ಕರ್ನಾಟಕ

karnataka

ETV Bharat / state

ಸಾಂಕೇತಿಕ ನಾಮಪತ್ರ ಸಲ್ಲಿಸಿದ ಭರತ್‌ ಬೊಮ್ಮಾಯಿ: ₹16.17 ಕೋಟಿ ಆಸ್ತಿ ವಿವರ ಘೋಷಣೆ

ಶಿಗ್ಗಾಂವಿ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಭರತ್​ ಬೊಮ್ಮಾಯಿ ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು ಪತ್ನಿ ಹಾಗೂ ಪುತ್ರನ ಹೆಸರಿನಲ್ಲಿರುವ ಒಟ್ಟು ಆಸ್ತಿ ಮೌಲ್ಯ ಘೋಷಿಸಿಕೊಂಡಿದ್ದಾರೆ.

Bharat Bommai
ಭರತ್‌ ಬೊಮ್ಮಾಯಿ (ETV Bharat)

By ETV Bharat Karnataka Team

Published : Oct 24, 2024, 7:36 PM IST

ಹಾವೇರಿ:ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಭರತ್‌ ಬೊಮ್ಮಾಯಿ ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, 16.17 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಇವರು 2.03 ಲಕ್ಷ ರೂ. ನಗದು ಹಣ ಹೊಂದಿದ್ದಾರೆ. ವಿವಿಧ ಬ್ಯಾಂಕ್‌, ಹಣಕಾಸು ಸಂಸ್ಥೆಗಳಲ್ಲಿ 4.05 ಲಕ್ಷ ರೂ. ನಿಶ್ಚಿತ ಠೇವಣಿ, ಉಳಿತಾಯ ಖಾತೆಗಳಲ್ಲಿ 1.19 ಕೋಟಿ ರೂ. ಹೊಂದಿದ್ದಾರೆ. ಸಾರ್ವಜನಿಕ ಕಂಪನಿಗಳಲ್ಲಿ 1.74 ಲಕ್ಷ ರೂ., ಖಾಸಗಿ ಕಂಪನಿಗಳಲ್ಲಿ 50 ಸಾವಿರ ರೂ., ಪಾಲುದಾರಿಕೆಯಲ್ಲಿ 1.23 ಕೋಟಿ ರೂ. ಬಂಡವಾಳ ಹೂಡಿದ್ದಾರೆ.

ಸ್ವಂತ ವಾಹನ ಇಲ್ಲ!: ಗೋಲ್ಡ್‌ ಚಿಟ್‌ ಫಂಡ್‌ನಲ್ಲಿ 70 ಸಾವಿರ ರೂ., ಮ್ಯೂಚುವಲ್‌ ಫಂಡ್‌ನಲ್ಲಿ 10.20 ಲಕ್ಷ ರೂ. ತೊಡಗಿಸಿದ್ದಾರೆ. 81.61 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊಂದಿರುವ ಇವರ ಬಳಿ ಯಾವುದೇ ವಾಹನವಿಲ್ಲ. ಇನ್ನಿತರ ಆದಾಯ, ಬಡ್ಡಿ ಸೇರಿದಂತೆ ಒಟ್ಟು 3.79 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಬೆಂಗಳೂರಿನ ಆರ್‌.ಟಿ.ನಗರದಲ್ಲಿ ಒಂದು ವಾಸದ ಮನೆ, ಬೆಂಗಳೂರಿನ ಸೆಂಚುರಿ ಎಥೋಸ್‌ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್‌ ಸೇರಿದಂತೆ 5.50 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಪತ್ನಿ ಇಬ್ಬನಿ ಬಳಿ 1.43 ಲಕ್ಷ ರೂ. ನಗದು ಹಣ, ವಿವಿಧ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ, ಉಳಿತಾಯ ಖಾತೆಗಳಲ್ಲಿ 56.32 ಲಕ್ಷ ರೂ. ಹೊಂದಿದ್ದಾರೆ. ವಿವಿಧ ಕಂಪನಿಗಳಲ್ಲಿ 33.75 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿದ್ದು, ಪಾಲುದಾರಿಕೆ ವ್ಯವಹಾರದಲ್ಲಿ 31.12 ಲಕ್ಷ ರೂ. ತೊಡಗಿಸಿದ್ದಾರೆ. ಇವರ ಬಳಿ ಮಾರುತಿ ಸ್ವಿಫ್ಟ್‌ ಕಾರು ಇದ್ದು, 1.73 ಕೋಟಿ ರೂ. ಮೌಲ್ಯದ 2,702 ಗ್ರಾಂ ಚಿನ್ನಾಭರಣ ಸೇರಿದಂತೆ ಒಟ್ಟು 3.64 ಕೋಟಿ ಮೌಲ್ಯದ ಸ್ಥಿರಾಸ್ತಿಯಿದೆ.

ಬೆಂಗಳೂರಿನ ತಾವರೆಕೆರೆ ಹೋಬಳಿ ಅಜ್ಜನಹಳ್ಳಿ ಗ್ರಾಮದಲ್ಲಿ ಒಂದು ಸೈಟ್‌, ಕೆಂಗೇರಿಯಲ್ಲಿ ಕೆಎಚ್‌ಬಿ ನಿವೇಶನ ಹಾಗೂ ಸೆಂಚುರಿ ಎಥೋಸ್‌ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್‌ ಸೇರಿದಂತೆ 2.83 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಪುತ್ರನ ಬಳಿ 40.47 ಲಕ್ಷ ಮೌಲ್ಯದ ಚರಾಸ್ತಿಯಿದೆ. ಒಟ್ಟು ಭರತ್‌ ಬೊಮ್ಮಾಯಿ ಅವರು 16.17 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

ಅಪ್ಪನಿಂದ ಸಾಲ:ಭರತ್ ಬೊಮ್ಮಾಯಿ ಗೃಹ ಸಾಲ, ವೈಯಕ್ತಿಕ ಸಾಲ ಸೇರಿದಂತೆ ಒಟ್ಟು 2.32 ಕೋಟಿ ರೂ. ಸಾಲ ಹೊಂದಿದ್ದಾರೆ. ತಂದೆ ಬಸವರಾಜ ಬೊಮ್ಮಾಯಿ ಅವರಿಂದ 5.74 ಲಕ್ಷ ರೂ. ಸಾಲ ಪಡೆದಿದ್ದಾರೆ. ಪತ್ನಿ ಇಬ್ಬನಿ ಅವರ ಹೆಸರಿನಲ್ಲಿ ಗೃಹ, ವಾಹನ ಸೇರಿದಂತೆ 1 ಕೋಟಿ ರೂ. ಸಾಲವಿದೆ.

ಅಮೆರಿಕ, ಸಿಂಗಾಪುರದಲ್ಲಿ ಶಿಕ್ಷಣ: ಭರತ್ ಬೊಮ್ಮಾಯಿ ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‍ನಲ್ಲಿ ಪದವಿ, ಸಿಂಗಾಪುರದ ಮ್ಯಾನೇಜ್ಮೆಂಟ್ ವಿವಿಯಲ್ಲಿ ಮಾಸ್ಟರ್ ಆಫ್ ಸೈನ್ಸ್ ಇನ್ ಇನ್ನೋವೇಶನ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಇದನ್ನೂ ಓದಿ:ತಂದೆಯ ಅದೃಷ್ಟದ ವಾಹನದಲ್ಲಿ ಬಂದು ನಾಮಪತ್ರ ಸಲ್ಲಿಸಿದ ಭರತ್ ಬೊಮ್ಮಾಯಿ

ABOUT THE AUTHOR

...view details