ಬೆಂಗಳೂರು: ರೈಲ್ವೆ ತಡೆಗೋಡೆಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಅಕ್ಟೋಬರ್ 25ರಂದು ರಾತ್ರಿ ಹೆಚ್ಎಎಲ್ ಸಂಚಾರಿ ಠಾಣೆ ವ್ಯಾಪ್ತಿಯ ಕಾಮಧೇನು ಸ್ವಾಸ್ಥ್ಯ ಕೇಂದ್ರದ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಮಮೂರ್ತಿ ನಗರದ ನಿವಾಸಿ ರೋಹನ್ ಜಯಕೃಷ್ಣನ್ (21) ಮೃತ ಬೈಕ್ ಸವಾರ. ರಾತ್ರಿ ವೇಳೆ ದರೋಡೆಕೋರರ ದಾಳಿಯಿಂದ ಪಾರಾಗುವ ಯತ್ನದಲ್ಲಿ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಅಕ್ಟೋಬರ್ 25ರ ನಸುಕಿನ ಜಾವ 3.30ರ ಸುಮಾರಿಗೆ ರೋಹನ್ ತಮ್ಮ ಬೈಕ್ನಲ್ಲಿ ಸೇಲಂ ಬ್ರಿಡ್ಜ್ ಕಡೆ ಹೊರಟಿದ್ದಾಗ ವೇಗವಾಗಿ ಬಂದು ರಸ್ತೆಯ ಕೊನೆಯಲ್ಲಿದ್ದ ಕಬ್ಬಿಣದ ಗ್ರಿಲ್ಗಳನ್ನೊಳಗೊಂಡ ರೈಲ್ವೆ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದರು. ಪರಿಣಾಮ, ರೋಹನ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ಅಜಾಗರೂಕ ಚಾಲನೆಯಿಂದ ಸಾವು ಸಂಭವಿಸಿರುವುದಾಗಿ ಪ್ರಕರಣ ದಾಖಲಿಸಿದ್ದರು.