ಕರ್ನಾಟಕ

karnataka

ETV Bharat / state

ಎಲ್ ಕೆ ಅಡ್ವಾಣಿಗೆ ಭಾರತರತ್ನ ಘೋಷಣೆ, ಬಿಜೆಪಿ ನಾಯಕರಿಂದ ಅಭಿನಂದನೆ ಸುರಿಮಳೆ

ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಣೆ ಮಾಡಿರುವ ಹಿನ್ನೆಲೆ ಬಿಜೆಪಿ ನಾನಾ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

Congratulation from BJP leaders
ಭಾರತ ರತ್ನ ಪುರಸ್ಕೃತ ಎಲ್ ಕೆ ಅಡ್ವಾಣಿ ಅವರಿಗೆ ಬಿಜೆಪಿ ನಾಯಕರಿಂದ ಅಭಿನಂದನೆ

By ETV Bharat Karnataka Team

Published : Feb 3, 2024, 6:46 PM IST

Updated : Feb 3, 2024, 11:05 PM IST

ಎಲ್ ಕೆ ಅಡ್ವಾಣಿಗೆ ಬಿಜೆಪಿ ನಾಯಕರಿಂದ ಅಭಿನಂದನೆ

ಬೆಂಗಳೂರು: ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ಅವರಿಗೆ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ಘೋಷಿಸಿರುವ ಹಿನ್ನೆಲೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ ಸೇರಿದಂತೆ ವಿವಿಧ ಬಿಜೆಪಿ ನಾಯಕರು ಅಭಿನಂದನೆ ತಿಳಿಸಿದ್ದಾರೆ.

ಶ್ರೀರಾಮನ ಹೋರಾಟ ಆರಂಭಿಸಿದವರು ಅಡ್ವಾಣಿ:ಇವತ್ತು ಈ ದೇಶದ‌ 140 ಕೋಟಿ‌ ಜನ ಸಂತಸ ಪಡುವ ದಿನ. ಶ್ರೀರಾಮನ ಹೋರಾಟ ಆರಂಭಿಸಿದವರೇ ಅಡ್ವಾಣಿ ಅವರು. ಅಡ್ವಾಣಿ ಅವರನ್ನು ಕಡೆಗಣಿಸ್ತಾರೆ ಅಂತಾ ಅಂದ್ಕೊಂಡಿದ್ರು. ಯಾವ ಕಾಲಕ್ಕೆ ಏನು‌ ಕೊಡಬೇಕೆಂದು ಮೋದಿ ಅವರಿಗೆ ಚೆನ್ನಾಗಿ ಗೊತ್ತು. ಅಡ್ವಾಣಿ ಅವರಿಗೆ ಭಾರತ ರತ್ನ ಕೊಡಬೇಕೆಂಬ ಆಲೋಚನೆ ಮೋದಿಯವರಿಗೆ ಮೊದಲಿನಿಂದಲೂ ಇತ್ತು. ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಿರುವುದು ಸಂತಸದ ವಿಚಾರ ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಹರ್ಷ ವ್ಯಕ್ತಪಡಿಸಿದ್ದಾರೆ.

ಪರ್ಯಾಯ ರಾಜಕೀಯ ಶಕ್ತಿ ಹುಟ್ಟುಹಾಕಿರುವ ಭೀಷ್ಮ :ಧೀಮಂತ ರಾಜಕಾರಿಣಿ, ಬಿಜೆಪಿ ಭೀಷ್ಮ, ಮಾಜಿ ಉಪಪ್ರಧಾನಿ ಎಲ್. ಕೆ. ಆಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದು ಅತ್ಯಂತ ಸ್ವಾಗತಾರ್ಹ. ತಮ್ಮ ರಥಯಾತ್ರೆ ಮೂಲಕ ಭಾರತೀಯರ ಸಾಂಸ್ಕೃತಿಕ ಅಸ್ಮಿತೆ ಬಡಿದೆಬ್ಬಿಸಿ, ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವ ಮೂಲಕ ಈ ದೇಶಕ್ಕೆ ಪರ್ಯಾಯ ರಾಜಕೀಯ ಶಕ್ತಿ ನೀಡಿದ ಶ್ರೀ ಅಡ್ವಾಣಿ ಅವರು ಸ್ವಾತಂತ್ರ್ಯೋತ್ತರ ಆಧುನಿಕ ಭಾರತ ನಿರ್ಮಾಣದ ನಾಯಕರಲ್ಲಿ ಅಗ್ರಗಣ್ಯರು. ಅಡ್ವಾಣಿ ಅವರಿಗೆ ಭಾರತ ರತ್ನ ಸಂದಿರುವುದು ಪ್ರಶಸ್ತಿಯ ಗರಿಮೆ ಹೆಚ್ಚಿಸಿದೆ ಎಂದು ಪ್ರತಿಪಕ್ಷದ ನಾಯಕ ಅಶೋಕ್ ಟ್ವೀಟ್ ಮಾಡಿದ್ದಾರೆ.

ಭಾರತದ ಸೇವಕನಿಗೆ ಒಲಿದ ಭಾರತ ರತ್ನ:ಬೊಮ್ಮಾಯಿ ಬಣ್ಣನೆ

ಭಾರತದ ಸೇವಕನಿಗೆ ಒಲಿದ ಭಾರತ ರತ್ನ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ. ಭಾರತದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಹಿರಿಯ ಮುತ್ಸದ್ಧಿ ನಾಯಕ, ದಣಿವರಿಯದ ಧೀಮಂತ, ಅವಿಶ್ರಾಂತ ಹೋರಾಟಗಾರ ಭಾರತದ ಮಾಜಿ ಉಪಪ್ರಧಾನಿ ಶ್ರೀ ಎಲ್.ಕೆ. ಅಡ್ವಾಣಿಯವರಿಗೆ ಭಾರತ ರತ್ನ ಪುರಸ್ಕಾರ ದೊರೆತಿರುವುದು ನಿಜಕ್ಕೂ ಅತ್ಯಂತ ಸಂತಸದ ವಿಚಾರ. ಭಾರತ ರತ್ನ ಎಲ್.ಕೆ. ಅಡ್ವಾಣಿಯವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಅಡ್ವಾಣಿಗೆ ಸೂಕ್ತ ಸಂದರ್ಭದಲ್ಲಿ ಭಾರತ ರತ್ನ ಗೌರವ : ಅಡ್ವಾಣಿ ಅವರು ಅತ್ಯಂತ ಹಿರಿಯರು. ಸೂಕ್ತ ಸಂದರ್ಭದಲ್ಲಿ ಗೌರವ ನೀಡಲಾಗಿದೆ. ದೇಶ‌ ಒಗ್ಗೂಡಬೇಕೆಂದು ಅಡ್ವಾಣಿ ಅವರು ನೇತೃತ್ವ ವಹಿಸಿದ್ದವರು. ಅವರಿಗೆ‌ ನೀಡಬೇಕಾದ ಗೌರವವನ್ನ‌ ಇವತ್ತು ಮೋದಿ ಅವರು ನೀಡಿದ್ದಾರೆ ಎಂದು ಮಾಜಿ ಸಚಿವ ಗೋಪಾಲಯ್ಯ ಶುಭಾಶಯ ಕೋರಿದ್ದಾರೆ.

ಅಡ್ವಾಣಿಗೆ ಭಾರತ ರತ್ನ ನೀಡಿದ್ದು ಖುಷಿ ತಂದಿದೆ: ಇಂದು ದೇಶದ ಜನತೆ, ಬಿಜೆಪಿ ಕಾರ್ಯಕರ್ತರಿಗೆ ಸುದಿನ. ಉಕ್ಕಿನ ಮನುಷ್ಯ, ಉಪಪ್ರಧಾನಿಗೆ ಭಾರತದ ಶ್ರೇಷ್ಠ ಪ್ರಶಸ್ತಿ ಭಾರತ ರತ್ನ ನೀಡಿರೋದು ಖುಷಿ ತಂದಿದೆ. ಪ್ರಧಾನಿ ಮೋದಿ‌ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ತಿಳಿಸಿದ್ದಾರೆ.

ಅಡ್ವಾಣಿಗೆ ಭಾರತ ರತ್ನ ನೀಡಿದ್ದು, ಪ್ರಶಸ್ತಿ ಗೌರವ ಹೆಚ್ಚಿಸಿದೆ: ಆರಗ ಜ್ಞಾನೇಂದ್ರ.

ಬಿಜೆಪಿಯ ಹಿರಿಯ ನಾಯಕ‌ ಲಾಲ್ ಕೃಷ್ಣ ಅಡ್ವಾ‌ಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಶಿವಮೊಗ್ಗದಲ್ಲಿ ತಿಳಿಸಿದ್ದಾರೆ. ಭಾರತ ದೇಶವನ್ನು ಸುತ್ತಾಡಿ,ಭಾರತವನ್ನು‌ ಜೋಡಿಸಿ, ಭಾರತದ ಸಂಸ್ಕೃತಿಯನ್ನು ಜೋಡಿಸಿದ ನಮ್ಮ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿರುವುದು ನನಗೆ ಅತ್ಯಂತ ಸಂಭ್ರಮ ತಂದಿದೆ. ಅಯೋಧ್ಯೆಯಲ್ಲಿ ಇಂದು ರಾಮಮಂದಿರ ಯಶಸ್ವಿಯಾಗಿದೆ ಅಂದರೆ, ಅದಕ್ಕೆ ಅಡ್ವಾಣಿಯವರ ರಥಯಾತ್ರೆ ಕಾರಣ, ಅವರಿಗೆ ಸಿಕ್ಕ ಭಾರತ ರತ್ನ ಪ್ರಶಸ್ತಿ ನಿಜಕ್ಕೂ ಅರ್ಥ ಪೂರ್ಣ ಎಂದು ಅಭಿನಂದಿಸಿದ್ದಾರೆ.

ಅಡ್ವಾಣಿ ಅವರು ಅಪ್ರತಿಮ ರಾಜಕಾರಣಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ,
ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ದೇಶ ಕಂಡ ಅಪ್ರತಿಮ ರಾಜಕಾರಣಿ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದ್ದ ಶ್ರೇಷ್ಠ ವ್ಯಕ್ತಿತ್ವ ಅವರದು. ಎಲ್.ಕೆ.ಅಡ್ವಾಣಿಯವರಿಗೆ ಭಾರತ ರತ್ನ ಗೌರವ ಲಭಿಸಿರುವುದು ಈ ದೇಶದ ಕೋಟ್ಯಂತರ ಜನರಿಗೆ ಸಂತಸ ತಂದಿದೆ. ಪಕ್ಷ ಮತ್ತು ರಾಜ್ಯದ ಜನತೆಯ ಪರ ಎಲ್.ಕೆ.ಅಡ್ವಾಣಿಯವರಿಗೆ ಅಭಿನಂದನೆಗಳು ಎಂದು ತಿಳಿಸಿದರು.

ಇದನ್ನೂಓದಿ:ಎಲ್.ಕೆ. ಅಡ್ವಾಣಿಗೆ ಭಾರತ ರತ್ನ: ಮಾಜಿ ಸಿಎಂ ಯಡಿಯೂರಪ್ಪ, ಹೆಚ್​ಡಿಕೆ ಅಭಿನಂದನೆ

Last Updated : Feb 3, 2024, 11:05 PM IST

ABOUT THE AUTHOR

...view details