ಬೆಂಗಳೂರು: "ಮೈಸೂರಿನ ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳಿಗೆ ದೊಡ್ಡ ಹಿನ್ನಡೆಯಾಗಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಬೇಗನೆ ಬಿ ರಿಪೋರ್ಟ್ ಹಾಕಿಸಿಕೊಂಡು ಪ್ರಕರಣ ಮುಚ್ಚಿಹಾಕುವ ಪ್ರಯತ್ನದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೊಡ್ಡ ಆಘಾತವಾಗಿದೆ. ಲೋಕಾಯುಕ್ತ ಸಂಸ್ಥೆಯ ತನಿಖೆಯನ್ನು ಮಾಧ್ಯಮಗಳೇ ತೋರಿಸಿವೆ. ರಾತ್ರಿ 8 ರಿಂದ 9 ಗಂಟೆಗೆ ಸಿದ್ದರಾಮಯ್ಯನವರ ಬಾಮೈದ ನೋಟಿಸ್ ಕೊಡದೆ ಇದ್ದರೂ ಮೈಸೂರಿನ ಲೋಕಾಯುಕ್ತ ಕಚೇರಿಗೆ ಭೇಟಿ ಕೊಡುತ್ತಿದ್ದರು" ಎಂದು ದೂರಿದರು.
"ಸಿಎಂ ಕುಟುಂಬಕ್ಕೆ ಎಷ್ಟು ಮುಕ್ತ ವ್ಯವಸ್ಥೆ ಇತ್ತೆಂದು ಅವತ್ತು ಕೂಡ ಬಹಿರಂಗವಾಗಿದೆ. ಮೈಸೂರಿನ ಮುಡಾ ಹಗರಣದ ವಿಷಯದಲ್ಲಿ ಬಿಜೆಪಿ- ಜೆಡಿಎಸ್ ಪಕ್ಷ ಒಟ್ಟಾಗಿ ಪಾದಯಾತ್ರೆ ಮಾಡಿದ್ದೆವು. ನಮ್ಮ ಹೋರಾಟದ ಪರಿಣಾಮವಾಗಿ ಮುಖ್ಯಮಂತ್ರಿಗಳ ಧರ್ಮಪತ್ನಿ 14 ನಿವೇಶನ ಹಿಂತಿರುಗಿಸುತ್ತೇವೆ ಎಂದು ರಾತ್ರೋರಾತ್ರಿ ಮುಡಾಗೆ ಪತ್ರ ಬರೆದಿದ್ದರು. ಆ ಪತ್ರದ ಮೂಲಕ ಹಗರಣದಿಂದ ಹೊರಕ್ಕೆ ಬಂದ ಭ್ರಮೆಯಲ್ಲಿ ಮುಖ್ಯಮಂತ್ರಿಯವರೂ ಇದ್ದರು. ಇವತ್ತಿನ ಜಾರಿ ನಿರ್ದೇಶನಾಲಯದ (ಇ.ಡಿ) ನೋಟಿಸ್ನಿಂದ ಅವರಿಗೆ ಆಘಾತ ಆಗಿರುವುದರಲ್ಲಿ ಎರಡು ಮಾತಿಲ್ಲ" ಎಂದು ಅಭಿಪ್ರಾಯಪಟ್ಟರು.
"ಇ.ಡಿಗೆ ಅವರದೇ ಆದ ನಿಯಮಗಳಿರುತ್ತವೆ. ಅದರ ಪ್ರಕಾರ ಅವರು ಮುಂದುವರೆಯುತ್ತಾರೆ. ಇ.ಡಿ. ನೋಟಿಸ್ ರಾಜಕೀಯ ಪ್ರೇರಿತ ಎಂಬುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾವಿರಾರು ಕೋಟಿ ಮೌಲ್ಯದ ಬಡವರ ಪಾಲಾಗಬೇಕಾದ ನಿವೇಶನಗಳ ಅಕ್ರಮ ಹಂಚಿಕೆ ನಡೆದಿತ್ತು. ಈ ದೊಡ್ಡ ಹಗರಣದ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ" ಎಂದು ಹೇಳಿದರು.