ಅನುಷಾಳ ಸಹೋದರಿ ಉಷಾ (ETV Bharat) ಬೆಂಗಳೂರು : ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅನುಷಾ (27) ಮೃತ ಮಹಿಳೆ. ಸೆ. 5ರಂದು ಆತ್ಮಹತ್ಯೆಗೆ ಯತ್ನಿಸಿದ್ದ ಅನುಷಾ ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಂದು ಅನುಷಾ ಮೃತಪಟ್ಟಿದ್ದಾರೆ. ಮೃತಳ ಪತಿ ಶ್ರೀಹರಿಯ ಅನೈತಿಕ ಸಂಬಂಧ ಘಟನೆಯ ಕಾರಣ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ಬೆಂಗಳೂರಿನ ನಿವಾಸಿಯಾಗಿದ್ದ ತಮ್ಮ ಪುತ್ರಿ ಅನುಷಾಗೆ ಹತ್ತಿರದ ಸಂಬಂಧದಲ್ಲೇ ಶಿರಸಿ ಮೂಲದ ಶ್ರೀಹರಿ ಎಂಬಾತನೊಂದಿಗೆ ಕಳೆದ ಐದು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಎರಡು ವರ್ಷದ ಮಗು ಸಹ ಇದೆ. ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯ ನಗರದಲ್ಲಿ ದಂಪತಿ ವಾಸವಿದ್ದರು.
''ಮಾರತ್ ಹಳ್ಳಿಯ ಖಾಸಗಿ ಕಂಪನಿಯೊಂದರಲ್ಲಿ ಟೀಂ ಲೀಡರ್ ಆಗಿ ಶ್ರೀಹರಿ ಕೆಲಸ ಮಾಡುತ್ತಿದ್ದ. ಮದುವೆಯಾದ ಬಳಿಕ ಶ್ರೀಹರಿಯ ಅನೈತಿಕ ಸಂಬಂಧ, ಬೇರೆ ಮಹಿಳೆಯರೊಂದಿಗಿನ ಅಸಭ್ಯ ಸಂಭಾಷಣೆಗಳ, ಅಶ್ಲೀಲ ವೀಡಿಯೋಗಳ ಗೀಳಿನ ಬಗ್ಗೆ ತಿಳಿದ ಅನುಷಾ, ಗಂಡನಿಗೆ ಬುದ್ಧಿವಾದ ಹೇಳಿದ್ದಳು. ಆದರೂ, ಆತ ತನ್ನ ಕೆಟ್ಟ ಚಟವನ್ನು ಮುಂದುವರೆಸಿದ್ದ. ಆಗಾಗ ಜಗಳ ಮಾಡುತ್ತಿರುವ ಬಗ್ಗೆ, ತನಗೆ ದೈಹಿಕವಾಗಿ ಹಿಂಸಿಸುತ್ತಿರುವ ಬಗ್ಗೆ ಅನುಷಾ ತಮ್ಮ ಮುಂದೆ ಹೇಳಿಕೊಂಡಿದ್ದಳು. ದೂರು ಕೊಡುವ ಬಗ್ಗೆಯೂ ಆಲೋಚಿಸಿದ್ದಳು. ಆದರೆ, ಆ ಬಳಿಕ 'ಪೊಲೀಸ್ ಠಾಣೆ ಮೆಟ್ಟಿಲೇರುವುದು ಬೇಡ, ಸಂಸಾರವನ್ನ ನಾನೇ ಸರಿಪಡಿಸಿಕೊಳ್ಳುತ್ತೇನೆ' ಎಂದು ನಮ್ಮ ಬಳಿ ಹೇಳಿಕೊಂಡಿದ್ದಳು.
ಆದರೆ, ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸಹೋದ್ಯೋಗಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಎಂಬ ಕಾರಣಕ್ಕಾಗಿ ಶ್ರೀಹರಿಯನ್ನ ಕೆಲಸದಿಂದ ತೆಗೆದು ಹಾಕಲಾಗಿತ್ತು. ಮೂರು ತಿಂಗಳುಗಳಿಂದ ಮನೆಯಲ್ಲೇ ಇದ್ದ ಶ್ರೀಹರಿ, ಗುರುವಾರ ಸಹ ತನ್ನೊಂದಿಗೆ ಜಗಳವಾಡಿರುವ ಬಗ್ಗೆ ಪುತ್ರಿ ಅನುಷಾ ನಮಗೆ ತಿಳಿಸಿದ್ದಳು. ಇದಾದ ಬಳಿಕ ಬಾತ್ ರೂಮಿನಲ್ಲೇ ಅನುಷಾ ಬೆಂಕಿ ಹಚ್ಚಿಕೊಂಡಿದ್ದಾಳೆ. ಪತ್ನಿ ಬೆಂಕಿ ಹಚ್ಚಿಕೊಂಡಿದ್ದರು ರಕ್ಷಣೆಗೆ ಶ್ರೀಹರಿ ತಲೆಕೆಡಿಸಿಕೊಂಡಿರಲಿಲ್ಲ. ಮೊಮ್ಮಗನಿಗೆ ಊಟ ಮಾಡಿಸುತ್ತಿದ್ದ ತಾನೇ ನೆರೆಹೊರೆಯವರ ನೆರವಿನಿಂದ ಬಾಗಿಲು ಮುರಿದು ರಕ್ಷಿಸಲು ಯತ್ನಿಸಿದ್ದೆ'' ಎಂದು ಮೃತ ಅನುಷಾ ಅವರ ತಾಯಿ ರೇಣುಕಾ ಕಣ್ಣೀರಿಟ್ಟಿದ್ದಾರೆ.
ಗಂಭೀರವಾಗಿ ಗಾಯಗೊಂಡ ಅನುಷಾಳನ್ನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಅನುಷಾ ಸಾವನ್ನಪ್ಪಿದ್ದಾಳೆ. ಮೃತಳ ಪೋಷಕರಿಂದ ದೂರು ಪಡೆಯಲಾಗಿದ್ದು, ಆರೋಪಿ ಶ್ರೀಹರಿಯನ್ನ ವಶಕ್ಕೆ ಪಡೆದಿರುವುದಾಗಿ ಹುಳಿಮಾವು ಠಾಣೆ ಪೊಲೀಸರು ತಿಳಿಸಿದ್ದಾರೆ.
ಅಂತಿಮ ವಿಧಿ ವಿಧಾನ ವೇಳೆ ವಾಗ್ವಾದ:ಕಾನೂನು ಕ್ರಮ ಮತ್ತು ಪರಿಶೀಲನೆ ಬಳಿಕ ಅನುಷಾಳ ಮೃತದೇಹವನ್ನು ಬನಶಂಕರಿ ವಿದ್ಯುತ್ ಚಿತಾಗಾರಕ್ಕೆ ತರಲಾಯಿತು. ಅಂತಿಮ ವಿಧಿ ವಿಧಾನದ ವೇಳೆ ಚಿತಾಗಾರದ ಬಳಿ ಮೃತ ಮಹಿಳೆಯ ಕಡೆಯವರು ಹಾಗೂ ಆಕೆಯ ಪತಿಯ ಕಡೆಯವರು ವಾಗ್ವಾದ ನಡೆಸಿದ ಘಟನೆ ಕೂಡ ನಡೆಯಿತು. ಅಂತಿಮ ವಿಧಿ ವಿಧಾನಕ್ಕಾಗಿ ಬಂದಿದ್ದಾಗ ಶ್ರೀಹರಿ ಕುಟುಂಬಸ್ಥರು, 'ಸುಳ್ಳು ಆರೋಪ ಮಾಡುತ್ತಿದ್ದೀರಾ' ಎಂದು ತನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಅನುಷಾಳ ಸಹೋದರಿ ಉಷಾ ನೋವು ಹೊರಹಾಕಿದರು.
ಈ ವೇಳೆ ಎರಡೂ ಕಡೆಯವರ ಮಧ್ಯೆ ಗಲಾಟೆಯಾಗಿದ್ದು, ಸ್ಥಳೀಯರು ಮಧ್ಯ ಪ್ರವೇಶಿಸಿ ಶಾಂತಿ ಕಾಪಾಡುವಂತೆ ತಿಳಿ ಹೇಳಿದರು. ಘಟನೆಗೆ ಸಂಬಂಧಿಸಿದಂತೆ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ಶ್ರೀಹರಿಯನ್ನ ವಶಕ್ಕೆ ಪಡೆಯಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.
ಇದನ್ನೂ ಓದಿ: ಮದುವೆಯಾದ ದಿನವೇ ಗಲಾಟೆ, ಹೊಡೆದಾಟ: ನಿನ್ನೆ ಪತ್ನಿ ಇಂದು ಪತಿ ಸಾವು - Newly Married Couple Dies