ಬಾಕಿಯ ಕಂದಾಯ ವಸೂಲಿ ಮಾಡುವಾಗ ದುಬಾರಿ ದಂಡ ಮತ್ತು ಬಡ್ಡಿಯನ್ನು ವಿಧಿಸುತ್ತಿದೆ. ಈಗಾಗಲೇ ಪರಿಷ್ಕರಣೆಯ ನೆಪದಲ್ಲಿ 76,000 ಮನೆಗಳಿಗೆ ನೋಟಿಸ್ ನೀಡಲಾಗಿದೆ. ಇದರ ತರುವಾಯ ಆಸ್ತಿ ತೆರಿಗೆ ಪಾವತಿಸದ ಹಲವಾರು ಕಟ್ಟಡಗಳಿಗೆ ಬೀಗ ಹಾಕಿ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ನಿಯೋಗ ಅಸಮಾಧಾನ ವ್ಯಕ್ತಪಡಿಸಿದೆ.
ಜನವಿರೋಧಿ ಕ್ರಮದಿಂದ ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿ ಅವರ ವ್ಯಾಪಾರ ಮತ್ತು ಜೀವನವನ್ನು ಹಾಳು ಮಾಡಿ ಅವರ ಹೊಟ್ಟೆಯ ಮೇಲೆ ಹೊಡೆಯುವ ಕ್ರೂರ ವರ್ತನೆಯನ್ನು ಪಾಲಿಕೆಯು ತೋರುತ್ತಿದೆ. ಇವರ ಏಕಪಕ್ಷೀಯ ನೋಟಿಸ್ ವಿರುದ್ಧ ಹಲವಾರು ನಾಗರಿಕರು ನ್ಯಾಯಾಲಯದ ಬಾಗಿಲು ಬಡಿದು ಲಾಯರ್ ಫೀಸ್ಗೆ ವೆಚ್ಚಮಾಡಿ ಮತ್ತಷ್ಟು ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದಿದೆ.