ಕರ್ನಾಟಕ

karnataka

ETV Bharat / state

ಬೊಂಬೆನಗರಿ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ: ಕ್ಷೇತ್ರದಲ್ಲಿ ಗರಿಗೆದರಿದ ಬೆಟ್ಟಿಂಗ್ ಮಾಫಿಯಾ - CHANNAPATTANA BY ELECTION

ಚನ್ನಪಟ್ಟಣ ಉಪಚುನಾವಣೆಯು ರಾಜ್ಯದ ಗಮನ ಸೆಳೆದಿದ್ದು, ಅದರಲ್ಲೂ ಹಳೆ ಮೈಸೂರು ಭಾಗದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಇದೀಗ ಅಭ್ಯರ್ಥಿಗಳ ಗೆಲುವಿನ ಕುರಿತಂತೆ ಬೆಟ್ಟಿಂಗ್​ ದಂಧೆ ಕೂಡ ಜೋರಾಗೇ ನಡೆಯುತ್ತಿದೆ.

betting
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Nov 21, 2024, 8:54 PM IST

ರಾಮನಗರ:ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚನ್ನಪಟ್ಟಣ ವಿಧಾನಸಭಾ ‌ಉಪಚುನಾವಣೆ ಫಲಿತಾಂಶ ನ.23ರಂದು ಹೊರಬೀಳಲಿದೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಸೋಲು - ಗೆಲುವಿನ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಇದರ ಜೊತೆಗೆ ಕ್ಷೇತ್ರದಲ್ಲಿ ಬೆಟ್ಟಿಂಗ್ ಕೂಡ ಜೋರಾಗಿದೆ.

ಕಾಂಗ್ರೆಸ್‍ನಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹಾಗೂ ಎನ್‍ಡಿಎ ಅಭ್ಯರ್ಥಿ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಡುವೆ ಯಾರಿಗೆ ಜಯ ಒಲಿಯಲಿದೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ. ಮತದಾರರು ಯಾರ ಪರ ಒಲವು ತೋರಿದ್ದಾರೆ ಎಂಬುದು ಒಂದು ಕಡೆಯಾದರೆ, ಎರಡೂ ಪಕ್ಷದವರು ತಮ್ಮ ಅಭ್ಯರ್ಥಿಯ ಪರ ಬಾಜಿ ಕಟ್ಟುವಲ್ಲಿ ನಿರತರಾಗಿದ್ದಾರೆ.

ಬೊಂಬೆನಗರಿಯ ಉಪಚುನಾವಣೆಗೆ ಶೇ.88.81ರಷ್ಟು ಮತದಾನವಾಗಿದೆ. ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಮತಗಳು ಚಲಾವಣೆಗೊಂಡಿರುವುದು, ಹೆಚ್ಚಿನ ಮುಸ್ಲಿಂ ಮತಗಳು, ಮಹಿಳಾ ಮತದಾರರಗಳೇ ಫಲಿತಾಂಶ ನಿರ್ಧರಿಸುವ ಅಂಶಗಳಾಗಿ ಪರಿಗಣಿತವಾಗುತ್ತಿದ್ದು, ಅವುಗಳ ಆಧಾರದ ಮೇಲೆಯೇ ಸೋಲು, ಗೆಲುವಿನ ಸಾಧ್ಯತೆಗಳು ಚರ್ಚೆಯಲ್ಲಿವೆ. ಈಗಾಗಲೇ ಹೋಟೆಲ್‍ಗಳು, ಟೀ ಅಂಗಡಿಗಳು, ಸಾರ್ವಜನಿಕ ಸ್ಥಳಗಳು ಚರ್ಚಾ ತಾಣಗಳಾಗಿದ್ದು, ಬೆಟ್ಟಿಂಗ್ ದಂಧೆಯವರು ಮತ್ತು ಬುಕ್ಕಿಗಳು ಜೂಜಿನಲ್ಲಿ ನಿರತರಾಗಿದ್ದಾರೆ.

ಬೆಟ್ಟಿಂಗ್ ಕಟ್ಟಲು ಭಯ:ಈ ಬಾರಿಯ ಚುನಾವಣೆಯಲ್ಲಿ ನಾವೆ ಗೆಲ್ಲುತ್ತೇವೆ ಎಂದು ಎರಡೂ ಪಕ್ಷದವರು ವಿಶ್ವಾಸ ವ್ಯಕ್ತಪಡಿಸುತ್ತಿದ್ದರೂ ಬೆಟ್ಟಿಂಗ್ ಕಟ್ಟಲು ಹಿಂಜರಿಯುತ್ತಿದ್ದಾರೆ. ಚುನಾವಣೆಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಲೆಕ್ಕಾಚಾರಗಳು ಉಲ್ಟಾ ಆಗುವ ಆತಂಕವೂ ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಕಾಡುತ್ತಿದೆ. ಆದರೂ ಸಹ ಕೆಲವರು ಭಯದಲ್ಲೇ ಬೆಟ್ಟಂಗ್ ಕಟ್ಟುತ್ತಿದ್ದಾರೆ.

ಲೆಕ್ಕಾಚಾರದಲ್ಲಿ ಎರಡೂ ಪಕ್ಷದ ಮುಖಂಡರು‌:ಮತದಾನ ಮುಗಿದ ಮರುದಿನದಿಂದಲೇ ಎರಡು ಪಕ್ಷಗಳ ಮುಖಂಡರು ತಮಗೆ ದೊರೆತಿರುವ ಮತಗಳ ಕುರಿತು ಲೆಕ್ಕಾಚಾರ ಆರಂಭಿಸಿದ್ದಾರೆ. ನಗರ ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ತಮಗೆ ದೊರೆತಿರಬಹುದಾದ ಲೀಡ್ ಹಾಗೂ ಎದುರಾಳಿ ಅಭ್ಯರ್ಥಿ ಪಡೆದಿರಬಹುದಾದ ಮತಗಳ ಬಗ್ಗೆ ಚರ್ಚೆಗಳು ಆರಂಭಗೊಂಡಿದೆ. ಉಪಚುನಾವಣೆಯು ರಾಜ್ಯದ ಗಮನ ಸೆಳೆದಿದ್ದು, ಅದರಲ್ಲೂ ಹಳೆ ಮೈಸೂರು ಭಾಗದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಮಂಡ್ಯ, ಮದ್ದೂರು, ಮಳವಳ್ಳಿ, ತುಮಕೂರು, ಬೆಂಗಳೂರು ಸೇರಿದಂತೆ ಬೇರೆ ಕಡೆಯಿಂದಲೂ ಚನ್ನಪಟ್ಟಣ ಉಪಚುನಾವಣೆ ಫಲಿತಾಂಶದ ಮೇಲೆ ಬಾಜಿ ಕಟ್ಟುವವರ ಸಂಖ್ಯೆ ಹೆಚ್ಚಾಗಿದೆ. ಚನ್ನಪಟ್ಟಣದವರಿಗಿಂತ ಹೆಚ್ಚಾಗಿ ಹೊರಗಿನವರೇ ಬಾಜಿ ಕಟ್ಟುವುದರಲ್ಲಿ ಆಸಕ್ತಿ ತೋರುತ್ತಿದ್ದಾರೆ.

ಯಾರು ಗೆದ್ದರೂ ಕೂದಲೆಳೆ ಅಂತರದಿಂದ ಗೆಲುವು:ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹಾಗೂ ಎನ್‍ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಡುವೆ ನೇರ ಸ್ಪರ್ಧೆ ಏರ್ಪಟಿದ್ದು, ಯಾರೇ ಗೆದ್ದರೂ ಕೂದಲೆಳೆ ಅಂತರದಲ್ಲಿ ಎಂಬ ಮಾತುಗಳು ಕೇಳಿಬರುತ್ತಿವೆ. ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಎರಡು ಕಡೆಯವರು ಬಾರಿ ಪೈಪೋಟಿ ನಡೆಸಿದ್ದು, ಎರಡು ಕಡೆಯೂ ಮತಗಳು ಹಂಚಿಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ:ರೇಷನ್ ಕಾರ್ಡ್ ರದ್ದು: 'ಪ್ರಧಾನಿ ಮನೆ ಮುಂದೆ ಧರಣಿ ನಡೆಸುವ ಧೈರ್ಯ ಬಿಜೆಪಿ ನಾಯಕರಿಗೆ ಇದೆಯೇ?': ಸಚಿವ ಎಂ.ಬಿ.ಪಾಟೀಲ್

ಕಾಂಗ್ರೆಸ್ ಲೆಕ್ಕಾಚಾರವೇನು: ಚನ್ನಪಟ್ಟಣ ಉಪಚುನಾವಣೆ ಘೋಷಣೆಗೂ ಮುನ್ನವೇ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕ್ಷೇತ್ರದಾದ್ಯಂತ ಕಾಂಗ್ರೆಸ್ ಜನಸಂಪರ್ಕ ಸಭೆಗಳನ್ನು ನಡೆಸಿತ್ತು. ಜನರ ಸಮಸ್ಯೆಗಳನ್ನು ಆಲಿಸುವ ಜೊತೆಗೆ ಕ್ಷೇತ್ರಕ್ಕೆ ಅನುದಾನವನ್ನೂ ನೀಡಿತ್ತು. ಇದಲ್ಲದೇ, ನಿವೇಶನ ರಹಿತರಿಗೆ ನಿವೇಶನ ನೀಡಲು ಜನರ ಇನ್ನಿತರ ಸಮಸ್ಯೆ ಪರಿಹರಿಸುವ ಆಶ್ವಾಸನೆ ನೀಡಲಾಗಿತ್ತು. ಸರ್ಕಾರ ಗ್ಯಾರಂಟಿ ಯೋಜನೆಗಳು, ಕಾಂಗ್ರೆಸ್‍ಗೆ ಮತ್ತೆ ಯೋಗೇಶ್ವರ್ ಹಿಂದಿರುಗಿರುವುದು ಹಾಗೂ ಸಾಂಪ್ರದಾಯಿಕ ಮತಗಳು ಕೈಹಿಡಿಯಲಿವೆ ಎಂಬ ಲೆಕ್ಕಾಚಾರದಲ್ಲಿ ಕೈ ಪಕ್ಷವಿದೆ.

ಎನ್​ಡಿಎ ಲೆಕ್ಕಾಚಾರವೇನು?:ಇನ್ನೊಂದೆಡೆ, ಎನ್​​ಡಿಎ‌ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿಯೂ ಸಾಕಷ್ಟು ನಿರೀಕ್ಷೆ ಇದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಬಲ ಒಂದೆಡೆಯಾದರೆ, ಮತ್ತೊಂದೆಡೆ ಎನ್​ಡಿಎ ಅಭ್ಯರ್ಥಿಯಾಗಿರುವುದರಿಂದ ಬಿಜೆಪಿಯ ಹಲವು ನಾಯಕರು ಕೂಡ‌ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು.‌ ಮಾಜಿ‌ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿಯ ಮಾಜಿ ಸಚಿವರು ಹಾಗೂ ಹಾಲಿ ಶಾಸಕರು ಒಗ್ಗಟ್ಟಾಗಿ ಮತಯಾಚಿಸಿದ್ದರು.

ಇದೇ ವೇಳೆ, ದೇವೇಗೌಡರ ಕುಟುಂಬ ಹಾಗೂ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಕುರಿತಂತೆ ಸಚಿವ ಜಮೀರ್ ಅಹಮದ್​ ಖಾನ್ ನೀಡಿದ್ದ ಹೇಳಿಕೆಗಳೂ ಕೂಡ ಸಾಕಷ್ಟು ಚರ್ಚೆಗೀಡಾಗಿದ್ದವು. ಈ ಹಿನ್ನೆಲೆಯಲ್ಲೂ ಕೂಡ ನಿಖಿಲ್ ಕುಮಾರಸ್ವಾಮಿ ಗೆಲುವಿನ ಪರ ಮತಗಳು ಬೀಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಇದನ್ನೂ ಓದಿ:ಪರಿಶಿಷ್ಟ ಜಾತಿಯಲ್ಲಿ ನನಗಿಂತ ಸೀನಿಯರ್​ ಖರ್ಗೆ ಇದಾರೆ, ಸಿಎಂ ಸ್ಥಾನ ಖಾಲಿ ಇಲ್ಲ : ಸಚಿವ ಕೆ ಹೆಚ್ ಮುನಿಯಪ್ಪ

ABOUT THE AUTHOR

...view details