ಹುಬ್ಬಳ್ಳಿ:"ಸರ್ಧಾರ್ ವಲ್ಲಭಬಾಯಿ ಪಟೇಲ್ ಅವರು ಈ ಹಿಂದೆಯೇ ಆರ್ಎಸ್ಎಸ್ ಬ್ಯಾನ್ ಮಾಡಿದ್ದರು. ಬಿಜೆಪಿಯವರು ಇದೀಗ ರಾಜಕೀಯಕ್ಕಾಗಿ ಪಟೇಲರ ಪ್ರತಿಮೆಯನ್ನು ನಿಲ್ಲಿಸಿದ್ದಾರೆ" ಎಂದು ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, "ವಲ್ಲಭಭಾಯ್ ಪಟೇಲರು ಆರ್ಎಸ್ಎಸ್ ಬ್ಯಾನ್ ಮಾಡಿದ್ದು ಸುಳ್ಳಲ್ಲ, ಇದಕ್ಕೆ ಪೂರಕವಾದ ದಾಖಲೆಗಳಿವೆ. ಬಿಜೆಪಿಯವರು ಚುನಾವಣೆ ಬಂದಾಗೊಮ್ಮೆ ಜಾತಿ ಧರ್ಮ ಮಂದೆ ತಂದು ಅಧಿಕಾರಕ್ಕೆ ಬರತ್ತಾರೆ. ಅಭಿವೃದ್ಧಿ ಬಗ್ಗೆ ಚಕಾರ ಎತ್ತುವುದಿಲ್ಲ, ಇಂದು ಪಾಸ್ಪೋರ್ಟ್ ಪವರ್ನಲ್ಲಿ ದೇಶ 85ನೇ ಸ್ಥಾನದಲ್ಲಿದೆ. ವಿಶ್ವಗುರು ಎಂದು ಕರೆಸಿಕೊಳ್ಳುವ ನಮ್ಮ ಪ್ರಧಾನಿ ದೇಶವನ್ನು ಯಾಕೆ ಒಂದನೇ ಸ್ಥಾನಕ್ಕೆ ತರಲಿಲ್ಲ. ಇಂದು ಅಭಿವೃದ್ಧಿ ವಿಷಯದಲ್ಲಿ ದೇಶವನ್ನು ಯಾವ ದೇಶಕ್ಕೆ ಹೋಲಿಸಬೇಕು" ಎಂದು ಹರಿಹಾಯ್ದರು.
ಸುಖಾಸುಮ್ಮನೆ ಬಿಜೆಪಿ ಚುನಾವಣೆ ಹೊಸ್ತಿಲಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರತ್ತ ಚಿತ್ತ ಹರಿಸಿದೆ. ಇಂದು ಮೇಕ್ ಇನ್ ಇಂಡಿಯಾ ಎಂಬ ಯೋಜನೆ ಹಳ್ಳ ಹಿಡಿದಿದೆ. ಇದರ ಪ್ರಚಾರಕ್ಕಾಗಿ ಕೇಂದ್ರ ಸರ್ಕಾರ 450 ಕೋಟಿ ರೂಪಾಯಿ ಖರ್ಚು ಮಾಡಿದೆ. ಈ ಬಗ್ಗೆ ಯಾಕೆ ಬಿಜೆಪಿಯವರು ಮಾತನಾಡುವುದಿಲ್ಲ? ಎಂದು ಸಚಿವ ಸಂತೋಷ್ ಲಾಡ್ ಕಿಡಿಕಾರಿದರು.