ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮದವರ ಜೊತೆ ಮಾತನಾಡಿದರು. ಚಿಕ್ಕೋಡಿ:ಬಿಜೆಪಿ ಹಿರಿಯ ನಾಯಕ ಹಾಗೂ ಹಳೆ ತಲೆಮಾರಿನ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ಒಳ್ಳೆಯ ನಿರ್ಧಾರ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶನಿವಾರ ರಾಯಬಾಗ ಪಟ್ಟಣದಲ್ಲಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದರು. ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ಒಳ್ಳೆಯದು, ಅವರಿಗೆ ಈ ಹಿಂದೆಯೇ ಪ್ರಶಸ್ತಿ ನೀಡಬೇಕಿತ್ತು. ಹಳೆಯ ತಲೆಮಾರಿನ ಬಿಜೆಪಿ ನಾಯಕರು ಅವರು, ಅವರಿಗೆ ಕೊಟ್ಟಿದ್ದು ಒಳ್ಳೆಯದಾಗಿದೆ, ಅದಕ್ಕೆ ಅವರು ಅರ್ಹರಿದ್ದಾರೆ. ಅವರಿಗೆ ತುಂಬಾ ತಡವಾಗಿ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ಜೀವಿತಾವಧಿಯಲ್ಲಿ ಈ ಪ್ರಶಸ್ತಿ ನೀಡಿರುವುದು ಸರ್ಕಾರದ ಈ ನಿರ್ಧಾರ ಒಳ್ಳೆಯದು ಎಂದು ಸ್ವಾಗತಿಸಿದರು.
ಜಾತಿ ಕಾರಣಕ್ಕೆ ಚನ್ನಕೇಶವ ದೇವಸ್ಥಾನದ ಗರ್ಭಗುಡಿಗೆ ಬಿಡಲಿಲ್ಲ ಎಂದು ಕನಕ ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಗಂಭೀರ ಆರೋಪಕ್ಕೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ನಮ್ಮಲ್ಲಿ ಇನ್ನೂ ಅಂತಹ ವ್ಯವಸ್ಥೆ ಇದೆ. ಇದರ ವಿರುದ್ಧ ಹೋರಾಟ ಜಾಗೃತಿ ಆಗಬೇಕಿದೆ. ನಾವೆಲ್ಲರೂ ಮನುಷ್ಯರೇ ಎನ್ನುವ ಭಾವನೆ ಬರಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡಬೇಕಿದೆ ಎಂದು ಸಚಿವ ಜಾರಕಿಹೋಳಿ ಹೇಳಿದರು.
ಅಥಣಿ ಶಾಸಕ ಲಕ್ಷ್ಮಣ ಸವದಿ ಮತ್ತೆ ಬಿಜೆಪಿಗೆ ಸೇರಲಿದ್ದಾರೆ ಎಂಬ ವದಂತಿ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಬಿಜೆಪಿಯವರು ಬರ್ತಾರೆ ಅಂತಾರೆ, ನಾವು ಅವರು ಬಿಜೆಪಿಗೆ ಹೋಗಲ್ಲಾ ಅಂತೀವಿ ಅಷ್ಟೇ ಎಂದು ಪ್ರತಿಕ್ರಿಯಿಸಿದರು.
ಪ್ರಗತಿ ಪರಿಶೀಲನಾ ಸಭೆ:ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ರಾಯಬಾಗದಲ್ಲಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಏರ್ಪಡಿಸಲಾಗಿತ್ತು, ಸಭೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಆದರೆ ಸಾಮಾನ್ಯವಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆ ತಾ.ಪಂ. ಕೆಡಿಪಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವುದು ಸಂಪ್ರದಾಯ. ಆದರೆ ಸಭಾಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಕೆಲ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದು ಗೊಂದಲವನ್ನುಂಟು ಮಾಡಿತು.
ಅಡ್ವಾಣಿ ದೇಶ ಕಂಡ ಅಪರೂಪದ ರಾಜಕಾರಣಿ;ಬಿಜೆಪಿ ಭೀಷ್ಮ ಎಲ್ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿರುವ ಹಿನ್ನೆಲೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹರ್ಷ ವ್ಯಕ್ತಪಡಿಸಿದ್ದು, ಶುಭಾಶಯ ಕೋರಿದ್ದಾರೆ. ಎಲ್.ಕೆ ಅಡ್ವಾಣಿ ದೇಶ ಕಂಡ ಅಪರೂಪದ ರಾಜಕಾರಣಿ. ಅಂಥ ನಾಯಕನಿಗೆ ಅತ್ಯುನ್ನತ ಗೌರವವನ್ನು ಕೇಂದ್ರ ಸರ್ಕಾರ ನೀಡಿದೆ. ಏಕತಾ ಯಾತ್ರೆ ಮೂಲಕ ದೇಶದ ಜನರನ್ನು ಒಗ್ಗೂಡಿಸುವ ಕೆಲಸವನ್ನು ಅಡ್ವಾಣಿ ಮಾಡಿದ್ದರು ಎಂದು ಸ್ಮರಿಸಿದರು.
ಅಯೋಧ್ಯೆಯ ರಾಮಮಂದಿರ ಹೋರಾಟದಲ್ಲಿ ಅಡ್ವಾಣಿ ಪಾತ್ರ ಮುಖ್ಯವಾಗಿತ್ತು. ರಥಯಾತ್ರೆ ಮೂಲಕ ಇಡೀ ದೇಶಾದ್ಯಂತ ಸಂಚರಿಸಿ ರಾಮಮಂದಿರ ಹೋರಾಟದ ಕಿಚ್ಚು ಹಚ್ಚಿದ್ದರು. ಉಪಪ್ರಧಾನಿ ಆಗಿ, ಗೃಹಸಚಿವರಾಗಿ, ಮಾಹಿತಿ-ತಂತ್ರಜ್ಞಾನ ಸಚಿವರಾಗಿಯೂ ದೇಶಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಈ ಗೌರವ ಸಿಕ್ಕಿದ್ದು ಭಾರತ ರತ್ನ ಪ್ರಶಸ್ತಿ ಗೌರವವೂ ಹೆಚ್ಚುವಂತೆ ಮಾಡಿದೆ ಎಂದು ಅಭಿನಂದಿಸಿದ್ದಾರೆ.
ಇದನ್ನೂಓದಿ:ರಾಜ್ಯದಲ್ಲಿ ನೂರು ರಾಮ ಮಂದಿರ ಜೀರ್ಣೋದ್ಧಾರಕ್ಕೆ ₹ 100 ಕೋಟಿ ಪ್ರಸ್ತಾವನೆ ಸಲ್ಲಿಸಿದ ಮುಜರಾಯಿ ಇಲಾಖೆ