ಬೆಂಗಳೂರು:ಸಂತ್ರಸ್ತೆಯ ಅಪಹರಣ ಆರೋಪದಲ್ಲಿ ಭವಾನಿ ರೇವಣ್ಣ ಅವರಿಗೆ ಈ ಹಿಂದೆ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನುನನ್ನು ಹೈಕೋರ್ಟ್ ವಿಸ್ತರಿಸಿದೆ. ಭವಾನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ, ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದೆ. ಅಲ್ಲದೆ, ಅಲ್ಲಿಯವರೆಗೂ ಈ ಹಿಂದೆ ಮಂಜೂರು ಮಾಡಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ವಿಸ್ತರಿಸಿ ಆದೇಶಿಸಿದೆ.
ಅರ್ಜಿದಾರರು ನ್ಯಾಯಾಲಯದ ಆದೇಶದಂತೆ ಮೂರು ದಿನಗಳ ಕಾಲ ವಿಚಾರಣೆಗೆ ಹಾಜರಾಗಿದ್ದಾರೆ. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ವಿವರಣೆ ನೀಡಿದ್ದಾರೆ. ಆದ್ದರಿಂದ ನಿರೀಕ್ಷಣಾ ಜಾಮೀನು ತಿರಸ್ಕರಿಸಬೇಕು ಎಂಬ ಸರ್ಕಾರದ ಪರ ವಾದವನ್ನು ತಿರಸ್ಕರಿಸುತ್ತಿದ್ದು, ಮಧ್ಯಂತರ ನಿರೀಕ್ಷಣಾ ಜಾಮೀನು ವಿಸ್ತರಣೆ ಮಾಡಲಾಗುತ್ತಿದೆ ಎಂದು ಪೀಠ ತಿಳಿಸಿದೆ.
ಸರ್ಕಾರದ ಪರ ವಾದ ಮಂಡಿಸಿ, ಅರ್ಜಿದಾರ ಭವಾನಿ ತನಿಖೆಗೆ ಸಹಕಾರ ನೀಡುತ್ತಿಲ್ಲ. ಎಲ್ಲವೂ ಸುಳ್ಳು ಮಾಹಿತಿ ನಿಡುತ್ತಿದ್ದಾರೆ. ಯಾವುದೇ ಪ್ರಶ್ನೆಗೂ ಸರಿಯಾದ ಉತ್ತರ ನೀಡುತ್ತಿಲ್ಲ. ಇಡೀ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರು ಪ್ರಮುಖ ಆರೋಪಿಯಾದ್ದಾರೆ. ಅವರು ಸಂತ್ರಸ್ತೆಯ ಅಪಹರಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಸೂಕ್ತ ರೀತಿಯಲ್ಲಿ ಸಹಕಾರ ನೀಡದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಬೇಕಾಗಿದೆ. ಆದ ಕಾರಣ ಈಗಾಗಲೇ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನು ರದ್ದಪಡಿಸಬೇಕು ಎಂದು ಕೋರಿದರು.
ಈ ವೇಳೆ ಪೀಠ, ಯಾವ ಕಾರಣಕ್ಕೆ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು ಎಂಬುದರ ಕುರಿತು ವಿವರಿಸಬೇಕು. ಯಾವ ಕಾರಣಕ್ಕೆ ಅವರು ವಶಕ್ಕೆ ಬೇಕು ಎಂದು ತಿಳಿಸಬೇಕು ಎಂದು ಕೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ರವಿವರ್ಮ ಕುಮಾರ್, ಆರೋಪ ಪಟ್ಟಿ ಸಲ್ಲಿಕೆಯಾಗುವವರೆಗೂ ಕೋರ್ಟ್ ಈ ರೀತಿಯ ಪ್ರಶ್ನೆಗಳನ್ನು ಕೇಳುವುದಕ್ಕೆ ಅವಕಾಶವಿಲ್ಲ. ಯಾವ ಕಾರಣಕ್ಕೆ ಬಂಧನ ನೀಡಬೇಕು ಎಂದು ಪ್ರಶ್ನಿಸಿದರೆ ತನಿಖೆ ಮಾಡಲು ಸಾಧ್ಯವೇ ಇರುವುದಿಲ್ಲ. ಅದೆನ್ನೆಲ್ಲಾ ಕೋರ್ಟ್‌ಗೆ ಹೇಳುವಂತಿಲ್ಲ ಎಂದರು.