ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ನಗರದ ಖಾಸಗಿ ಹೋಟೆಲ್‌ನಲ್ಲಿಂದು ನಿರ್ದೇಶಕರ ಜೊತೆಗೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ರಮೇಶ ಕತ್ತಿ ರಾಜೀನಾಮೆ ಬಳಿಕ ಮಾಧ್ಯಮಗಳಲ್ಲಿ ವಿಷಯ ಬೇರೆ ಬೇರೆ ಬರುತ್ತಿದೆ. ಎಲ್ಲರಿಗೂ ಸ್ಪಷ್ಟಪಡಿಸುತ್ತಿದ್ದೇವೆ. ಎಲ್ಲರ ಸಹಮತದಿಂದ 2020ರಲ್ಲಿ ಅವರನ್ನು ಅವಿರೋಧ ಆಯ್ಕೆ ಮಾಡಿದ್ದೆವು. ಇನ್ನೊಂದು ವರ್ಷ ಅವಧಿ ಇತ್ತು, ಸ್ವಲ್ಪ ಬಿನ್ನಾಭಿಪ್ರಾಯಗಳಿದ್ದವು. ನಿರ್ದೇಶಕರೆಲ್ಲರೂ ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಮನವಿ ಮಾಡಿಕೊಂಡರು. ಹಾಗಾಗಿ, ನಾವೂ ಸಹ ರಮೇಶ ಕತ್ತಿ ಅವರಿಗೆ ಮನವಿ ಮಾಡಿದೆವು. ಹೀಗಾಗಿ ಹಿರಿಯರು ಹಾಗೂ ನಿರ್ದೇಶಕರ ಗೌರವ ಕೊಟ್ಟು ರಾಜೀನಾಮೆ ನೀಡಿದ್ದಾರೆ ಎಂದರು.
ನಿರ್ದೇಶಕರ ಜೊತೆಗೆ ಸುದ್ದಿಗೋಷ್ಠಿ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ (ETV Bharat) ಅಕ್ಟೋಬರ್ ಅಂತ್ಯದೊಳಗೆ ಹೊಸ ಅಧ್ಯಕ್ಷರ ಆಯ್ಕೆ ಆಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಡಾ.ಪ್ರಭಾಕರ ಕೋರೆ, ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ, ರಮೇಶ ಕತ್ತಿ ಹೀಗೆ ಐವರು ಹಿರಿಯರ ನೇತೃತ್ವದಲ್ಲಿ ಅಧ್ಯಕ್ಷರ ಆಯ್ಕೆ ಮಾಡಲಾಗುವುದು. ರಮೇಶ ಕತ್ತಿ ನೇತೃತ್ವದಲ್ಲಿ 30 ಕೋಟಿ ರೂ. ಲಾಭ ಆಗಿದೆ. ಬ್ಯಾಂಕ್, ರೈತರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಹೊಸ ಅಧ್ಯಕ್ಷರ ಆಯ್ಕೆ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.
ರಮೇಶ ಕತ್ತಿಯವರು ಯಾಕೆ ಬಂದಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, ಹೊಸ ಅಧ್ಯಕ್ಷರ ಆಯ್ಕೆಯಲ್ಲಿ ಅವರು ಇರುತ್ತಾರೆ ಎಂದರು.
ರಮೇಶ ಕತ್ತಿ ವಿರುದ್ಧ ಅಸಮಾಧಾನ ಕೇಳಿ ಬಂದಿರುವುದಕ್ಕೆ, ಸದಸ್ಯತ್ವ ವಿಚಾರದಲ್ಲಿ ನಾವೆಲ್ಲರೂ ಸೇರಿದ್ದೆವು. ಅದಕ್ಕೂ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ. ಎಲ್ಲರೂ ಸೇರಿ ಒಂದು ಸಂಸ್ಥೆ ನಡೆಸುವಾಗ ಭಿನ್ನಾಭಿಪ್ರಾಯ ಇರುತ್ತದೆ. ಬ್ಯಾಂಕ್ ಸರಿ ನಡೆಸಿಲ್ಲ ಎನ್ನುವ ಕಾರಣಕ್ಕೆ ಅವರನ್ನು ಬದಲಾವಣೆ ಮಾಡಿಲ್ಲ. 9 ವರ್ಷ ಅವರು ಬ್ಯಾಂಕ್ ಅಧ್ಯಕ್ಷರಾಗಿದ್ದರು. ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಆದರೆ, ಅದೇ ಕಾರಣಕ್ಕೆ ಅವರು ರಾಜೀನಾಮೆ ಕೊಟ್ಟಿದ್ದಾರೆ ಎನ್ನುವುದು ಸುಳ್ಳು ಎಂದು ಸಮರ್ಥಿಸಿಕೊಂಡರು.
ಹೊಸ ಅಧ್ಯಕ್ಷರು ಒಂದು ವರ್ಷದಲ್ಲಿ ಏನು ಸಾಧನೆ ಮಾಡ್ತಾರೆ ಎಂಬ ಪ್ರಶ್ನೆಗೆ, 6 ತಿಂಗಳಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. 50 ಕೋಟಿ ಲಾಭ ಮಾಡಲು ನಾವು ಪ್ರಯತ್ನಿಸುತ್ತೇವೆ. ಇನ್ನು ನಿಪ್ಪಾಣಿ ಕ್ಷೇತ್ರದಲ್ಲಿ ಸದಸ್ಯತ್ವ ವಿಚಾರದಲ್ಲಿ ಭಿನ್ನಾಭಿಪ್ರಾಯ ಇತ್ತು. ಅದನ್ನು ನಿನ್ನೆಯೂ ಸಹ ಮಾತನಾಡುವಾಗ ನಾನು ಹೇಳಿದ್ದೆ ಎಂದು ಸ್ಪಷ್ಟಪಡಿಸಿದರು.
ರಮೇಶ ಕತ್ತಿ ರಾಜೀನಾಮೆ ಪತ್ರ (ETV Bharat) ನಾನು ಅಧ್ಯಕ್ಷ ಸ್ಥಾನದಿಂದ ಇಳಿದರೆ 400 ಕೋಟಿ ಲಾಸ್ ಆಗುತ್ತೆ ಎಂದು ಹಿಂದೆ ರಮೇಶ ಕತ್ತಿ ಹೇಳಿಕೆ ನೀಡಿದ್ದರ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬಾಲಚಂದ್ರ ಜಾರಕಿಹೊಳಿ, ಯಾವುದೂ ಆಗುವುದಿಲ್ಲ. ಬಿರೇಶ್ವರ ಸಂಸ್ಥೆಯಿಂದ 250 ಕೋಟಿ ರೂ. ಜೊಲ್ಲೆಯವರು ಠೇವಣಿ ಇಟ್ಟಿದ್ದಾರೆ. ಇನ್ನು ಹೆಚ್ಚಿನ ಠೇವಣಿಯನ್ನು ನಾವು ಸಂಗ್ರಹಿಸುತ್ತೇವೆ.
ರಮೇಶ ಕತ್ತಿ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪಕ್ಕೆ, 10 ಕೆಲಸ ಹೇಳಿದಾಗ 10 ಕೆಲಸ ಮಾಡೋಕೆ ಆಗಲ್ಲ. ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿಯ ಸುದ್ದಿ ಬರುತ್ತಿರುವುದಕ್ಕೆ ಅವರು ಬೇಜಾರಾಗಿದ್ದಾರೆ ಎಂದ ಬಾಲಚಂದ್ರ ಜಾರಕಿಹೊಳಿ, ಏಕಾಏಕಿ ಅಧ್ಯಕ್ಷರ ಬದಲಾವಣೆ ಆಗುತ್ತಿರುವುದು ಜನರ ಮೇಲೆ ಪ್ರಭಾವ ಬಿರುತ್ತೆ ಎಂಬುದಕ್ಕೆ, ಯಾವುದೇ ಪ್ರಭಾವ ಬೀರಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ಹೆಚ್ಚು ಡಿಪಾಸಿಟ್ ಮಾಡುತ್ತೇವೆ. ಸಾಲವನ್ನೂ ಸಹ ಹೆಚ್ಚು ಕೊಡುತ್ತೇವೆ ಎಂದು ಹೇಳಿದರು.
ಅನೇಕ ಸಕ್ಕರೆ ಕಾರ್ಖಾನೆಗಳು ಡಿಸಿಸಿ ಬ್ಯಾಂಕ್ನಿಂದ ಸಾಲ ಕೊಟ್ಟು ರಿಕವರಿ ಮಾಡಿಲ್ಲ ಎಂಬುದಕ್ಕೆ ಎಲ್ಲವೂ ಸಹ ರಿಕವರಿ ಪ್ರಾರಂಭ ಆಗಿದೆ. ಆಡಿಟ್ನಲ್ಲಿ ಎಲ್ಲವೂ ಬರುತ್ತದೆ. ಇನ್ನು ಬಾಲಚಂದ್ರ ಜಾರಕಿಹೊಳಿ ಹಾಗೂ ಜಾರಕಿಹೊಳಿ ಕುಟುಂಬದವರು ಯಾರೂ ಡಿಸಿಸಿ ಅಧ್ಯಕ್ಷ ಆಗೋದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ರಮೇಶ ಕತ್ತಿ 2015ರಿಂದ ಈವರೆಗೆ ಸತತವಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಇದಕ್ಕೂ ಮೊದಲು ಲಕ್ಷ್ಮಣ ಸವದಿ ಅಧ್ಯಕ್ಷರಾಗುವ ಮೊದಲಿನ ಅವಧಿಯಲ್ಲಿ 2.5 ವರ್ಷ ಅಧ್ಯಕ್ಷರಾಗಿ ರಮೇಶ ಕತ್ತಿ ಕೆಲಸ ಮಾಡಿದ್ದರು. ಈಗ ರಾಜೀನಾಮೆ ನೀಡಿದ್ದರಿಂದ ಹೊಸ ಅಧ್ಯಕ್ಷ ಯಾರಾಗ್ತಾರೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜೀನಾಮೆ