ಬೆಂಗಳೂರು: ರಾಜ್ಯದ 20 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಪ್ರಕಟಿಸಿದೆ. ಅದರಲ್ಲಿ 6 ಸಂಸದರಿಗೆ ಟಿಕೆಟ್ ನಿರಾಕರಿಸಿದ್ದು, ಮೂವರು ಸಂಸದರು ಚುನಾವಣಾ ನಿವೃತ್ತಿ ಘೋಷಿಸಿರುವ ಕಾರಣಕ್ಕೆ ಬೇರೆ ಹೆಸರು ಪ್ರಕಟಿಸಲಾಗಿದೆ. ಆ ಮೂಲಕ 9 ಹಾಲಿಗಳ ಬದಲಾವಣೆ ಆಗಿದೆ. ಬೆಂಗಳೂರು ಉತ್ತರಕ್ಕೆ ಶೋಭಾ ಕರಂದ್ಲಾಜೆ ಬಾರದಂತೆ ತಡೆಯುವ ಬೆಂಗಳೂರು ಬಿಜೆಪಿ ನಾಯಕರ ಪ್ರಯತ್ನ ವಿಫಲವಾಗಿದೆ.
ರಾಜ್ಯ ಲೋಕಸಭಾ ಚುನಾವಣೆಗೆ ಬಿಡುಗಡೆಯಾಗಿರುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹಾಲಿಗಳಿಗೆ ಕೋಕ್, ಅಚ್ಚರಿ ಆಯ್ಕೆ, ವಿರೋಧಕ್ಕೆ ಸಿಗದ ಮನ್ನಣೆ, ಹಿರಿಯರಿಗೆ ನಿರಾಸೆಯಂತಹ ಸನ್ನಿವೇಶ ಎದುರಾಗಿದೆ. ದೀರ್ಘಾವಧಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಿಕಟಪೂರ್ವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಟಿಕೆಟ್ ವಂಚಿತರಾಗಿದ್ದಾರೆ.
ಪುತ್ರನ ರಾಜಕೀಯ ಭವಿಷ್ಯ ರೂಪಿಸಲು ಹಾವೇರಿ ಟಿಕೆಟ್ ಬೇಡಿಕೆ ಇಟ್ಟಿದ್ದ ಈಶ್ವರಪ್ಪಗೆ ನಿರಾಸೆಯಾಗಿದ್ದು, ಪುತ್ರ ಕಾಂತೇಶ್ ಬದಲು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಟಿಕೆಟ್ ಸಿಕ್ಕಿದೆ. ಮತ್ತೊಂದೆಡೆ ಅಳಿಯನಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದ ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್ಗೂ ನಿರಾಸೆಯಾಗಿದ್ದು, ಅಲ್ಲಿ ಕೊಳ್ಳೆಗಾಲ ಮಾಜಿ ಶಾಸಕ ಬಾಲರಾಜ್ಗೆ ಟಿಕೆಟ್ ನೀಡಲಾಗಿದೆ.
ಇನ್ನು ಶತಾಯಗತಾಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಟಿಕೆಟ್ ತಪ್ಪಿಸಬೇಕು ಎನ್ನುವ ಪ್ರಯತ್ನ ಫಲಿಸಿಲ್ಲ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೋ ಬ್ಯಾಕ್ ಅಭಿಯಾನ ನಡೆದು ಸಿಟಿ ರವಿ ಆಕಾಂಕ್ಷಿಯಾಗಿ ಅಪೇಕ್ಷಿತರ ಪಟ್ಟಿ ಸೇರಿದ್ದರು. ಆದರೆ, ಗೋ ಬ್ಯಾಕ್ ಅಭಿಯಾನ ಸಫಲವಾದರೂ ಸಿಟಿ ರವಿ ಕನಸು ಈಡೇರಲಿಲ್ಲ. ಅಲ್ಲಿ ಸಿಟಿ ರವಿ ಬದಲು ಕೋಟಾ ಶ್ರೀನಿವಾಸ ಪೂಜಾರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಇಲ್ಲಿ ಟಿಕೆಟ್ ಮಿಸ್ ಆಗಿದ್ದರೂ ಬೆಂಗಳೂರು ಉತ್ತರದಿಂದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಫಲರಾಗಿದ್ದಾರೆ.
ಬೆಂಗಳೂರು ಬಿಜೆಪಿ ನಾಯಕರು ಶೋಭಾ ಕರಂದ್ಲಾಜೆ ಬೆಂಗಳೂರು ರಾಜಕಾರಣಕ್ಕೆ ಬಾರದಂತೆ ತಡೆಯಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದ ಸದಾನಂದಗೌಡರನ್ನೇ ಮತ್ತೆ ಕಣಕ್ಕಿಳಿಸಿವ ಪ್ರಯತ್ನಕ್ಕೆ ಬೆಂಗಳೂರು ನಾಯಕರು ಪ್ರಯತ್ನಿಸಿದರೂ ಅದಕ್ಕೆ ಮನ್ನಣೆ ಸಿಕ್ಕಿಲ್ಲ. ಶೋಭಾ ಕರಂದ್ಲಾಜೆಗೆ ಟಿಕೆಟ್ ಪ್ರಕಟಿಸಿದೆ. ಆ ಮೂಲಕ ಅಶೋಕ್ ಸೇರಿದಂತೆ ಬೆಂಗಳೂರು ಬಿಜೆಪಿ ನಾಯಕರು ಮತ್ತು ಸದಾನಂದಗೌಡರಿಗೆ ನಿರಾಸೆಯಾಗುವಂತಾಗಿದೆ.
ಇನ್ನು ದಾವಣಗೆರೆ ವಿಷಯದಲ್ಲೂ ಹಾಲಿ ಸಂಸದ ಜಿ ಎಂ ಸಿದ್ದೇಶ್ವರ್ಗೆ ಟಿಕೆಟ್ ನೀಡಲು ಇದ್ದ ವಿರೋಧಕ್ಕೆ ಮನ್ನಣೆ ಸಿಕ್ಕಿದೆ. ಆದರೆ, ಅವರ ಕುಟುಂಬಕ್ಕೆ ಟಿಕೆಟ್ ನೀಡಬಾರದು ಎನ್ನುವ ಬೇಡಿಕೆ ಕಡೆಗಣಿಸಲಾಗಿದ್ದು, ಹಾಲಿ ಸಂಸದರ ಪತ್ನಿಗೆ ಟಿಕೆಟ್ ಪ್ರಕಟಿಸಿದೆ. ವಿಶೇಷ ಕಾರಣಕ್ಕಾಗಿ ಪ್ರತಾಪ ಸಿಂಹರನ್ನು ಕೈಬಿಡಲಾಗಿದ್ದರೆ, ಕ್ಷೇತ್ರದಲ್ಲಿ ವಿರೋಧ ವ್ಯಕ್ತವಾಗಿದ್ದನ್ನು ಪರಿಗಣಿಸಿ ನಳಿನ್ ಕುಮಾರ್ ಕಟೀಲ್ಗೆ ಟಿಕೆಟ್ ನಿರಾಕರಿಸಲಾಗಿದೆ.
ಟಿಕೆಟ್ ವಂಚಿತ ಸಂಸದರ ವಿವರ : ಮೂವರು ನಿವೃತ್ತಿ :
ತುಮಕೂರು ಸಂಸದ ಜಿ ಎಸ್ ಬಸವರಾಜ್ ಕ್ಷೇತ್ರಕ್ಕೆ ಮಾಜಿ ಸಚಿವ ವಿ. ಸೋಮಣ್ಣ
ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಕ್ಷೇತ್ರಕ್ಕೆ ಮಾಜಿ ಶಾಸಕ ಎಸ್ ಬಾಲರಾಜ್
ಹಾವೇರಿ ಸಂಸದ ಶಿವಕುಮಾರ್ ಉದಾಸಿ ಕ್ಷೇತ್ರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
6 ಸಂಸದರಿಗೆ ಟಿಕೆಟ್ ಮಿಸ್:
ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಬದಲಿಗೆ ಯದುವೀರ್ ಒಡೆಯರ್ಗೆ ಅವಕಾಶ
ಬೆಂಗಳೂರು ಉತ್ತರ ಸಂಸದ ಸದಾನಂದ ಗೌಡರ ಬದಲಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಅವಕಾಶ
ದಕ್ಷಿಣ ಕನ್ನಡ ಸಂಸದ ನಳೀನ್ ಕಟೀಲ್ ಬದಲಿಗೆ ಬ್ರಿಜೇಶ್ ಚೌಟಾರಿಗೆ ಅವಕಾಶ
ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ ಬದಲಿಗೆ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ಗೆ ಅವಕಾಶ