ಕರ್ನಾಟಕ

karnataka

ETV Bharat / state

ಹೊಸ ಏರ್ಪೋರ್ಟ್​​ಗೆ ಯಾವುದೇ ಸ್ಥಳ ಅಂತಿಮವಾಗಿಲ್ಲ; ಮಾನದಂಡದ ಆಧಾರದಲ್ಲಿ ತೀರ್ಮಾನ: ಸಚಿವ ಎಂ.ಬಿ.ಪಾಟೀಲ್ - 2nd Airport In Bengaluru - 2ND AIRPORT IN BENGALURU

ಹೊಸ ವಿಮಾನ ನಿಲ್ದಾಣಕ್ಕೆ ಐದು ಮಾನದಂಡವನ್ನು ಪಾಲನೆ ಮಾಡಬೇಕು‌. ಈ ಮಾನದಂಡದ ಬಗ್ಗೆ ತಜ್ಞರ ಸಲಹೆ ಕೇಳಿದ್ದೇವೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.

2ND AIRPORT IN BENGALURU
ಸಚಿವ ಎಂ.ಬಿ.ಪಾಟೀಲ್ (ETV Bharat)

By ETV Bharat Karnataka Team

Published : Jul 10, 2024, 4:56 PM IST

ಸಚಿವ ಎಂ.ಬಿ.ಪಾಟೀಲ್ (ETV Bharat)

ಬೆಂಗಳೂರು:ಬೆಂಗಳೂರಲ್ಲಿ ಹೊಸ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಯಾವುದೇ ಸ್ಥಳ ಅಂತಿಮವಾಗಿಲ್ಲ. ಐದು ಮಾನದಂಡದ ಆಧಾರದಲ್ಲಿ ಸ್ಥಳವನ್ನು ಅಂತಿಮಗೊಳಿಸಲಾಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದರು.

ಬೆಂಗಳೂರಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣ ವಿಚಾರವಾಗಿ ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿ ಬೆಳೆದಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣ. ಅತಿ ದಟ್ಟಣೆ ಹೊಂದಿರುವ ವಿಮಾನ ನಿಲ್ದಾಣವಾಗಿದೆ. 2023-24ರಲ್ಲಿ ವಿಮಾನ ನಿಲ್ದಾಣದಲ್ಲಿ 37.53 ಮಿಲಿಯನ್ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ವರ್ಷಕ್ಕೆ ಸುಮಾರು 52 ಮಿಲಿಯನ್ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಕೆಂಪೇಗೌಡ ವಿಮಾನ ನಿಲ್ದಾಣ 110 ಮಿಲಿಯನ್ ಗರಿಷ್ಠ ಸಾಮರ್ಥ್ಯ ಹೊಂದಿದೆ. ಕಾರ್ಗೋ ಸಾಮರ್ಥ್ಯ 0.71 ಮಿಲಿಯನ್ ಟನ್ ಇದೆ. ಗರಿಷ್ಠ ಕಾರ್ಗೋ ಸಾಮರ್ಥ್ಯ 1.10 ಮಿಲಿಯನ್ ಟನ್ ಸಾಮರ್ಥ್ಯ ಇದೆ. 2035ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎರಡನೇ ರನ್ ವೇ ವಿಸ್ತರಣೆಗೆ ಅವಕಾಶ ಇರುವುದಿಲ್ಲ. ಇನ್ನು 2033ಕ್ಕೆ ಬಿಐಎಎಲ್ ಜೊತೆಗಿನ ವಿಶೇಷ ಕ್ಲೋಸ್ ಮುಕ್ತಾಯವಾಗಲಿದೆ. ಅದರಂತೆ 150 ಕಿ.ಮೀ. ವರೆಗೆ ಹೊಸ ವಿಮಾನ ನಿಲ್ದಾಣ ಸ್ಥಾಪಿಸುವಂತಿಲ್ಲ ಎಂದು ತಿಳಿಸಿದರು.

ಬಳಿಕ 150 ಕಿ.ಮೀ. ದೂರದ ಆ ಷರತ್ತು ಮುಕ್ತಾಯವಾಗಲಿದೆ. ಮುಂಬೈ ಹಾಗೂ ದೆಹಲಿಯಲ್ಲಿ ಈ ತರಹದ ಷರತ್ತು ಇಲ್ಲ. 2035ಗೆ ಕೆಂಪೇಗೌಡ ಏರ್ಪೋರ್ಟ್​ ಸಾಮರ್ಥ್ಯ ಗರಿಷ್ಠ ಮಟ್ಟಕ್ಕೆ ಮುಟ್ಟಲಿದೆ. ಹೀಗಾಗಿ ಹೊಸ ವಿಮಾನ ನಿಲ್ದಾಣಕ್ಕೆ ಈಗಿನಿಂದಲೇ ತಯಾರಿ ಮಾಡಲಾಗಿದೆ. ಈ ಸಂಬಂಧ ಸಭೆ ನಡೆಸಲಾಗಿದೆ. ಸಭೆಯಲ್ಲಿ ಎರಡು ಮೂರು ವಿಚಾರವಾಗಿ ಚರ್ಚೆಯಾಗಿದೆ ಎಂದು ತಿಳಿಸಿದ್ದಾರೆ.

ಐದು ಮಾನದಂಡದ ಆಧಾರದಲ್ಲಿ ತೀರ್ಮಾನ:ಹೊಸ ವಿಮಾನ ನಿಲ್ದಾಣಕ್ಕೆ ಐದು ಮಾನದಂಡವನ್ನು ಪಾಲನೆ ಮಾಡಬೇಕು‌. ಅದರಲ್ಲಿ ತಾಂತ್ರಿಕ ಕಾರ್ಯಸಾಧು, ಸಂಪರ್ಕ, ಪ್ರಯಾಣಿಕರ ಅನುಕೂಲತೆ, ಅನುಕೂಲಕರ ಭೂಮಿ, ಪ್ರಸಕ್ತ ಏರ್ಪೋರ್ಟ್​ಗೆ ಸಂಪರ್ಕ ಅಂಶಗಳನ್ನೊಳಗೊಂಡ ಮಾನದಂಡಗಳನ್ನು ಪಾಲಿಸಬೇಕು. ಈ ಮಾನದಂಡದ ಬಗ್ಗೆ ತಜ್ಞರ ಸಲಹೆ ಕೇಳಿದ್ದೇವೆ. ಪ್ರಯಾಣಿಕರು ಎಲ್ಲಿಂದ ಹೆಚ್ಚಿಗೆ ಬರುತ್ತಾರೆ. ಹೊಸ ವಿಮಾನ ನಿಲ್ದಾಣ ನಿರ್ಮಿಸುವ ಭೂ ಪ್ರದೇಶದಲ್ಲಿನ ಗಾಳಿ ಬೀಸುವ ದಿಕ್ಕು ಎಲ್ಲವೂ ಪರಿಗಣಿಸಬೇಕು. ಈ ಎಲ್ಲ ಮಾನದಂಡದ ಆಧಾರದಲ್ಲಿ ಸ್ಥಳವನ್ನು ಗುರುತಿಸಲಾಗುವುದು ಎಂದು ತಿಳಿಸಿದರು.

ಐದಾರು ಸ್ಥಳಗಳ ಪ್ರಸ್ತಾವನೆ ಇದೆ:ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ನಮ್ಮ ಮುಂದೆ ಐದಾರು ಸ್ಥಳಗಳ ಪ್ರಸ್ತಾವನೆ ಇದೆ‌. ಈ ಸಂಬಂದ ಸಂಪುಟದಲ್ಲಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ. ಸ್ಥಳ ಇನ್ನೂ ಯಾವುದೂ ಅಂತಿಮವಾಗಿಲ್ಲ. ಹೊಸ ವಿಮಾನ ನಿಲ್ದಾಣಕ್ಕಾಗಿ ಮೈಸೂರು ರಸ್ತೆ, ಮಾಗಡಿ, ದಾಬಸ್ ಪೇಟೆ, ಜಿಗಣಿ, ತುಮಕೂರು, ಕನಕಪುರ ಹೆಸರುಗಳು ಕೇಳಿ ಬರುತ್ತಿವೆ. ಆದರೆ, ಐದೂ ಮಾನದಂಡ ಪೂರೈಸುವ ಸೂಕ್ತ ಸ್ಥಳದ ಬಗ್ಗೆ ತಜ್ಞರ ಜೊತೆ ಚರ್ಚಿಸಿ ಎಲ್ಲಿಯಾಗಬೇಕು ಎಂದು ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

5000 ಎಕರೆ ಜಮೀನು ಬೇಕು:ಹೊಸ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿರಲಿದೆ. ಸುಮಾರು 100 ಮಿಲಿಯನ್ ಸಾಮರ್ಥ್ಯದ ಹೊಸ ವಿಮಾನ ನಿಲ್ದಾಣ ಆಗಿರಲಿದೆ.‌ ಹೊಸ ವಿಮಾನ ನಿಲ್ದಾಣಕ್ಕೆ 4,500-5,000 ಎಕರೆ ಜಮೀನಿನ ಅಗತ್ಯ ಇದೆ. ಈ ಸಂಬಂಧ ಎರಡನೇ ಸಭೆ ನಡೆಸಲಾಗುವುದು. ಸಭೆಯಲ್ಲಿ ತಜ್ಞರ ಜೊತೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.

ನಾವು ಚರ್ಚಿಸಿದ ಮೇಲೆ ತಮಿಳುನಾಡು ಹೇಳಿಕೆ:ತಮಿಳುನಾಡು ನಾವು ಹೊಸ ವಿಮಾನ ನಿಲ್ದಾಣದ ಬಗ್ಗೆ ಚರ್ಚೆ ಮಾಡಿದ ಬಳಿಕ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ ಹೇಳಿಕೆ ನೀಡಿದೆ ಎಂದು ಇದೇ ವೇಳೆ ತಿಳಿಸಿದರು.

ಅವರಿಗೆ ಮಾಡುವುದು ಬೇಡ ಎಂದು ಹೇಳಲು ಆಗಲ್ಲ. ಅವರು ಹೇಳಿಕೆ ನೀಡಲು ಮುಕ್ತರಾಗಿದ್ದಾರೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅವರಿಗೂ ವಿಶೇಷ ಕ್ಲೋಸ್ (150 ಕಿ.ಮೀ. ನಿರ್ಬಂಧ) ಅನ್ವಯವಾಗುತ್ತೆ. ಎರಡನೇ ವಿಮಾನ ನಿಲ್ದಾಣದ ಬಗ್ಗೆ ನಾವು ಗಂಭೀರವಾಗಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ:ಬೆಂಗಳೂರಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಚರ್ಚಿಸಿ ತೀರ್ಮಾನ: ಸಚಿವ ಎಂ‌.ಬಿ.ಪಾಟೀಲ್ - 2nd Airport In Bengaluru

ABOUT THE AUTHOR

...view details