ಬೆಂಗಳೂರು:ಲೋಕಸಭೆಗೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡಿದ್ದ ಬಿಜೆಪಿ ಜೆಡಿಎಸ್ ಮೈತ್ರಿ ಜೂನ್ 3ರಂದು ನಡೆಯಲಿರುವ 03 ಪದವೀಧರ ಕ್ಷೇತ್ರ ಮತ್ತು 03 ಶಿಕ್ಷಕರ ಕ್ಷೇತ್ರದ ಚುನಾವಣೆಗೂ ಮುಂದುವರೆಸುವ ಕುರಿತು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಚಿಂತನೆ ನಡೆದಿದೆ. ಈ ಸಂಬಂಧ ಮೇ 11ರಂದು ರಾಜ್ಯ ಬಿಜೆಪಿ ನಾಯಕರು ಮಹತ್ವದ ಸಭೆ ನಡೆಸಿ ರಾಜ್ಯ ಘಟಕದ ಅಭಿಪ್ರಾಯವನ್ನು ಹೈಕಮಾಂಡ್ಗೆ ಸಲ್ಲಿಕೆ ಮಾಡಲಿದ್ದಾರೆ.
ಜೆಡಿಎಸ್ ಜೊತೆ ಮೈತ್ರಿ ಮುಂದುವರಿಕೆ?:ಬಿಜೆಪಿ ನೇತೃತ್ವದ ಎನ್ಡಿಎ ಕೂಟ ಸೇರಿರುವ ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಲೋಕಸಭಾ ಚುನಾವಣೆ ನಂತರದಲ್ಲಿಯೂ ಮುಂದುವರೆಸುವ ಘೋಷಣೆ ಮಾಡಿದ್ದ ಬಿಜೆಪಿ ನಾಯಕರು, ಇದೀಗ ಹೈಕಮಾಂಡ್ ಕಡೆ ಬೆರಳು ತೋರುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿರುವ ವರಿಷ್ಠರು ಪರಿಷತ್ ಚುನಾವಣೆ ಕುರಿತು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಹಾಗಾಗಿ, ಈ ಕುರಿತು ಯಾವುದೇ ನಿರ್ದೇಶನ ನೀಡಿಲ್ಲ. ಆದರೆ, ಮೈತ್ರಿಯಾಗಿ ಚುನಾವಣೆ ಎದುರಿಸಬೇಕಾ ಅಥವಾ ಸ್ವತಂತ್ರವಾಗಿ ಎಲ್ಲ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಾ ಎನ್ನುವ ಗೊಂದಲ ರಾಜ್ಯ ನಾಯಕರನ್ನು ಕಾಡುತ್ತಿದೆ. ಹೀಗಾಗಿ, ಹೈಕಮಾಂಡ್ ನಾಯಕರನ್ನು ಸಂಪರ್ಕ ಮಾಡಿರುವ ರಾಜ್ಯ ಘಟಕ ಮೈತ್ರಿ ಕುರಿತು ಸ್ಪಷ್ಟೀಕರಣ ಬಯಸಿದೆ.
ಈ ವಿಚಾರದಲ್ಲಿ ಯಾವುದೇ ಸ್ಪಷ್ಟ ನಿರ್ದೇಶನ ನೀಡದಿರುವ ವರಿಷ್ಠರು, ಚುನಾವಣೆ ಕುರಿತು ಪ್ರಾಥಮಿಕ ಸಭೆ ನಡೆಸಿ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿ ಹೈಕಮಾಂಡ್ಗೆ ಕಳಿಸಿಕೊಡುವಂತೆ ಸೂಚಿಸಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಮೇಲಿನ ಆರೋಪ ವಿಚಾರ ದೇಶಾದ್ಯಂತ ಸುದ್ದಿಯಾಗಿದ್ದು, ಮಿತ್ರಪಕ್ಷದ ಅಭ್ಯರ್ಥಿ ವಿರುದ್ಧ ಕೇಳಿಬಂದಿರುವ ಆರೋಪದಿಂದಾಗಿ ಬಿಜೆಪಿಗೆ ಮುಜುಗರವಾಗಿದೆ. ಆದರೂ ಮೈತ್ರಿ ಲೋಕಸಭೆಗೆ ಮಾತ್ರವಲ್ಲ ಮುಂಬರಲಿರುವ ಚುನಾವಣೆಗಳಿಗೂ ಇರಲಿದೆ ಎನ್ನುವ ಹೇಳಿಕೆಗೂ ಬಿಜೆಪಿ ಬದ್ಧವಾಗಬೇಕಿದೆ.
ಹಾಗಾಗಿ, ಪರಿಷತ್ ಚುನಾವಣೆಗೂ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಈ ಆಯಾಮದಲ್ಲಿಯೇ ಅಭ್ಯರ್ಥಿಗಳ ಆಯ್ಕೆ ಕುರಿತು ಸಮಾಲೋಚನೆ ನಡೆಸಲು ಮೇ 11 ರಂದು ಸಭೆ ಕರೆಯಲಾಗಿದೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಕೋರ್ ಕಮಿಟಿ ಸದಸ್ಯರು ಉಪಸ್ಥಿತರಿರಲಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಮತ್ತು ಮೈತ್ರಿ ಮುಂದುವರಿಕೆ ಕುರಿತು ಅಂದು ಮಹತ್ವದ ಸಮಾಲೋಚನೆ ನಡೆಸಿ ಕೇಂದ್ರಕ್ಕೆ ಮಾಹಿತಿ ಕಳುಹಿಸಿಕೊಡಲಾಗುತ್ತದೆ.
ಈ ಕುರಿತು 'ಈಟಿವಿ ಭಾರತ'ಕ್ಕೆ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮಾಹಿತಿ ನೀಡಿದ್ದು, ''ಜೂನ್ 3ರಂದು ನಡೆಯಲಿರುವ 03 ಪದವೀಧರ ಕ್ಷೇತ್ರ ಮತ್ತು 03 ಶಿಕ್ಷಕರ ಕ್ಷೇತ್ರದ ಚುನಾವಣೆಗೂ ಮುಂದುವರೆಸುವ ಕುರಿತು ಚರ್ಚಿಸಿ, ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ'' ಎಂದು ತಿಳಿಸಿದ್ದಾರೆ.