ಬೆಂಗಳೂರು: ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಸ್ಐಟಿ ವಿಚಾರಣೆಗೆ ಹಾಜರಾಗದೇ ಉಳಿದಿರುವ ಭವಾನಿ ರೇವಣ್ಣ ಅವರ ನಡೆ ಕುತೂಹಲ ಮೂಡಿಸಿದೆ. ಅತ್ತ ಹಾಸನದಲ್ಲೂ ಇಲ್ಲ, ಇತ್ತ ಬೆಂಗಳೂರಿನಲ್ಲೂ ಇರದ ಭವಾನಿ ರೇವಣ್ಣ ಎಲ್ಲಿದ್ದಾರೆ? ಯಾರ ಆಶ್ರಯದಲ್ಲಿದ್ದಾರೆ? ಎಂಬುದರ ಕುರಿತು ಎಸ್ಐಟಿ ಅಧಿಕಾರಿಗಳ ತಂಡ ಶೋಧ ಆರಂಭಿಸಿದೆ.
ಮತ್ತೊಂದೆಡೆ, ಯಾರ ಸಂಪರ್ಕಕ್ಕೂ ಸಿಗದೆ ಉಳಿದಿರುವ ಭವಾನಿ ರೇವಣ್ಣ ಹೈಕೋರ್ಟ್ ಜನಪ್ರತಿನಿಧಿಗಳ ಪೀಠದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದ್ದು, ಅವರ ವಿರುದ್ಧ 'ತನಿಖೆಗೆ ಅಸಹಕಾರ'ದ ಅಸ್ತ್ರ ಬಳಸಲು ಎಸ್ಐಟಿ ಸಿದ್ಧತೆ ಮಾಡಿಕೊಂಡಿದೆ.
ನೋಟಿಸ್ ಮೂಲಕ ಸೂಚಿಸಿ ಮನೆಗೆ ತೆರಳಿದ್ದ ಎಸ್ಐಟಿ ಅಧಿಕಾರಿಗಳು ಸುಮಾರು ಏಳು ಗಂಟೆಗಳ ಕಾಲ ಕಾದರೂ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗಿಲ್ಲ ಎಂಬ ಅಂಶವನ್ನು ನ್ಯಾಯಾಲಯದ ಮುಂದಿರಿಸಲು ಎಸ್ಐಟಿ ಸಿದ್ಧತೆ ಮಾಡಿಕೊಂಡಿದೆ. ಮೇ 2ರಂದು ಕೆ.ಆರ್. ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮೇ 15ರಂದು ಭವಾನಿ ರೇವಣ್ಣ ಅವರಿಗೆ ಎಸ್ಐಟಿ ನೋಟಿಸ್ ನೀಡಿತ್ತು. ಇದಕ್ಕೆ ಪ್ರತಿಯಾಗಿ 'ಪ್ರಕರಣದಲ್ಲಿ ತನಿಖೆಗೆ ಅಗತ್ಯವಿದ್ದರೆ ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ತಾವು ಇರುವುದಾಗಿ' ಪತ್ರದ ಮುಖೇನ ತಿಳಿಸಿದ್ದ ಭವಾನಿ ರೇವಣ್ಣ ನಂತರ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.