ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವೈಯಕ್ತಿಕವಾಗಿ ಟೀಕಿಸಿದ್ದಾರೆಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ರಾಜ್ಯ ಬಿಜೆಪಿ ನಿಯೋಗ ದೂರು ನೀಡಿದೆ. ಯತೀಂದ್ರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.
ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿದ ಬಿಜೆಪಿ ನಿಯೋಗ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ದೂರು ನೀಡಿತು. ಯತೀಂದ್ರ ಸಿದ್ದರಾಮಯ್ಯ ಆಡಿರುವ ಮಾತುಗಳ ಕುರಿತು ವಿವರ ನೀಡಿ ಕ್ರಮಕ್ಕೆ ಮನವಿ ಮಾಡಿದೆ. ಚುನಾವಣಾ ಆಯೋಗಕ್ಕೆ ದೂರು ಬಳಿಕ ಮಾತನಾಡಿದ ಪರಿಷತ್ ಸದಸ್ಯ ಎನ್.ರವಿಕುಮಾರ್, ''ಮಾರ್ಚ್ 28ರಂದು ಸಿದ್ದರಾಮಯ್ಯ ಅವರ ಪುತ್ರ, ಯತೀಂದ್ರ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ವೈಯಕ್ತಿಕ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ. ಗೂಂಡಾ ಇದ್ದಾರೆ, ಕೊಲೆಗಡುಕರಿದ್ದಾರೆ ಅಂತ ಹೇಳಿದ್ದು, ಆ ಆರೋಪವನ್ನು ಅವರು ಪ್ರೂವ್ ಮಾಡಬೇಕು. ಇಲ್ಲದಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಲಾಗಿದೆ'' ಎಂದು ತಿಳಿಸಿದರು.
''ಗೃಹ ಸಚಿವ ಹಾಗೂ ಪ್ರಧಾನಿ ಬಗ್ಗೆ ನಿಂದನೀಯ ಪದ ಬಳಕೆ ಖಂಡನೀಯ. ಈ ಬಗ್ಗೆ ದೂರು ನೀಡಿದ್ದೇವೆ.153a, 153b, 171c, 295a, 505(2) ಈ ಸೆಕ್ಷನ್ ಉಲ್ಲಂಘನೆ ಮಾಡಿದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ಯತೀಂದ್ರ ಸಿದ್ದರಾಮಯ್ಯ ಮೊದಲ ಬಾರಿ ಮಾತನಾಡಿದ್ದಾರೆ. ಈ ಹಿಂದೆ ಈ ರೀತಿ ಮಾತನಾಡಿದವರ ವಿರುದ್ಧ ಕ್ರಮ ಆಗಿದೆ. ಇವರ ವಿರುದ್ಧ ಕ್ರಮ ಆಗಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಲಿದ್ದೇವೆ'' ಎಂದು ಎಚ್ಚರಿಸಿದರು.
ಚಿಕ್ಕೋಡಿ ಜಿಲ್ಲೆಯಲ್ಲಿ ಮೆಟೀರಿಯಲ್ ತೆಗೆದುಕೊಂಡು ಹೋಗುವಾಗ ಟೋಲ್ ಬಳಿ ವಾಹನ ತಡೆದು, ಮೆಟೀರಿಯಲ್ಸ್ ಸುಟ್ಟು ಹಾಕಿದ್ದಾರೆ. ಕೃಷ್ಣಾ ರಿವರ್ ಚೆಕ್ ಪೋಸ್ಟ್ ಬಳಿ ತಡೆದಿದ್ದಾರೆ. ವಸ್ತುಗಳನ್ನು ಸುಟ್ಟು ಹಾಕಿದ್ದಾರೆ. ಪಕ್ಷದ ಧ್ವಜ ಸೇರಿದಂತೆ ಬೇರೆ ಬೇರೆ ವಸ್ತುಗಳಿತ್ತು. ಅದನ್ನ ಸಾಗಿಸಲು ಅನುಮತಿ ಇತ್ತು. ಅಧಿಕಾರಿಗಳು ಅದನ್ನ ಸೀಜ್ ಮಾಡಬಹುದಿತ್ತು. ಆದರೆ, ಆ ಅಧಿಕಾರಿ ಕಾಂಗ್ರೆಸ್ ಬೆಂಬಲಿಗ ಇರಬೇಕು. ಅವರು ಸುಟ್ಟು ಹಾಕಿದ್ದಾರೆ ಇದನ್ನು ಆಯೋಗದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.