ಬೆಂಗಳೂರು:ಜಲಸಂಪನ್ಮೂಲ ಇಲಾಖೆಯಲ್ಲಿ ಗುತ್ತಿಗೆದಾರರಿಗೆ ನೀಡಬೇಕಾದ ಬಾಕಿ ಬಿಲ್ ಮೊತ್ತ ಬೆಟ್ಟದಷ್ಟಿದೆ. ಗುತ್ತಿಗೆದಾರರ ಸಂಘ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಾಕಿ ಬಿಲ್ ಪಾವತಿಸುವಂತೆ ಒತ್ತಡ ಹಾಕುತ್ತಿದ್ದರೂ, ಬಾಕಿ ಬಿಲ್ ಮಾತ್ರ ಇನ್ನಷ್ಟು ಹೆಚ್ಚುತ್ತಲೇ ಇದೆ. ಅದರಲ್ಲೂ ಜಲಸಂಪನ್ಮೂಲ ಇಲಾಖೆ ಬಿಲ್ ಬಾಕಿ ಉಳಿಸಿಕೊಂಡಿರುವಲ್ಲಿ ಮುಂಚೂಣಿಯಲ್ಲಿದೆ.
ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಿಲ್ ಮೊತ್ತ (ETV Bharat) ಗ್ಯಾರಂಟಿ ಹೊರೆಯಲ್ಲಿ ಆಡಳಿತ ನಡೆಸಲು ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಲು ತಿಣುಕಾಡುತ್ತಿದೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ದೊಡ್ಡ ಸದ್ದು ಮಾಡಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಆದರೆ, ಬಾಕಿ ಬಿಲ್ ಪಾವತಿಸಲು ಮಾತ್ರ ಹರಸಾಹಸ ಪಡುತ್ತಿದೆ. ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಬಿಲ್ ಮೊತ್ತ ಉಲ್ಬಣಗೊಂಡಿದೆ.
ನೀರಾವರಿ ಇಲಾಖೆಯಲ್ಲಿ 12,069 ಕೋಟಿ ಬಿಲ್ ಬಾಕಿ:ಜಲಸಂಪನ್ಮೂಲ ಇಲಾಖೆಯ ಅಧೀನದಲ್ಲಿರುವ ನಿಗಮಗಳಲ್ಲಿ ವಿವಿಧ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರಿಗೆ ಪಾವತಿ ಮಾಡಲು ಪ್ರಸ್ತುತ ಬಾಕಿ ಇರುವ ಬಿಲ್ಗಳ ಮೊತ್ತ 12,069.09 ಕೋಟಿ ರೂ.
ನಾಲ್ಕು ನಿಗಮಗಳಲ್ಲಿ ಸಾವಿರಾರು ಕೋಟಿ ರೂ. ಬಿಲ್ ಬಾಕಿ ಉಳಿದುಕೊಂಡಿದೆ. ಕೃಷ್ಣ ಭಾಗ್ಯ ಜಲ ನಿಗಮದಲ್ಲಿ 4,679 ಕೋಟಿ ರೂ. ಬಿಲ್ ಬಾಕಿ ಉಳಿದುಕೊಂಡಿದೆ. ಕರ್ನಾಟಕ ನೀರಾವರಿ ನಿಗಮದಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳಿಗೆ ಪಾವತಿಸದೇ ಉಳಿದ ಬಾಕಿ ಬಿಲ್ ಮೊತ್ತ 3,896 ಕೋಟಿ ರೂ. ಆಗಿದೆ. ಇನ್ನು ಕಾವೇರಿ ನೀರಾವರಿ ನಿಗಮದಲ್ಲಿ ಸುಮಾರು 1,519 ಕೋಟಿ ರೂ. ಬಾಕಿ ಬಿಲ್ ಇದೆ. ಅದೇ ರೀತಿ ವಿಶ್ವೇಶ್ವರಯ್ಯ ಜಲ ನಿಗಮದಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳಿಗೆ ಪಾವತಿಸದೇ ಬಾಕಿ ಉಳಿದುಕೊಂಡ ಬಿಲ್ ಮೊತ್ತ 1,975 ಕೋಟಿ ರೂ ಎಂದು ಜಲಸಂಪನ್ಮೂಲ ಇಲಾಖೆ ಮಾಹಿತಿ ನೀಡಿದೆ.
ಒಂದು ವರ್ಷದಲ್ಲಿ 12,206 ಕೋಟಿ ಬಿಲ್ ಪಾವತಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ಬಾಕಿ ಉಳಿದುಕೊಂಡಿರುವ ಬಿಲ್ಗಳನ್ನು ಪಾವತಿ ಮಾಡುತ್ತಿದೆ. ಆದರೆ, ಎಷ್ಟೇ ಬಾಕಿ ಬಿಲ್ ಪಾವತಿ ಮಾಡಿದರೂ ಬಾಕಿ ಬಿಲ್ ಬೆಟ್ಟ ಮಾತ್ರ ಕರಗುತ್ತಿಲ್ಲ.
ಕಳೆದ ಒಂದು ವರ್ಷದಿಂದ ಈವರೆಗೆ ಕೃಷ್ಣ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮಗಳಿಂದ ಒಟ್ಟು 10,098 ಸಂಖ್ಯೆಯ ಕಾಮಗಾರಿಗಳಿಗೆ 12,206.56 ಕೋಟಿ ಮೊತ್ತವನ್ನು ಪಾವತಿ ಮಾಡಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಮಾಹಿತಿ ನೀಡಿದೆ. ಪಾವತಿಯಾದ ಬಳಿಕನೂ ನೀರಾವರಿ ಇಲಾಖೆಯಲ್ಲಿ ಸುಮಾರು 12,069 ಕೋಟಿ ರೂ. ಬಿಲ್ ಪಾವತಿಸಲು ಉಳಿದುಕೊಂಡಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾಲಮಿತಿಯೊಳಗೆ ಹಂತ ಹಂತವಾಗಿ ಪಾವತಿ: ಇತ್ತ ಜಲಸಂಪನ್ಮೂಲ ಇಲಾಖೆಯಡಿ ಬಾಕಿ ಉಳಿದಿರುವ ಗುತ್ತಿಗೆದಾರರ ಬಿಲ್ನ್ನು ಕಾಲಮಿತಿಯೊಳಗೆ ಹಂತ ಹಂತವಾಗಿ ಪಾವತಿ ಮಾಡಲಾಗುತ್ತಿದೆ ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿ ತಿಂಗಳು ಬಾಕಿ ಬಿಲ್ಗಳನ್ನು ಪಾವತಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
2024-25ನೇ ಸಾಲಿನಲ್ಲಿ ಒದಗಿಸಿದ ಆಯವ್ಯಯ ಅನುದಾನದಲ್ಲಿ ಬಂಡವಾಳ ವೆಚ್ಚ ಹಾಗೂ ಇತರೆ ಲೆಕ್ಕಶೀರ್ಷಿಕೆಯಡಿಯಲ್ಲಿ ಕಾಮಗಾರಿಗಳಿಗೆ 9,987 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಅನುದಾನವನ್ನು 1/12ನೇ ಆಧಾರದ ಮೇಲೆ ಪ್ರತಿ ತಿಂಗಳು ಆಯಾ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯ ಕಾಮಗಾರಿಗಳು ಹಾಗೂ ಭೂಸ್ವಾಧೀನ ಬಿಲ್ಗಳ ಪಾವತಿಗೆ ಬಾಕಿ ಇರುವುದರಿಂದ ಕಾಯ್ದಿರಿಸಿದ ಎಲ್ಲಾ ಅನುದಾನವನ್ನು ಕಾಲಮಿತಿಯೊಳಗೆ ಪ್ರಸಕ್ತ ಸಾಲಿನಲ್ಲಿ ಖರ್ಚು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ.
ಗುತ್ತಿಗೆದಾರರು ಹೇಳುವುದೇನು?: ಈ ಕುರಿತು ಮಾತನಾಡಿರುವ ಗುತ್ತಿಗೆದಾರ ರವೀಂದ್ರ, ''ಬಾಕಿ ಬಿಲ್ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಸರ್ಕಾರಕ್ಕೆ ನಾವು ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಸಾವಿರಾರು ಕೋಟಿ ಬಿಲ್ ಹಾಗೆ ಬಾಕಿ ಉಳಿದುಕೊಂಡಿದೆ. ರಾಜ್ಯ ಸರ್ಕಾರ ಬಿಲ್ ಪಾವತಿ ಬಗ್ಗೆ ಇನ್ನೂ ನಿರ್ಲಕ್ಷ್ಯ ತೋರುತ್ತಿದೆ. ಏನು ಮಾಡಬೇಕು ಎಂದು ನಮಗೆ ತೋಚುತ್ತಿಲ್ಲ'' ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕಾಮಗಾರಿ ಮುಗಿದರೂ ಗುತ್ತಿಗೆದಾರರ ಬಿಲ್ ಪಾವತಿಸದ ಸರ್ಕಾರ: ಹೈಕೋರ್ಟ್ ಅಸಮಾಧಾನ