ಬೆಂಗಳೂರು:ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು, ರಾಜ್ಯ ಪೊಲೀಸ್ ಮೀಸಲು ಪಡೆಯ ಐಜಿಪಿ ಅವರಿಗೆ ವಿಚಾರಣೆ ಬರುವಂತೆ ನೋಟಿಸ್ ನೀಡಿತ್ತು. ನೋಟಿಸ್ ಸ್ವೀಕರಿಸಿದ ಸಂದೀಪ್ ಪಾಟೀಲ್ ಇಂದು ವಿಚಾರಣೆಗೆ ಹಾಜರಾಗಿ ಉತ್ತರ ಕೊಟ್ಟಿದ್ದಾರೆ.
ಕಳೆದ ಫೆಬ್ರುವರಿಯಲ್ಲಿಯೂ ಸಂದೀಪ್ ಪಾಟೀಲ್ ಅವರು ಎಸ್ಐಟಿ ಮುಂದೆ ಹಾಜರಾಗಿದ್ದರು. ಇದೀಗ ಮತ್ತೆ ವಿಚಾರಣೆಗೆ ಬರುವಂತೆ ನಿನ್ನೆ ನೀಡಲಾಗಿದ್ದ ನೊಟೀಸ್ ಸಂಬಂಧ ಎಸ್ಐಟಿ ಮುಖ್ಯಸ್ಥ ಮನೀಶ್ ಕರ್ಬೀಕರ್ ಮುಂದೆ ಹಾಜರಾದರು.
ಕೆ.ಜಿ.ನಗರ, ಅಶೋನಗರ ಹಾಗೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 4 ಪ್ರಕರಣಗಳ ಪೈಕಿ ಎರಡು ಕೇಸ್ಗಳಲ್ಲಿ ಕಳೆದ ಫೆಬ್ರವರಿಯಲ್ಲಿ ಸಂದೀಪ್ ಪಾಟೀಲ್ ಅವರಿಂದ ಹೇಳಿಕೆ ದಾಖಲಿಸಿಕೊಂಡಿದ್ದ ಎಸ್ಐಟಿ, ಇಂದು ಮತ್ತೆರಡು ಪ್ರಕರಣಗಳ ಕುರಿತಂತೆ ಹೇಳಿಕೆಯನ್ನು ದಾಖಲಿಸಿಕೊಂಡಿದೆ.
ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಪ್ರಕರಣದ ಸೂತ್ರಧಾರಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ, ಮೂವರು ಇನ್ಸ್ಪೆಕ್ಟರ್ ಹಾಗೂ ಖಾಸಗಿ ಸೈಬರ್ ಲ್ಯಾಬ್ ಮಾಲೀಕ ಸೇರಿದಂತೆ ಐವರನ್ನು ಬಂಧಿಸಿದೆ.
ಐಪಿಎಸ್ ಅಧಿಕಾರಿ ಪುತ್ರನ ವಿಚಾರಣೆ: ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಿ ಜೊತೆ ನಂಟು ಆರೋಪ ಸಂಬಂಧ ಹಿರಿಯ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಪುತ್ರನಾದ ರಿಷಬ್ ಎಂಬಾತನನ್ನು ಎಸ್ಐಟಿ ವಿಚಾರಣೆ ನಡೆಸಿದೆ. ಕೆಲ ವರ್ಷಗಳಿಂದ ಈತನೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ ಶ್ರೀಕಿ, ಬಿಟ್ ಕಾಯಿನ್ ಬಳಸಿಕೊಂಡು 49 ಲಕ್ಷ ರೂಪಾಯಿ ಮೌಲ್ಯದ ಕಾರು ಖರೀದಿಸಿದ್ದ. ಅದರೆ, ಕಾರಿನ ನೋಂದಣಿ ಸಂಖ್ಯೆ ರಿಷಬ್ ಹೆಸರಿನಲ್ಲಿದೆ. ಇತ್ತೀಚೆಗೆ ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಬಂಧಿಸಿ ಆತನನ್ನ ವಿಚಾರಣೆಗೆ ಒಳಪಡಿಸಿದಾಗ ಕಾರಿನ ವಿಷಯ ತಿಳಿದು ಬಂದಿತ್ತು. ನೊಟೀಸ್ ನೀಡಿ ನಿನ್ನೆ ಐಪಿಎಸ್ ಅಧಿಕಾರಿ ಪುತ್ರನನ್ನ ವಿಚಾರಣೆ ನಡೆಸಿತ್ತು.
ಇದನ್ನೂ ಓದಿ:ಬಿಟ್ ಕಾಯಿನ್ ಹಗರಣ: ತಲೆಮರೆಸಿಕೊಂಡ ಡಿವೈಎಸ್ಪಿ ಸುಳಿವು ನೀಡಿದರೆ ಬಹುಮಾನ; ಎಸ್ಐಟಿ ಘೋಷಣೆ