ಬೆಂಗಳೂರು:ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್ ಅವರ ಪತ್ನಿ ಟ್ರೋಲ್ ಪೇಜ್‍ಗಳ ಕಾಟದಿಂದ ಬೇಸತ್ತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಫೋಟೋಗಳನ್ನ ಡಿಲೀಟ್ ಮಾಡಲು ಹಣ ಪಡೆದು ವಂಚಿಸಲಾಗಿದೆ ಎಂದು ರಜತ್ ಕಿಶನ್ ಅವರ ಪತ್ನಿ ಅಕ್ಷಿತಾ ನೀಡಿರುವ ದೂರಿನ ಅನ್ವಯ ಬೆಂಗಳೂರು ಪಶ್ಚಿಮ ವಿಭಾಗದ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿರುವ ರಜತ್ ಕಿಶನ್ ಹಾಗೂ ಅವರ ಮಾಜಿ ಗೆಳತಿಯ ಕೆಲ ಹಳೆಯ ಫೋಟೋಗಳನ್ನ ಕೆಲ ಟ್ರೋಲ್ ಪೇಜ್‍ಗಳಲ್ಲಿ ಅಪ್ಲೋಡ್ ಮಾಡಲಾಗಿದೆ. ಅವುಗಳನ್ನ ಗಮನಿಸಿದ್ದ ರಜತ್ ಅವರ ಪತ್ನಿ, ಫೋಟೋಗಳನ್ನ ಡಿಲೀಟ್ ಮಾಡುವಂತೆ ಪೇಜ್ ಅಡ್ಮಿನ್‌ಗಳಿಗೆ ಮೆಸೇಜ್ ಮಾಡಿದ್ದಾರೆ. ಫೋಟೋ ಡಿಲೀಟ್ ಮಾಡಲು ಹಣಕ್ಕೆ ಬೇಡಿಕೆಯಿಟ್ಟಾಗ 6,500 ರೂ ಹಣವನ್ನ ಕಳುಹಿಸಲಾಗಿದೆ. ಹಣ ಪಡೆದ ಬಳಿಕ ಬೇರೆ ಟ್ರೋಲ್ ಪೇಜ್‍ಗಳಲ್ಲಿ ಮತ್ತೆ ಫೋಟೋಗಳನ್ನ ಅಪ್‌ಲೋಡ್ ಮಾಡಲಾಗುತ್ತಿದ್ದು ಮತ್ತೆ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಆದ್ದರಿಂದ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಂದು ಅಕ್ಷಿತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.