ಬೆಂಗಳೂರು:ಯಾವುದೇ ಕಾರಣಕ್ಕೂ ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರು ಮಹಾನಗರವನ್ನು ವಿಭಜನೆ ಮಾಡಬಾರದೆಂದು ಕೋರಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಎನ್.ಆರ್.ರಮೇಶ್ ಪತ್ರ ಬರೆದಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು 5 ಭಾಗಗಳಾಗಿ ವಿಭಜಿಸಲು ನಿರ್ಧರಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಒಂದು ಸುಂದರ-ಸುಸಜ್ಜಿತ ನಗರವನ್ನು ನಿರ್ಮಾಣ ಮಾಡಬೇಕೆಂಬ ನಾಡಪ್ರಭು ಕೆಂಪೇಗೌಡರ ಮಹಾತ್ವಾಕಾಂಕ್ಷೆಯಂತೆ ವಿಜಯನಗರ ಸಾಮ್ರಾಜ್ಯದ ಅರಸರಾದ ಅಚ್ಯುತರಾಯರು ನಾಡಪ್ರಭು ಕೆಂಪೇಗೌಡರಿಗೆ ಬೆಂಗಳೂರು ಮಹಾನಗರ ನಿರ್ಮಾಣಕ್ಕೆಂದು ಹನ್ನೆರಡು ಹೋಬಳಿ (ಉತ್ತರಹಳ್ಳಿ, ವರ್ತೂರು, ಯಲಹಂಕ, ಬೇಗೂರು, ಹಲಸೂರು, ಕೆಂಗೇರಿ, ತಲಘಟ್ಟಪುರ, ಜಿಗಣಿ, ಕುಂಬಳಗೋಡು, ಕಾಗಳ್ಳಿ, ಬಾಣಾವಾರ ಮತ್ತು ಹೆಸರುಘಟ್ಟ)ಗಳನ್ನು ಜಹಗೀರಾಗಿ ನೀಡಿರುವುದು ಇತಿಹಾಸದಲ್ಲಿ ದಾಖಲಾಗಿದೆ.
ಈಗಾಗಲೇ ದೆಹಲಿ ಮಹಾನಗರ ಪಾಲಿಕೆಯನ್ನು ಆಡಳಿತಾತ್ಮಕವಾಗಿ ಮೂರು ಭಾಗಗಳಾಗಿ ವಿಭಜಿಸಿ ಆಗಿರುವ ಅನಾಹುತಗಳ ಬಗ್ಗೆ ತಮಗೆ ಅರಿವು ಇದೆ ಎಂದು ಭಾವಿಸುತ್ತೇನೆ. ದೆಹಲಿ ಮಹಾನಗರ ಪಾಲಿಕೆಯನ್ನು ಮೂರು ಭಾಗಗಳಾಗಿ ವಿಭಜಿಸಿದ ನಂತರ ಆರ್ಥಿಕ ಅಸಮತೋಲನ ಉಂಟಾಗಿತ್ತು. ಈ ಆರ್ಥಿಕ ಅಸಮತೋಲನದಿಂದ ಚೇತರಿಸಿಕೊಳ್ಳಲಾಗದೇ ಕೊನೆಗೆ ದೆಹಲಿಯ ಮೂರು ಮಹಾನಗರ ಪಾಲಿಕೆಗಳು ಒಂದಾಗಬೇಕೆಂದು ನಿರ್ಣಯ ತೆಗೆದುಕೊಂಡು, ಒಂದೇ ಮಹಾನಗರ ಪಾಲಿಕೆಯನ್ನಾಗಿ ಮಾಡಿರುತ್ತಾರೆ. ತಾವು ಈ ರೀತಿ ವಿಭಜನೆ ಮಾಡಿದರೆ, ಪ್ರಾದೇಶಿಕವಾಗಿ ಆರ್ಥಿಕ ಅಸಮತೋಲನ ಹೆಚ್ಚಾಗುತ್ತದೆಯೇ ಹೊರತು, ಇದರಿಂದ ಬೆಂಗಳೂರಿಗೆ ಒಳಿತಾಗುವ ಕೆಲಸ ಕಾರ್ಯಗಳಾಗುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.