ಮಂಗಳೂರು:ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳಲ್ಲಿ ದಿನಾಂಕ ಘೋಷಣೆಯಾಗಲಿದೆ. ಎಲ್ಲಾ ಪಕ್ಷಗಳು ಚುನಾವಣೆಗೆ ತಯಾರಿ ನಡೆಸುತ್ತಿವೆ. ಮಂಗಳೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯವರು ಚುನಾವಣೆ ಘೋಷಣೆಗೂ ಮುಂಚೆಯೇ ಮನೆ ಮನೆಗೆ ತೆರಳಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಪ್ರಬಲ ಕ್ಷೇತ್ರದಲ್ಲಿಯೇ ಬಿಜೆಪಿಗೆ ಬಂಡಾಯದ ಭೀತಿ ಎದುರಾಗಿದೆ.
1991ರಿಂದ ಮಂಗಳೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ನಿರಂತರವಾಗಿ ಜಯ ಗಳಿಸುತ್ತ ಬಂದಿದೆ. ಕಳೆದ ಮೂರು ಅವಧಿಯಲ್ಲಿ ನಳಿನ್ ಕುಮಾರ್ ಕಟೀಲ್ ಲೋಕಸಭೆಗೆ ಬಿಜೆಪಿಯಿಂದ ಚುನಾಯಿತರಾಗಿದ್ದಾರೆ. ಈ ಬಾರಿಯೂ ಸ್ಪರ್ಧಿಸಲು ನಳಿನ್ ತಯಾರಿ ನಡೆಸಿದ್ದಾರೆ. ಈ ಸಿದ್ಧತೆ ನಡುವೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಇಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ.
ಬಂಡಾಯ ಸ್ಪರ್ಧಿಗಳು ಯಾರು?: ಬಿಜೆಪಿಯಿಂದ ಟಿಕೆಟ್ ನಿರೀಕ್ಷೆಯಲ್ಲಿರುವ ಇಬ್ಬರು ಅಭ್ಯರ್ಥಿಗಳು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ಈಗಾಗಲೇ ಘೋಷಿಸಿದ್ದಾರೆ. ಹಿಂದೂ ಜಾಗರಣ ವೇದಿಕೆಯ ಸತ್ಯಜಿತ್ ಸುರತ್ಕಲ್ ಮತ್ತು ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಈ ಬಾರಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಅರುಣ್ ಕುಮಾರ್ ಪುತ್ತಿಲ:ಸಂಘ ಪರಿವಾರದಲ್ಲಿ ಗುರುತಿಸಿಕೊಂಡು ಮುಂಚೂಣಿಯಲ್ಲಿದ್ದ ಅರುಣ್ ಕುಮಾರ್ ಪುತ್ತಿಲ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು ವಿಧಾನಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪುತ್ತೂರು ಬಿಜೆಪಿಯ ಪ್ರಬಲ ಕ್ಷೇತ್ರವಾಗಿದ್ದು, ಅಲ್ಲಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆಯಿಂದಾಗಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಿದರೆ, ಮತ ಗಳಿಕೆಯಲ್ಲಿ ಪುತ್ತಿಲ ಅವರು ಎರಡನೇ ಸ್ಥಾನ ಪಡೆದಿದ್ದರು.
ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಈ ಮೂಲಕ ಪುತ್ತಿಲ ಅವರು ತಮ್ಮ ಬಲ ತೋರ್ಪಡಿಸಿದ್ದರು. ಆ ಬಳಿಕ ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಪಕ್ಷಕ್ಕೆ ಸೇರಲು ಬಯಸಿದ್ದರು. ಆದರೆ, ಪುತ್ತೂರು ಮಂಡಲ ಅಧ್ಯಕ್ಷರಾಗಿ ಮಾಡುವುದು ಸೇರಿದಂತೆ ತನ್ನ ಹಲವು ಬೇಡಿಕೆಗೆ ಒಪ್ಪದ ಕಾರಣ ಬಿಜೆಪಿಗೆ ಸೇರ್ಪಡೆಯಾಗಿರಲಿಲ್ಲ. ಇದೀಗ ಬಿಜೆಪಿಯ ಮನವೊಲಿಕೆಯು ಮುಗಿದಿದ್ದು, ಪುತ್ತಿಲ ಪರಿವಾರದ ಮುಖಂಡರು ಅರುಣ್ ಕುಮಾರ್ ಪುತ್ತಿಲ ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಸತ್ಯಜಿತ್ ಸುರತ್ಕಲ್:ಸಂಘ ಪರಿವಾರದ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಸತ್ಯಜಿತ್ ಸುರತ್ಕಲ್ ಬಿಜೆಪಿ ಸಂಘಟನೆಗಾಗಿ ದುಡಿದವರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಟಿಕೆಟ್ ಸಿಗದೇ ಇದ್ದರೂ ಮೌನವಾಗಿದ್ದ ಸತ್ಯಜಿತ್ ಸುರತ್ಕಲ್, ಆ ಬಳಿಕ ಬಿಜೆಪಿಯ ಕೆಲ ನಾಯಕರ ವಿರುದ್ಧ ಆಕ್ರೋಶಗೊಂಡಿದ್ದರು. ಈ ಸಲ ಮತ್ತೆ ಮಂಗಳೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಸತ್ಯಜಿತ್ ಅಭಿಮಾನಿಗಳು ತಮ್ಮ ನಾಯಕನಿಗೆ ಅವಕಾಶ ನೀಡಬೇಕೆಂದು ಅಭಿಯಾನ ಮಾಡಿದ್ದಾರೆ. ಹೀಗಾಗಿ, ಟಿಕೆಟ್ ಸಿಗದಿದ್ದರೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ.
ಹಿಂದೂ ಜಾಗರಣ ವೇದಿಕೆಯ ಸತ್ಯಜಿತ್ ಸುರತ್ಕಲ್ ನಳಿನ್ ಕುಮಾರ್ ಕಟೀಲ್ ಹೇಳಿದ್ದು ಹೀಗೆ:ಬಂಡಾಯ ಸ್ಪರ್ಧೆಗೆ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, "ಪುತ್ತಿಲ ಪರಿವಾರ ಸ್ವತಂತ್ರ ಸಂಘಟನೆ. ತಮ್ಮ ಅಭಿಪ್ರಾಯ, ತೀರ್ಮಾನ ಕೈಗೊಳ್ಳಲು ಸ್ವತಂತ್ರರಿದ್ದಾರೆ. ಅವರನ್ನು ಮತ್ತೆ ಬಿಜೆಪಿಗೆ ಕರೆಸಿಕೊಳ್ಳಲು ಪಕ್ಷ ಎಲ್ಲಾ ರೀತಿಯ ಪ್ರಯತ್ನಪಟ್ಟಿದೆ. ನಮ್ಮದು ದೇಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಅನ್ನು ಎದುರಿಸಿ, ಬಿಜೆಪಿ ಅತೀ ಹೆಚ್ಚು ಶಾಸಕರು, ಸಂಸದರನ್ನು ಹಾಗೂ ತಾಲೂಕು ಪಂಚಾಯತ್ ಸದಸ್ಯರನ್ನು ಪಡೆದಿದೆ. ಆದ್ದರಿಂದ ಸಹಜವಾಗಿ ಬಿಜೆಪಿಗೆ ಎದುರಾಳಿಗಳ ಸಮಸ್ಯೆಯಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ನಿಲ್ಲುವ ಹಕ್ಕು ಎಲ್ಲರಿಗೂ ಇದೆ'' ಎಂದು ತಿಳಿಸಿದ್ದಾರೆ.
''ಚುನಾವಣೆ ಬಂದಾಗ ಇಂತಹ ಸಮಸ್ಯೆಗಳು, ಸವಾಲುಗಳು ಉದ್ಭವವಾಗುತ್ತಿರುತ್ತವೆ. ಇವೆಲ್ಲದರ ಮಧ್ಯೆಯೂ ಬಿಜೆಪಿ ಗೆಲುವು ಸಾಧಿಸಲಿದೆ. ಲೋಕಸಭೆ ಚುನಾವಣೆಗೂ ವಿಧಾನಸಭೆ ಚುನಾವಣೆಗೂ ಅಜಗಜಾಂತರ ವ್ಯತ್ಯಾಸಗಳಿವೆ. ಆಗ ಇದ್ದ ಸಮಸ್ಯೆಗಳೇ ಬೇರೆ, ಈಗ ಆಗುತ್ತಿರುವ ವಿಚಾರಗಳೇ ಬೇರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದೆ. ರಾಷ್ಟ್ರೀಯ ನಾಯಕರು ಯಾರಿಗೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟಿಕೆಟ್ ನೀಡುತ್ತಾರೋ, ಅದಕ್ಕೆ ಎಲ್ಲದಕ್ಕೂ ಕಾರ್ಯಕರ್ತನಾಗಿ ನಮ್ಮ ಜವಾಬ್ದಾರಿ ನಿಭಾಯಿಸುತ್ತೇವೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ:ಪ್ರತಾಪ್ ಸಿಂಹ ಮೇಲೆ ಆಧಾರರಹಿತ ಆರೋಪ: ಲಕ್ಷ್ಮಣ್ ವಿರುದ್ಧ ಮೊಕದ್ದಮೆ ದಾಖಲಿಸಲು ಕೋರ್ಟ್ ನಿರ್ದೇಶನ