ETV Bharat Karnataka

ಕರ್ನಾಟಕ

karnataka

ETV Bharat / state

ಬಿಬಿಎಂಪಿ ಬಜೆಟ್​ನಲ್ಲಿ 'ಬ್ರ್ಯಾಂಡ್ ಬೆಂಗಳೂರಿಗೆ' ಸಿಂಹಪಾಲು: ಯಾವುದಕ್ಕೆ ಎಷ್ಟು ಅನುದಾನ? - ಬ್ರ್ಯಾಂಡ್ ಬೆಂಗಳೂರು

ಬಿಬಿಎಂಪಿ ಬಜೆಟ್​ನಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ 1,580 ಕೋಟಿ ರೂ. ಮೀಸಲಿರಿಸಲಾಗಿದೆ.

bbmp budget
ಬಿಬಿಎಂಪಿ ಬಜೆಟ್
author img

By ETV Bharat Karnataka Team

Published : Feb 29, 2024, 3:18 PM IST

Updated : Mar 1, 2024, 3:10 PM IST

ಬೆಂಗಳೂರು:2024-25ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಜೆಟ್‌ನಲ್ಲಿ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಈ ಉದ್ದೇಶಕ್ಕಾಗಿ ಪ್ರತ್ಯೇಕ ಖಾತೆ ತೆರೆದು ಆದ್ಯತೆಯ ಮೇರೆಗೆ ಹಣ ಪಾವತಿ ಮಾಡಲಾಗುತ್ತಿದೆ. ಒಟ್ಟು 1,580 ಕೋಟಿ ರೂ.ಗಳನ್ನು ಬ್ರ್ಯಾಂಡ್ ಬೆಂಗಳೂರು ಯೋಜನೆಗಾಗಿ ಮೀಸಲಿರಿಸಲಾಗಿದೆ.

ಸಮಗ್ರ ಸಂಚಾರ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕಾಗಿ 200 ಕೋಟಿ ರೂಪಾಯಿಗಳ ಸೀಡ್ ಮನಿ ಒದಗಿಸಲಾಗಿದೆ. ಪರಿಷ್ಕೃತ ಮಹಾನಕ್ಷೆ-2015ರಂತೆ ಮುಖ್ಯರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿಗೆ ಒಟ್ಟಾರೆ 130 ಕೋಟಿ ರೂ. ಒದಗಿಸಲಾಗಿದೆ. ಸಂಚಾರಯುಕ್ತ ರಸ್ತೆಗಳ ಯೋಜನೆಯಡಿ ರಾಜಕಾಲುವೆ ಇಕ್ಕೆಲಗಳ ರಸ್ತೆ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ನೀಡಲಾಗಿದೆ.

ಸುಗಮ ಸಂಚಾರಕ್ಕಾಗಿ ಗುಂಡಿರಹಿತ ವೈಟ್ ಟಾಪಿಂಗ್ ರಸ್ತೆಗಳನ್ನು ನಿರ್ಮಿಸಲು 300 ಕೋಟಿ ರೂ.ಗಳನ್ನು ಮತ್ತು ಸಂಯುಕ್ತ ಮೆಟ್ರೋ-ರಸ್ತೆಯಲ್ಲಿ ಡಬಲ್ ಡೆಕ್ಕರ್ ರಸ್ತೆಗಳನ್ನು ನಿರ್ಮಿಸಲು ಯೋಜಿಸಲಾಗಿದ್ದು, ಅದಕ್ಕೆ 100 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ವಾಹನಗಳ ಸುಗಮ ಸಂಚಾರ ಮತ್ತು ವಾಹನ ನಿಲುಗಡೆಗೆ ಆದ್ಯತೆಯನ್ನು ನೀಡುವ ಸಲುವಾಗಿ ನಗರದಲ್ಲಿ ವಾಹನ ನಿಲುಗಡೆ ನೀತಿ-2021 ಜಾರಿಗೆ ತರಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯ 225 ವಾರ್ಡ್‌ಗಳಲ್ಲಿ ನಿರ್ವಹಣೆಯ ಉದ್ದೇಶಕ್ಕಾಗಿ ಪ್ರತಿ ವಾರ್ಡ್​ಗೆ 75 ಲಕ್ಷ ರೂಪಾಯಿಗಳು ಮತ್ತು ಅಭಿವೃದ್ಧಿ ಕಾಮಗಾರಿಗಳಿಗಾಗಿ ಪ್ರತಿ ವಾರ್ಡ್​ಗೆ ರೂ. 1.25 ಕೋಟಿಯಂತೆ ಒಟ್ಟಾರೆ 450 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ.

ಬ್ರ್ಯಾಂಡ್ ಬೆಂಗಳೂರು-ಹಸಿರು ಬೆಂಗಳೂರು: ಪಾಲಿಕೆಯಲ್ಲಿ ಪ್ರಸಕ್ತ ಸಾಲಿನಿಂದ ಅರಣ್ಯ, ತೋಟಗಾರಿಕೆ ಹಾಗೂ ಕೆರೆಗಳ ವಿಭಾಗವನ್ನು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆ ವಿಭಾಗ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಪರಿಸರದಲ್ಲಿನ ಗಿಡ-ಮರಗಳ ಮಹತ್ವವನ್ನು ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಮೂಡಿಸುವ ಸಲುವಾಗಿ 'ಹಸಿರು ರಕ್ಷಕ' ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದ್ದು, ಪ್ರಸ್ತುತ ಸಾಲಿನಲ್ಲಿ 2 ಲಕ್ಷ ಸಸಿಗಳನ್ನು ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಸಿಗಳ ಬೇಡಿಕೆಗೆ 2 ಹೊಸ ಹೈಟೆಕ್ ಸಸ್ಯ ಕ್ಷೇತ್ರಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಸ್ತಾಪಿಸಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿನ ಹೊಸ ಲೇಔಟ್‌ಗಳಲ್ಲಿ ಹೊಸದಾಗಿ ಉದ್ಯಾನವನಗಳ ಅಭಿವೃದ್ಧಿ ನಿರ್ವಹಣೆ ಮುಂತಾದ ಕಾರ್ಯಗಳಿಗಾಗಿ 35 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಕೆರೆಗಳ ಅಭಿವೃದ್ದಿ ಮತ್ತು ಸುಧಾರಣೆಗೆ ಕೆರೆಗಳ ಗಡಿಗಳಿಗೆ ತಂತಿಬೇಲಿಯನ್ನು ಹಾಕಲು 35 ಕೋಟಿ ರೂ. ಗಳನ್ನು ಒದಗಿಸಲಾಗಿದೆ.

ಕಲ್ಯಾಣಿಗಳ ಪುನರುಜ್ಜೀವನ: ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಿಸಲು ತೆರೆದ ಬಾವಿಗಳನ್ನು ಹಾಗೂ ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಜತೆಗೆ ಪಾಲಿಕೆ ವ್ಯಾಪ್ತಿಯ ರಾಜಕಾಲುವೆಗಳ ಅಭಿವೃದ್ದಿಯನ್ನು ವಿಶ್ವ ಬ್ಯಾಂಕ್, ಕೇಂದ್ರ ಸರ್ಕಾರದ ನೆರವಿನಿಂದ ಅಭಿವೃದ್ದಿಪಡಿಸಲಾಗುವುದು ಎಂದು ಪಾಲಿಕೆ ಬಜೆಟ್​ನಲ್ಲಿ ಪ್ರಸ್ತಾಪಿಸಿದೆ.

ನೇರ ಪಾವತಿ ಅಡಿ ಪೌರ ಕಾರ್ಮಿಕರ ನೇಮಕ: ಈ ಸಾಲಿನಲ್ಲಿ 16 ಸಾವಿರ ಪೌರ ಕಾರ್ಮಿಕರನ್ನು ನೇರ ಪಾವತಿ ಅಡಿಯಲ್ಲಿ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಹೇಳಿದರು.

ಗುರುವಾರ ಬಜೆಟ್ ಭಾಷಣದಲ್ಲಿ ಮಾಹಿತಿ ನೀಡಿದ ಅವರು, 8 ವಲಯಗಳಲ್ಲಿ ಅಧಿಕಾರ ವಿಕೇಂದ್ರಿಕರಣದ ಭಾಗವಾಗಿ ವಲಯಗಳಲ್ಲಿನ ಆಡಳಿತವನ್ನು ಬಲಪಡಿಸಲು ಒಂದೊಂದು ವಲಯಕ್ಕೆ ಒಬ್ಬ ಐಎಎಸ್ ಅಧಿಕಾರಿಯನ್ನು ನಿಯೋಜಿಸಲಾಗುತ್ತದೆ. ಪಾಲಿಕೆ ಸಿಬ್ಬಂದಿ ಮತ್ತು ಅಧಿಕಾರಿಗಳ ಸಲುವಾಗಿ ಒಂದು ಗ್ರಂಥಾಲಯ ಮತ್ತು ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ:ಬೆಂಗಳೂರು: ಪುರಭವನದಲ್ಲಿ ನಾಳೆ ಬಿಬಿಎಂಪಿ ಬಜೆಟ್ ಮಂಡನೆ

Last Updated : Mar 1, 2024, 3:10 PM IST

ABOUT THE AUTHOR

...view details