ಮೈಸೂರು:ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಅರಳಿ ಮರವೊಂದು ಬೇರು ಸಮೇತ ಉರುಳಿದ ಪರಿಣಾಮ ಸಮೀಪದಲ್ಲಿದ್ದ ನಾಲ್ಕು ಮನೆಗಳು ಜಖಂಗೊಂಡಿರುವ ಘಟನೆ ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದಲ್ಲಿ ನಡೆದಿದೆ.
ಸಾಕಷ್ಟು ವರ್ಷಗಳ ಕಾಲದ ಬೃಹತ್ ಅರಳಿ ಮರ ಬಿದ್ದ ಪರಿಣಾಮ ಬಸವನಪುರ ಗ್ರಾಮದ ಸಿದ್ದರಾಜು, ಮೂಗಯ್ಯ, ಮಲ್ಲೇಶ್, ಚೆನ್ನೇಗೌಡ ಎಂಬುವವರ ಮನೆಗಳ ಮೇಲೆ ಉರುಳಿ ಬಿದ್ದಿದ್ದು ಕುಟುಂಬಸ್ಥರು ಮತ್ತು ಜಾನುವಾರುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ಯಾವುದೇ ಅವಘಡ ಸಂಭವಿಸಿಲ್ಲ. ಸ್ಥಳಕ್ಕೆ ನಂಜನಗೂಡಿನ ಚೆಸ್ಕಾಂ ಅಧಿಕಾರಿಗಳು ಧಾವಿಸಿ ಮುರಿದು ಬಿದ್ದಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿದ್ದಾರೆ. ಹಾನಿಯಾಗಿರುವ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸ್ಥಳೀಯರಾದ ಸಣ್ಣೇಗೌಡ ಮಾತನಾಡಿ, ನಿನ್ನೆ ತಡರಾತ್ರಿ ಸುರಿದ ಭಾರಿ ಗಾಳಿ - ಮಳೆಯಿಂದಾಗಿ 13 ವಿದ್ಯುತ್ ಕಂಬಗಳು ಮತ್ತು ಮನೆಗಳಿಗೆ ಹಾನಿಯಾಗಿದೆ. ಇದರಿಂದ ಮೂರ ಲಕ್ಷದಷ್ಟು ನಷ್ಟ ಉಂಟಾಗಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಹಾನಿಗೊಳಗಾಗಿರುವ ಮನೆಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.