ಬೆಂಗಳೂರು:ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕದ ಕಡಿತದಿಂದ ತೊಂದರೆಗೆ ಒಳಗಾಗದಂತೆ ಸೆಪ್ಟೆಂಬರ್ 8 ಮತ್ತು 15ರ ಭಾನುವಾರವೂ ಬೆಸ್ಕಾಂ ಉಪ ವಿಭಾಗಗಳ ಕ್ಯಾಶ್ ಕೌಂಟರ್‌ಗಳು ತೆರೆದಿರಲಿವೆ ಎಂದು ಬೆಸ್ಕಾಂ ತಿಳಿಸಿದೆ.
ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೆಸ್ಕಾಂ, ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕ ಕಡಿತದಿಂದ ತೊಂದರೆಗೆ ಒಳಗಾಗಬಾರದು ಎಂಬ ಉದ್ದೇಶದಿಂದ ವಲಯದ ಎಲ್ಲ ಉಪ ವಿಭಾಗಗಳ ಕ್ಯಾಶ್ ಕೌಂಟರ್ ಗಳನ್ನು ಈ ತಿಂಗಳ 8 ಮತ್ತು 15ರ ಭಾನುವಾರವೂ ತೆರೆಯಲು ನಿರ್ಧರಿಸಲಾಗಿದೆ. ಆನ್‌ಲೈನ್ ಪೇಮೆಂಟ್ ಬಳಸದವರ ಅನಕೂಲಕ್ಕಾಗಿ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.
ಬಿಲ್ ಬಂದ 30 ದಿನದೊಳಗೆ ವಿದ್ಯುತ್ ಶುಲ್ಕ ಪಾವತಿಸದಿದ್ದರೆ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ಕೆಇಆರ್‌ಸಿ ನಿಯಮಾವಳಿ ಅನ್ವಯ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 1ರಿಂದಲೇ ಈ ನಿಯಮ ಜಾರಿಯಾಗಿದೆ ಎಂದು ಬೆಸ್ಕಾಂ ಹೇಳಿದೆ.