ಕರ್ನಾಟಕ

karnataka

ETV Bharat / state

ಬಿಟ್ ಕಾಯಿನ್ ಪ್ರಕರಣ: ಡಿವೈಎಸ್ಪಿ ಶ್ರೀಧರ್ ಪೂಜಾರಿಗೆ ನಿರೀಕ್ಷಣಾ ಜಾಮೀನು - Bitcoin case - BITCOIN CASE

ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ ಪಿ ಶ್ರೀಧರ್ ಪೂಜಾರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

Bitcoin case  High Court  DySP Sridhar Pujari  anticipatory bail
ಹೈಕೋರ್ಟ್ (ETV Bharat)

By ETV Bharat Karnataka Team

Published : Jun 28, 2024, 8:27 AM IST

ಬೆಂಗಳೂರು:ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್ವರ್ಡ್ ಬದಲಾವಣೆ ಮಾಡಿದ ಆರೋಪ ಸಂಬಂಧ ಬಂಧನ ಭೀತಿ ಎದುರಿಸುತ್ತಿರುವ ರಾಜ್ಯ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಶ್ರೀಧರ್ ಕೆ. ಪೂಜಾರ್​ಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಬಂಧನ ಭೀತಿಯಲ್ಲಿದ್ದ ಶ್ರೀಧರ್ ಪೂಜಾರಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ಪೀಠ ಈ ಆದೇಶ ಮಾಡಿದೆ. ತನಿಖಾಧಿಕಾರಿಗೆ ಕರೆದಾಗ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸಬೇಕು ಎಂದು ಅರ್ಜಿದಾರರಿಗೆ ಇದೇ ವೇಳೆ ಸೂಚಿರುವ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಎರಡೆರಡು ಬಾರಿ ಎಫ್‌ಐಆರ್‌ ದಾಖಲಿಸಿರುವ ಪೊಲೀಸರ ಕ್ರಮಕ್ಕೆ ಅಸಮಾಧಾನವನ್ನೂ ವ್ಯಕ್ತಪಡಿಸಿತು.

ಅರ್ಜಿದಾರರ ಪರ ವಾದ:ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌ ವಾದ ಮಂಡಿಸಿ, ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಮುಖ್ಯಸ್ಥರು ಬದಲಾವಣೆಯಾದಾಗ ಹಳೆಯ ತಂಡದ ಪೊಲೀಸರ ವಿರುದ್ಧ ಹೊಸ ತಂಡದ ಪೊಲೀಸ್‌ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ ದಾಖಲಿಸಿರುವುದು ಎರಡನೇ ಎಫ್‌ಐಆರ್‌ ಇದಾಗಿದೆ. ಒಂದು ಎಫ್‌ಐಆರ್‌ನಲ್ಲಿ ಹೈಕೋರ್ಟ್‌ ಅರ್ಜಿದಾರರ ವಿರುದ್ದ ಬಲವಂತದ ಕ್ರಮ ಜರುಗಿಸಬಾರದು ಎಂದು ಆದೇಶ ಮಾಡಿದ ನಂತರ ಎಸ್‌ಐಟಿ ಎರಡನೇ ಎಫ್‌ಐಆರ್‌ ದಾಖಲಿಸಿದೆ. ಈಗಾಗಲೇ ಪ್ರಕರಣ ಸಂಬಂಧ ಬಂಧಿಸಿರುವ ಮೂವರು ಆರೋಪಿಗಳಿಂದ ಯಾವುದೇ ಪರಿಕರ ವಶಕ್ಕೆ ಪಡೆದಿಲ್ಲ. ಅರ್ಜಿದಾರರ ಮೇಲೆ ಇತರ ಆರೋಪಿಗಳು ಯಾವುದೇ ಹೆಳಿಕೆ ನೀಡಿಲ್ಲ ಎಂದು ವಿವರಿಸಿದರು.

ಅಲ್ಲದೇ, ಪ್ರಕರಣ ನಡೆದ ನಾಲ್ಕು ವರ್ಷಗಳ ನಂತರ ಅರ್ಜಿದಾರರನ್ನು ಬಂಧಿಸಲು ಯತ್ನಿಸಲಾಗುತ್ತಿದೆ. ತನಿಖೆಯಲ್ಲಿ ಸಾಕಷ್ಟು ವಿಳಂಬ ಮಾಡಲಾಗಿದೆ. ಈಗಾಗಲೆ ಪ್ರಕರಣ ಸಂಬಂಧ ಅರ್ಜಿದಾರರು ತನಿಖಾಧಿಕಾರಿಗೆ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಿದ್ದಾರೆ. ಸದ್ಯ ಅವರನ್ನು ಬಂಧಿಸಲು ಯತ್ನಿಸಲಾಗುತ್ತಿದೆ. ಒಂದೊಮ್ಮೆ ಪೂಜಾರ್‌ ಬಂಧನವಾದರೆ ಅವರ ಇಡೀ ವೃತ್ತಿ ಬದುಕು ನಾಶವಾಗಲಿರುವ ಕಾರಣ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿದರು.

ರಾಜ್ಯ ಸರ್ಕಾರ ಪರ ವಕೀಲರು, ಬಿಟ್‌ ಕಾಯಿನ್‌ ಹಗರಣದ ರೂವಾರಿ ಶ್ರೀಕಾಂತ್‌ ಅಲಿಯಾಸ್‌ ಶ್ರೀಕಿ ಭಾಗಿಯಾಗಿರುವ ಪ್ರಕರಣದಲ್ಲಿ ಆತನನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡು ಕೆಲವು ಲೈವ್‌ ಸರ್ವರ್‌ಗಳನ್ನು ಹ್ಯಾಕ್ ಮಾಡಿ ಅಲ್ಲಿಂದ ಬಿಟ್‌ಕಾಯಿನ್‌ಗಳನ್ನು ಕದಿಯಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದೆ. ಸಾವಿರಾರೂ ಕೋಟಿ ರೂಪಾಯಿ ಮೌಲ್ಯದ ಹಗರಣ ಇದಾಗಿದೆ. ಶ್ರೀಕಿ ಮತ್ತಿತರ ಆರೋಪಿಗಳ ವಿಚಾರದಲ್ಲಿ ಅರ್ಜಿದಾರರು ಸಮರ್ಪಕ ತನಿಖೆ ನಡೆಸಿಲ್ಲ. ಅವರೊಂದಿಗೆ ಶಾಮೀಲಾಗಿದ್ದಾರೆ. ಹಾಗಾಗಿ, ಸದ್ಯ ಎಸ್‌ಐಟಿ ಸಮರ್ಪಕ ತನಿಖೆ ನಡೆಸುತ್ತಿದ್ದು, ಅರ್ಜಿದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಆದ್ದರಿಂದ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಕೋರಿದರು.

ಪ್ರಕರಣದ ಹಿನ್ನೆಲೆ:ಡಾರ್ಕ್‌ನೆಟ್‌ ಮೂಲಕ ಮಾದಕ ವಸ್ತು ಖರೀದಿಸಿದ ಆರೋಪದ ಮೇಲೆ 2020ರ ನವೆಂಬರ್‌ನಲ್ಲಿ ಶ್ರೀಕಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆಗ ಸಿಸಿಬಿಯಲ್ಲಿ ಪೂಜಾರ್ ತನಿಖಾಧಿಕಾರಿಯಾಗಿದ್ದರು. ಈ ವೇಳೆ 2019ರ ಜುಲೈ-ಆಗಸ್ಟ್ ಅವಧಿಯಲ್ಲಿ ಕರ್ನಾಟಕ ಸರ್ಕಾರದ ಇ-ಆಡಳಿತ ಘಟಕದ 11.5 ಕೋಟಿ ರೂಪಾಯಿ ದೋಚಿದ್ದ ಪ್ರಕರಣವು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ 10ನೇ ಆರೋಪಿಯಾದ ಶ್ರೀಕಿಯನ್ನು 2020ರ ಏ.14ರಿಂದ 17ರವರೆಗೆ ಅಕ್ರಮವಾಗಿ ವಶದಲ್ಲಿಟ್ಟುಕೊಂಡು ಬಿಟ್ ಕಾಯಿನ್ ವರ್ಗಾವಣೆ, ಪಾಸ್ವರ್ಡ್ ಬದಲಾವಣೆ ಇತ್ಯಾದಿ ಕೃತ್ಯಕ್ಕೆ ಬಳಕೆ ಮಾಡಿದ ಆರೋಪ ಪೂಜಾರ್ ಮೇಲಿದೆ. ಸಿಐಡಿ ಎಸ್‌ಐಟಿ ಪೊಲೀಸರು 2024ರ ಜ.24 ರಂದು ದಾಖಲಿಸಿದ ದೂರಿನ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಪೂಜಾರ್‌ ಹೈಕೋರ್ಟ್‌ ಮೊರೆ ಹೋಗಿದ್ದರು.

ಇದನ್ನೂ ಓದಿ:ಪೋಕ್ಸೋ ಪ್ರಕರಣ: ಯಡಿಯೂರಪ್ಪ ವಿರುದ್ಧ ಸಲ್ಲಿಸಲಾದ ಚಾರ್ಜ್​ಶೀಟ್​ನಲ್ಲೇನಿದೆ? - CID charge sheet against BSY

ABOUT THE AUTHOR

...view details