ಬೆಂಗಳೂರು/ಬೆಳಗಾವಿ: ಸದನ ನಿಯಮಾವಳಿಗಳಂತೆ ನಡೆಯುತ್ತಿಲ್ಲ. ವಕ್ಫ್, ಜಾತಿ ನಿಂದನೆ ಮತ್ತಿತರ ವಿಚಾರಗಳ ಬಗ್ಗೆ ಆಡಳಿತ ಪಕ್ಷದ ಸದಸ್ಯರ ಜೊತೆ ಮಾತಿನ ಚಕಮಕಿ ನಡೆದ ಬಳಿಕ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.
ಪ್ರಶ್ನೋತ್ತರ ಹಾಗೂ ಶೂನ್ಯವೇಳೆ ಕಲಾಪದ ನಂತರ ಸ್ಪೀಕರ್ ಯು.ಟಿ.ಖಾದರ್ ಅವರು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚೆ ಆರಂಭಿಸುವಂತೆ ಸೂಚಿಸಿದರು. ಆಗ ಅಶೋಕ್ ಚರ್ಚೆ ಆರಂಭಿಸಲು ಎದ್ದು ನಿಂತಾಗ, ಆಡಳಿತ ಪಕ್ಷದ ಸದಸ್ಯರಾದ ನರೇಂದ್ರಸ್ವಾಮಿ, ನಯನಾ ಮೋಟಮ್ಮ, ಪ್ರಸಾದ್ ಅಬ್ಬಯ್ಯ, ಶರತ್ ಬಚ್ಚೇಗೌಡ ಮತ್ತಿತರರು ಎದ್ದು ನಿಂತು, ಬಿಜೆಪಿಯ ಒಬ್ಬ ಶಾಸಕ ಜಾತಿನಿಂದನೆ ಮಾಡಿದ್ದಾರೆ. ಒಬ್ಬ ಮುಖ್ಯಮಂತ್ರಿಯ ಮನೆ ಹಾಳು ಮಾಡಿದ್ದಾರೆ. ಪ್ರತಿಪಕ್ಷ ನಾಯಕರ ಬಗ್ಗೆಯೂ ಅಗೌರವ ತರುವ ರೀತಿ ಮಾತನಾಡಿದ್ದಾರೆ. ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಿ ಎಂದು ಏರು ದನಿಯಲ್ಲಿ ಒತ್ತಾಯಿಸಿದರು. ಇದರ ನಡುವೆಯೇ ಕಂದಾಯ ಸಚಿವ ಆರ್. ಕೃಷ್ಣಬೈರೇಗೌಡ, ಮಳೆ ಹಾನಿ ಬಗ್ಗೆ ಸದನದಲ್ಲ ಹೇಳಿಕೆ ನೀಡುತ್ತೇನೆ. ನಂತರ ಪ್ರತಿಪಕ್ಷ ನಾಯಕರು ವಕ್ಫ್ ಕುರಿತಂತೆ ಚರ್ಚೆ ಆರಂಭಿಸಲು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಆರ್.ಅಶೋಕ್, ಸೋಮವಾರ ಮಳೆ ಹಾನಿ ಕುರಿತಂತೆ ಹೇಳಿಕೆ ಕೊಡಿ. ನಾವು ಅದರ ಬಗ್ಗೆ ಕೆಲವೊಂದು ಸ್ಪಷ್ಟೀಕರಣ ಕೇಳಬೇಕಿದೆ. ಈಗ ವಕ್ಫ್ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರಾದರೂ, ಕೃಷ್ಣಬೈರೇಗೌಡ ಅವರು ಮೊದಲು ಮಳೆ ಹಾನಿ ಬಗ್ಗೆ ಹೇಳಿಕೆ ಕೊಡುತ್ತೇನೆ. ಜಾಸ್ತಿ ಸಮಯ ತೆಗೆದುಕೊಳ್ಳುವುದಿಲ್ಲ, ಅವಕಾಶ ಕೊಡಿ ಎಂದರು.
ಸದನದಲ್ಲಿ ನಾರಾಯಣಸ್ವಾಮಿ (ETV Bharat) ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯ ನರೇಂದ್ರಸ್ವಾಮಿ, ಜಾತಿ ನಿಂದನೆ ಮಾಡಿರುವ ಶಾಸಕನ ಬಗ್ಗೆ ನಾವು ಮಾತನಾಡಬೇಕು. ಅವಕಾಶ ಕೊಡಿ ಎಂದು ಏರು ಧ್ವನಿಯಲ್ಲೇ ಆಗ್ರಹಿಸಿದರು. ಆಗ ಸ್ಪೀಕರ್ ಯು.ಟಿ.ಖಾದರ್, ಈ ಚರ್ಚೆಗಳೆಲ್ಲಾ ಮುಗಿಯಲಿ ನಂತರ ಅವಕಾಶ ಕೊಡುತ್ತೇನೆ ಎಂದು ಹೇಳಿದರೂ ನರೇಂದ್ರಸ್ವಾಮಿ ಅದಕ್ಕೆ ಒಪ್ಪದೆ ಚರ್ಚೆಗೆ ಅವಕಾಶ ಕೊಡಿ ಎಂದು ಪದೇ ಪದೇ ಹೇಳಿದ ಮಾತು ಸ್ಪೀಕರ್ ಸಿಟ್ಟಿಗೂ ಕಾರಣವಾಯಿತು. ಇದರಿಂದ ಕುಪಿತಗೊಂಡ ಪ್ರತಿಪಕ್ಷದ ಸದಸ್ಯರು, ವಕ್ಫ್ ಬಗ್ಗೆ ಚರ್ಚೆಗೆ ಅವಕಾಶ ಕೊಡಿ ನಂತರ ಉಳಿದದ್ದು ಎಂದು ಹೇಳಿದರಾದರೂ ಅದಕ್ಕೆ ನರೇಂದ್ರಸ್ವಾಮಿ ಕಿವಿಗೊಡದೆ ತಮ್ಮ ಮಾತು ಮುಂದುವರೆಸಿದರು. ಇದರಿಂದ ಸಿಟ್ಟಿಗೆದ್ದ ಅಶೋಕ್, ಸದನ ನಿಯಮಾವಳಿಗಳಂತೆ ನಡೆಯುತ್ತಿಲ್ಲ. ಆಡಳಿತ ಪಕ್ಷ ಸದಸ್ಯರು ನಮ್ಮ ಮಾತುಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ನಮ್ಮ ಪ್ರಸ್ತಾವಗಳ ಚರ್ಚೆಗೆ ಅವಕಾಶ ಕೊಡುತ್ತಿಲ್ಲ. ಇದು ಸದನ ನಡೆಸುತ್ತಿರುವ ರೀತಿಯೇ ಎಂದು ಪ್ರಶ್ನಿಸಿ, ಇದನ್ನು ಖಂಡಿಸಿ ಸಭಾತ್ಯಾಗ ಮಾಡುತ್ತಿದ್ದೇವೆ ಎಂದು ಹೇಳಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಜೊತೆ ಸದನದಿಂದ ಹೊರ ನಡೆದರು. ಸದನದಿಂದ ಹೊರ ಹೋಗುವಾಗ ವಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದ ನಂತರ ಆಡಳಿತ ಪಕ್ಷದ ನಾರಾಯಣಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದ ಯು.ಟಿ.ಖಾದರ್, ನೀವು ಹಿರಿಯರಿದ್ದಿರೀ ಈ ರೀತಿ ನಡೆದುಕೊಳ್ಳುವುದು ಸರಿಯೇ, ನಾನು ಅವಕಾಶ ಮಾಡಿಕೊಡುತ್ತೇನೆ ಎಂದು ಹೇಳಿದ್ದರೂ ಪದೇ ಪದೇ ಮಾತನಾಡುತ್ತಲೇ ಇದ್ದೀರಿ. ಇಂದು ಬೆಳಗ್ಗೆ ನೋಟಿಸ್ ಕೊಟ್ಟು ಚರ್ಚೆಗೆ ಅವಕಾಶ ಕೊಡಿ ಎಂದರೆ ಹೇಗೆ? ನಿಮ್ಮ ನಡವಳಿಕೆ ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು. ನಂತರ ಸಚಿವ ಕೃಷ್ಣಬೈರೇಗೌಡ, ಮಳೆಹಾನಿ ಕುರಿತಂತೆ ಸದನಕ್ಕೆ ಮಾಹಿತಿ ನೀಡುವಂತೆ ಹೇಳಿಕೆ ನೀಡಿದರು.
ಸಭಾತ್ಯಾಗ ಮಾಡದ ಇಬ್ಬರು ಬಿಜೆಪಿ ಶಾಸಕರು: ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಮಾತ್ರ ಸಭಾತ್ಯಾಗ ಮಾಡದೆ ಸದನದಲ್ಲೇ ಕುಳಿತಿದ್ದರು. ಶಾಸಕ ಶಿವರಾಮ್ ಹೆಬ್ಬಾರ್ ಕೂಡ ಅವರ ಬಳಿ ಬಂದು ಕುಳಿತುಕೊಂಡರು.
ಇದನ್ನೂ ಓದಿ: 2ಎ ಪ್ರವರ್ಗದಡಿ ಸೇರಿಸಬೇಕೆಂಬ ಪಂಚಮಸಾಲಿ ಸಮುದಾಯದ ಒತ್ತಾಯ ಸಂವಿಧಾನಕ್ಕೆ ವಿರುದ್ಧ: ಸಿಎಂ ಸಿದ್ದರಾಮಯ್ಯ