ಕರ್ನಾಟಕ

karnataka

ಸರ್ಕಾರದ ವಿರುದ್ಧ 7 ದಿನ ದೋಸ್ತಿಗಳ ಬೆಂಗಳೂರು-ಮೈಸೂರು ಪಾದಯಾತ್ರೆ; ರೂಪುರೇಷೆ ಹೇಗಿರಲಿದೆ? - BJP JDS Padayatra

By ETV Bharat Karnataka Team

Published : Jul 28, 2024, 10:43 PM IST

ಸರ್ಕಾರದ ವಿರುದ್ಧ ಬೆಂಗಳೂರಿನಿಂದ ಮೈಸೂರಿನ ತನಕ 7 ದಿನಗಳ ಕಾಲ ಬಿಜೆಪಿ - ಜೆಡಿಎಸ್​ ನಾಯಕರು ಪಾದಯಾತ್ರೆ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಉಭಯ ಪಕ್ಷದವರು ರೂಪುರೇಷೆ ಸಿದ್ಧಪಡಿಸಿದ್ದಾರೆ.

padayatra
ಬಿಜೆಪಿ - ಜೆಡಿಎಸ್​ ನಾಯಕರ ಸಭೆ (ETV Bharat)

ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಎರಡು ಹಗರಣಗಳ ವಿರುದ್ಧ ಸಮರ ಸಾರಿರುವ ಬಿಜೆಪಿ - ಜೆಡಿಎಸ್ ದೋಸ್ತಿಗಳು ಜಂಟಿಯಾಗಿ ಬೆಂಗಳೂರಿನಿಂದ ಮೈಸೂರುವರೆಗೆ ಆಗಸ್ಟ್​​ 3ರಿಂದ ಒಂದು ವಾರದ ಪಾದಯಾತ್ರೆ ಕೈಗೊಳ್ಳಲು ತೀರ್ಮಾನಿಸಿವೆ.

ಭಾನುವಾರ ನಡೆದ ಎನ್‌ಡಿಎ ಸಮನ್ವಯ ಸಭೆಯಲ್ಲಿ ಸರ್ಕಾರದ ಬೊಕ್ಕಸ ಲೂಟಿ, ಸಾವಿರಾರು ಕೋಟಿ ರೂ. ನಷ್ಟಕ್ಕೆ ಕಾರಣವಾದ ಎರಡು ಹಗರಣಗಳ ಸಿಬಿಐ ತನಿಖೆ, ಸಿಎಂ ರಾಜೀನಾಮೆ, ಪರಿಶಿಷ್ಟರ ಹಣ ದುರ್ಬಳಕೆ ವಿರುದ್ಧ ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸುವುದು ಸೂಕ್ತವೆಂದು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.

ದಿನಕ್ಕೆ 20 ಕಿ.ಮೀ. ಪಾದಯಾತ್ರೆ, ಬಹಿರಂಗ ಸಭೆ:ಬೆಂಗಳೂರಿನಿಂದ ಮೈಸೂರು 130 ಕಿ.ಮೀ. ದೂರದ ವರೆಗೆ ಪಾದಯಾತ್ರೆ ನಡೆಯಲಿದೆ. ಪ್ರತಿದಿನ ಸರಾಸರಿ 20 ಕಿ.ಮೀ. ಪಾದಯಾತ್ರೆ ನಡೆಸಲು ಚರ್ಚಿಸಲಾಗಿದೆ. ಆ. 3ರಂದು ಪಾದಯಾತ್ರೆ ಉದ್ಘಾಟನೆ ಮತ್ತು ಆ.10ರಂದು ಮೈಸೂರಲ್ಲಿ ಸಮಾರೋಪ ಸಭೆ ನಡೆಸಲಾಗುವುದು. ಇದರ ಜೊತೆಗೆ ಪಾದಯಾತ್ರೆ ಮಾರ್ಗದಲ್ಲಿ ಐದು ಬಹಿರಂಗ ಸಭೆಗಳನ್ನು ನಡೆಸಬೇಕು ಎಂದು ಚರ್ಚಿಸಲಾಗಿದೆ.

ಪ್ರತಿದಿನ ಸುಮಾರು 5 ಸಾವಿರ ಜನರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಆಸುಪಾಸಿನ ಕ್ಷೇತ್ರಗಳಿಂದ ಹೆಚ್ಚು ಜನರನ್ನು ಪಾದಯಾತ್ರೆಯಲ್ಲಿ ಭಾಗೀದಾರರನ್ನಾಗಿಸಬೇಕು. ಎರಡೂ ಪಕ್ಷದ ಕಾರ್ಯಕರ್ತರು, ನಾಯಕರು ಸಕ್ರಿಯವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತೀರ್ಮಾನಿಸಲಾಗಿದೆ.

ಬಿಡದಿ ಬಳಿ ಆ. 3ಕ್ಕೆ ಪಾದಯಾತ್ರೆಗೆ ಚಾಲನೆ:ಬೆಂಗಳೂರಿನಿಂದ ಮೈಸೂರುವರೆಗೆ ನಡೆಯಲಿರುವ 130 ಕಿ.ಮೀ. ದೂರ ಅಂತರದ ಏಳು ದಿನಗಳ ಜಂಟಿ ಪಾದಯಾತ್ರೆ ಚಳವಳಿಗೆ ನೈಸ್ ರಸ್ತೆ ಜಂಕ್ಷನ್ (ಬಿಡದಿ ಬಳಿ) ಆ.3ರಂದು ಚಾಲನೆ ನೀಡಲಾಗುವುದು. ಮಾಜಿ ಸಿಎಂ ಬಿ.ಎಸ್ .ಯಡಿಯೂರಪ್ಪ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತಿತರ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ಮೈಸೂರಿನಲ್ಲಿ ಆ.10ಕ್ಕೆ ಸಮಾರೋಪ:ಮುಡಾ ಅಕ್ರಮದ ಕೇಂದ್ರ ಬಿಂದುವಾದ ಮೈಸೂರಿನಲ್ಲಿ ಪಾದಯಾತ್ರೆ ಸಮಾರೋಪ ಸಮಾವೇಶ ಆ.10ರಂದು ನಡೆಯಲಿದೆ. ಬೃಹತ್ ಸಮಾರೋಪ ಸಮಾರಂಭದ ಮೂಲಕ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಲು ದೋಸ್ತಿಗಳು ಮುಂದಾಗಿದ್ದಾರೆ. ಈ ಸಮಾರೋಪ ಸಮಾರಂಭದಲ್ಲಿ ಪಕ್ಷದ ಕೇಂದ್ರ ನಾಯಕರು ಭಾಗವಹಿಸಲಿದ್ದು, ಎನ್‌ಡಿಎ ಮಿತ್ರಪಕ್ಷಗಳ ಕೆಲ ಹಿರಿಯ ನಾಯಕರು ಪಾಲ್ಗೊಳ್ಳುವ ಸಾಧ್ಯತೆಗಳಿವೆ.

ಪಾದಯಾತ್ರೆ ವ್ಯವಸ್ಥಿತವಾಗಿ ಉದ್ದೇಶಿತ ಗುರಿ ಸಾಧಿಸುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆ ರೂಪಿಸಲು ಸಮನ್ವಯ ಸಮಿತಿ ರಚಿಸಲಾಗುತ್ತಿದೆ. ಬಿಜೆಪಿ-ಜೆಡಿಎಸ್‌ನ ತಲಾ ನಾಲ್ವರು ಹಿರಿಯರು ಸೇರಿದ ಸಮಿತಿ ರಚನೆಯಾಗಿ ಒಂದೆರಡು ದಿನಗಳಲ್ಲಿ ಸಭೆ ಸೇರಲಿದೆ. ಆ. 3ರಿಂದ 10ರವರೆಗೆ ಪ್ರತಿದಿನದ ಪಾದಯಾತ್ರೆ ನಿರ್ವಹಣೆಗೆ ತಂಡಗಳು, ಉಪಾಹಾರ, ಊಟ, ವಸತಿ, ಉಸ್ತುವಾರಿಗಳನ್ನು ಗುರುತಿಸಿ, ಜವಾಬ್ದಾರಿ ಹಂಚಿಕೆ ಮಾಡುವ ಉದ್ದೇಶದಿಂದ ಸಮನ್ವಯ ಸಮಿತಿ ರಚಿಸಲಾಗುತ್ತಿದೆ. ಇನ್ನು ಸೋಮವಾರ ಅರಮನೆ ಮೈದಾನದಲ್ಲಿ ಬಿಜೆಪಿ ಪೂರ್ವಭಾವಿ ಸಭೆ ನಡೆಯಲಿದ್ದು, ಪಾದಯಾತ್ರೆಗೆ ಮಾಡಿಕೊಳ್ಳಬೇಕಾದ ಸಿದ್ಧತೆಗಳು ಹಾಗೂ ಪ್ರಭಾರ ತಂಡಗಳ ರಚನೆ, ಜವಾಬ್ದಾರಿ ಹಂಚಿಕೆ ಬಗ್ಗೆ ಚರ್ಚೆಯಾಗಲಿದೆ.

ಇದನ್ನೂ ಓದಿ:ಆಸ್ಪತ್ರೆಯಿಂದ ಡಿಸ್ಚಾರ್ಜ್; ನಾನು ಕ್ಷೇಮವಾಗಿದ್ದೇನೆ, ಆತಂಕ ಬೇಡ: ಹೆಚ್.ಡಿ. ಕುಮಾರಸ್ವಾಮಿ - H D Kumaraswamy Discharged

ABOUT THE AUTHOR

...view details