ಬೆಂಗಳೂರು:ಲೋಕಸಭಾ ಚುನಾವಣೆ ಮುಕ್ತಾಯಗೊಂಡ ನಂತರ ಮೊದಲ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಜುಲೈ 4 ರಂದು ಆಯೋಜನೆ ಮಾಡಿರುವ ರಾಜ್ಯ ಬಿಜೆಪಿಯು ಮೋದಿ ಸರ್ಕಾರ ರಚನೆಗೆ ಅಭಿನಂದನೆ ಸಲ್ಲಿಸುವ ಜೊತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟದ ಸ್ವರೂಪದ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಸಂಘಟನಾತ್ಮಕವಾಗಿ ಈ ಸಭೆ ಮಹತ್ವ ಪಡೆದುಕೊಂಡಿದೆ.
ಜುಲೈ 04 ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಕಾರ್ಯಕಾರಿಣಿಯನ್ನು ಉದ್ಘಾಟನೆ ಮಾಡಲಿದ್ದಾರೆ. ಕೇಂದ್ರ ಸಚಿವರಾಗಿರುವ ನಿರ್ಮಲಾ ಸೀತಾರಾಮನ್, ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ ಹಾಗೂ ವಿ ಸೋಮಣ್ಣ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ರಾಜ್ಯ ಘಟಕದಿಂದ ಅಭಿನಂದನೆ ಸ್ವೀಕಾರ ಮಾಡಲಿದ್ದಾರೆ.
ಕಾರ್ಯಕಾರಿಣಿಯಲ್ಲಿ ಪ್ರಮುಖವಾಗಿ ಎರಡು ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಮೂರನೇ ಬಾರಿ ಅಧಿಕಾರ ಸ್ವೀಕರಿಸಿದೆ. ಮೋದಿ ಅವರಿಗೆ ಅಭಿನಂದನೆ ಸಲ್ಲಿಸಲಿದ್ದು, ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಎರಡನೇ ನಿರ್ಣಯ ಕೈಗೊಳ್ಳಲಿದೆ. ಬೆಲೆ ಏರಿಕೆ, ಆಡಳಿತ ವೈಫಲ್ಯ, ಭ್ರಷ್ಟಾಚಾರ, ಸಿಎಂ ರಾಜೀನಾಮೆ ಕೊಡುವವರೆಗೂ ಹೋರಾಟ ನಿಲ್ಲಿಸಬಾರದು ಅಂತ ನಿರ್ಣಯ ಕೈಗೊಳ್ಳಲಿದ್ದಾರೆ. ಸಭೆಯಲ್ಲಿ ಮುಂದಿನ ಹೋರಾಟ, ಪಕ್ಷದ ಚಟುವಟಿಕೆ ಬಗ್ಗೆ ಚರ್ಚೆಯಾಗಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಅಷ್ಟು ಆಸೆ ಇದ್ದರೆ, ಚುನಾವಣೆ ಎದುರಿಸಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ: ಡಿ.ಕೆ. ಸುರೇಶ್ - D K Suresh
ಲೋಕಸಭಾ ಚುನಾವಣೆ ನಂತರ ನಡೆಯುತ್ತಿರುವ ಮೊದಲ ರಾಜ್ಯ ಕಾರ್ಯಕಾರಿಣ ಸಭೆ ಇದಾಗಿದ್ದು, ಪಕ್ಷ ಸಂಘಟನೆ, ಸಂಘಟನಾತ್ಮಕ ಹೋರಾಟ, ಆಂತರಿಕ ಅಸಮಾಧಾನಗಳ ಶಮನ ಸೇರಿದಂತೆ ಪಕ್ಷದ ಮುಂದಿನ ಹಾದಿಯ ಕುರಿತು ಮಹತ್ವದ ಸಮಾಲೋಚನೆ ನಡೆಯಲಿದೆ. ವಿಜಯೇಂದ್ರ ನೇತೃತ್ವದಲ್ಲಿ ಪಕ್ಷ ಹಾಗೂ ಪ್ರತಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಶಾಸಕರ ಹೋರಾಟದ ಸ್ವರೂಪದ ಕುರಿತು ಚರ್ಚೆಯಾಗಲಿದೆ. ಪರಿಷತ್ ಪ್ರತಿಪಕ್ಷ ನಾಯಕರ ಆಯ್ಕೆ ಸಂಬಂಧವೂ ಚರ್ಚೆಯಾಗುವ ಸಾಧ್ಯತೆ ಇದೆ.
ಈ ಕುರಿತು ಮಾಹಿತಿ ನೀಡಿರುವ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯು ಜುಲೈ 4ರಂದು ಅರಮನೆ ಮೈದಾನದ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರದ ಸಚಿವರು, ಶಾಸಕರು, ಸಂಸದರು ಭಾಗವಹಿಸಲಿದ್ದಾರೆ. ಕೇಂದ್ರದಲ್ಲಿ ಎನ್‍ಡಿಎ ಮೂರನೇ ಬಾರಿ ಅಧಿಕಾರ ಪಡೆದ ಸಾಧನೆ ಸಂಬಂಧ ಅಭಿನಂದನೆ ಸಲ್ಲಿಸಲಾಗುವುದು. ಪ್ರಧಾನಿಯವರನ್ನು ಇದೇ ವೇಳೆ ಅಭಿನಂದಿಸುತ್ತೇವೆ. ರಾಜ್ಯ ಸರ್ಕಾರದ ವೈಫಲ್ಯವನ್ನು, ಭ್ರಷ್ಟಾಚಾರ, ದರ ಏರಿಕೆಯನ್ನು ಖಂಡಿಸುವ ಇನ್ನೊಂದು ನಿರ್ಣಯವನ್ನೂ ಅಂಗೀಕರಿಸುತ್ತೇವೆ. ಪಕ್ಷ ಸಂಘಟನೆ ಕುರಿತು ಚರ್ಚಿಸಲಿದ್ದೇವೆ ಎಂದು ವಿವರ ನೀಡಿದರು.
ಇದನ್ನೂ ಓದಿ:ಗ್ರಾ.ಪಂ.ಗಳಲ್ಲಿ ಜನನ, ಮರಣ ನೋಂದಣಿ ಜುಲೈ 1ರಿಂದ ಪ್ರಾರಂಭ: ಶುಲ್ಕ ಮಾಹಿತಿ ಹೀಗಿದೆ - BIRTH AND DEATH REGISTRATION