ಬೆಳಗಾವಿ: ಬಿಜೆಪಿ ಟಿಕೆಟ್ ಸಿಕ್ಕ ಬಳಿಕ ಇದೇ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಜಿಲ್ಲೆಯ ಬಿಜೆಪಿ ನಾಯಕರು, ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಬೆಳಗಾವಿ ಕೋಟೆ ಆವರಣದಲ್ಲಿರುವ ದುರ್ಗಾ ದೇವಿಗೆ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದ ಬಳಿಕ ಜಗದೀಶ್ ಶೆಟ್ಟರ್ ರೋಡ್ ಶೋಗೆ ಚಾಲನೆ ನೀಡಿದರು. ಈ ವೇಳೆ ಜಗದೀಶ್ ಶೆಟ್ಟರ್ಗೆ ಸ್ವತಃ ಮಾಜಿ ಸಿಎಂ ಯಡಿಯೂರಪ್ಪ ಸಾಥ್ ಕೊಟ್ಟರು. ಬಳಿಕ ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಜಗದೀಶ ಶೆಟ್ಟರ್ ಗೌರವ ಸಮರ್ಪಿಸಿದರು.
ಈ ವೇಳೆ ಈಟಿವಿ ಭಾರತ್ ಜೊತೆಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್, ಬೆಳಗಾವಿಗೆ ಬಂದ ಮೊದಲ ದಿನವೇ ಬಹಳ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಮುಂಚೆ ನಾನು ಬೇರೆ ಬೇರೆ ಚುನಾವಣೆಗಳ ಪ್ರಚಾರಕ್ಕೆ ಹೋದಾಗಲೂ ಇಂಥ ಸ್ವಾಗತ ಸಿಕ್ಕಿರಲಿಲ್ಲ. ಹಾಗಾಗಿ ಹತ್ತಾರು ಸಾವಿರ ಯುವಕರು, ನಾಗರಿಕರು, ಕಾರ್ಯಕರ್ತರು ಅಭಿಮಾನಿಗಳು ಸೇರಿಕೊಂಡು ಅಭೂತಪೂರ್ವವಾಗಿ ಸ್ವಾಗತಸಿದ್ದು ಬಿಜೆಪಿ ಗೆಲುವಿಗೆ ಸಾಕ್ಷಿಯಾಗಲಿದೆ. ಅದೇ ರೀತಿ ಲಕ್ಷಾಂತರ ಮತಗಳ ಅಂತರದಿಂದ ನಾನು ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೇರೆ ಜಿಲ್ಲೆಯವರು ಎಂಬ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಿಲ್ಲೆಯ ಯಾವ ನಾಯಕರು ಅಸಮಾಧಾನ ವ್ಯಕ್ತಪಡಿಸಿಲ್ಲ. ಯಾವುದೇ ಸಣ್ಣಪುಟ್ಟ ಅಸಮಾಧಾನಗಳಿದ್ದರೂ ಅದನ್ನು ಸರಿ ಮಾಡುವ ಕೆಲಸ ಮಾಡುತ್ತೇವೆ. ನಿನ್ನೆ ರಾತ್ರಿಯೇ ಬೆಳಗಾವಿಗೆ ಬಂದಿರುವ ಯಡಿಯೂರಪ್ಪ ಅವರು ಇಂದು ಬೆಳಗ್ಗೆ ಎಲ್ಲ ನಾಯಕರ ಜೊತೆ ಸಭೆ ಮಾಡಿದ್ದಾರೆ. ಈ ವೇಳೆ ಅವರ ನೇತೃತ್ವದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಹಾಗಾಗಿ, ಇಂದು ಎಲ್ಲ ನಾಯಕರು, ಕಾರ್ಯಕರ್ತರು ಬಂದಿದ್ದು, ಸಂಘಟಿತವಾಗಿ, ನಾವೆಲ್ಲಾ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಗೂ ನನಗೂ 30 ವರ್ಷಗಳ ಸಂಬಂಧವಿದೆ. ವಿರೋಧ ಪಕ್ಷದ ನಾಯಕನಾಗಿ, ಪಕ್ಷ ಸಂಘಟಿಸಿದ್ದೇನೆ. ಎರಡು ಬಾರಿ ಜಿಲ್ಲೆಯ ಉಸ್ತುವಾರಿಯಾಗಿ ಈ ಭಾಗದ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ. ಸದನದಲ್ಲಿ ಜಿಲ್ಲೆ ಮತ್ತು ನೆಲ, ಜಲದ ಬಗ್ಗೆ ಧ್ವನಿ ಎತ್ತಿದ್ದೇನೆ. ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದೇನೆ. ಆ ಹಿನ್ನೆಲೆಯಲ್ಲಿ ಬೆಳಗಾವಿ ನನ್ನ ಕರ್ಮಭೂಮಿ ಎಂದು ಅವರು, ಲೋಕಲ್ ನಾಯಕರಿಗೆ ಮತ ನೀಡುವಂತೆ ಕೈ ನಾಯಕರ ಹೇಳಿಕೆಗೆ ಬಗ್ಗೆ ಮಾತನಾಡಿ, ಇದು ಲೋಕಸಭೆ ಚುನಾವಣೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂಬುದು ಎಲ್ಲರ ಬಯಕೆಯಾಗಿದೆ ಎಂದು ಎಂದರು.