ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿಉಂಟಾಗಿರುವ ಜಲಕ್ಷಾಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಲಮಂಡಳಿ ಮುಂದಾಗಿದೆ. ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ಬಳಸಿದ ನೀರನ್ನು ಖರೀದಿಸಿ, ಸಂಸ್ಕರಿಸಿ ಮಾರಾಟ ಮಾಡಲು ಒಡಂಬಡಿಕೆಯನ್ನು ಜಲಮಂಡಳಿ ಮಾಡಿಕೊಂಡಿದೆ. ಈ ಮೂಲಕ ನಗರದ ನೀರಿನ ಸಮಸ್ಯೆಗೆ ಸಣ್ಣ ಮಟ್ಟಿನ ಪರಿಹಾರ ಕಂಡುಕೊಳ್ಳುವತ್ತ ಹೆಜ್ಜೆ ಇರಿಸಿದೆ.
ನೀರು ಪೂರೈಕೆಗೆ ಹೆಚ್ಚಿನ ಮೂಲಗಳ ಹುಡುಕಾಟ ನಡೆಸಿದ್ದ ಜಲಮಂಡಳಿ, ಇದೀಗ ಕುಡಿಯುವ ನೀರಿನ ಉದ್ದೇಶ ಹೊರತುಪಡಿಸಿ ಇತರ ಚಟುವಟಿಕೆಗಳ ಬಳಕೆಗೆ ಹೊಸದೊಂದು ದಾರಿ ಹುಡುಕಿಕೊಂಡಿದೆ. ನಗರದ 10 ಸಾವಿರಕ್ಕೂ ಅಧಿಕ ಅಪಾರ್ಟ್‌ಮೆಂಟ್‌ಗಳಲ್ಲಿ ಬಳಕೆಯಾದ ನೀರನ್ನು ಪಡೆದು ಸಂಸ್ಕರಿಸಿ ಮಾರಾಟ ಮಾಡಲಾಗುತ್ತದೆ. ಇದಕ್ಕಾಗಿ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.
ಜಲಮಂಡಳಿಯು ಈ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಹ ಮುಂದಾಗಿದೆ. ಹೆಚ್ಚುವರಿಯಾಗಿ 800 ಎಂ.ಎಲ್.ಡಿ ನೀರು ಪಡೆದುಕೊಳ್ಳಲಿದೆ. ಕೆಲ ಅಪಾರ್ಟ್‌ಮೆಂಟ್‌ಗಳು ಈಗಾಗಲೇ ಬಳಸಿದ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡಿಕೊಳ್ಳುತ್ತಿವೆ. ಈ ಪೈಕಿ ಶೇ.50 ರಷ್ಟು ಸಂಸ್ಕರಿಸಿದ ನೀರು ಮಾತ್ರ ಅಪಾರ್ಟ್‌ಮೆಂಟ್‌ಗಳಲ್ಲಿ ಬಳಕೆಯಾಗುತ್ತಿದೆ. ಉಳಿದ ನೀರು ನಾಲೆಗಳಿಗೆ, ರಾಜಕಾಲುವೆಗಳಿಗೆ, ಚರಂಡಿಗಳಿಗೆ ಬಿಟ್ಟು ಪೋಲು ಮಾಡಲಾಗುತ್ತಿದೆ. ಸಂಸ್ಕರಿಸಿದ ನೀರಿಗೂ ಬೇಡಿಕೆ ಹೆಚ್ಚಾಗಿದೆ. ಈವರೆಗೆ 62 ಲಕ್ಷ ಲೀಟರ್ ಸಂಸ್ಕರಿತ ನೀರಿಗೆ ಬೇಡಿಕೆ ಸೃಷ್ಟಿಯಾಗಿದೆ. ಕುಡಿಯುವ ನೀರನ್ನು ಹೊರತುಪಡಿಸಿ ಇತರ ಕೆಲಸಗಳಿಗೆ ಬೇಕಾದ ನೀರಿಗಾಗಿ ಈ ಸಂಸ್ಕರಿತ ನೀರು ಬಳಸಲು ತಯಾರಿ ನಡೆಸಲಾಗಿದೆ. ಇದರಿಂದ ಬಂದ ಲಾಭದಲ್ಲಿ ಅಪಾರ್ಟ್ಮೆಂಟ್ಗಳಿಗೂ ಪಾಲು ನೀಡಲಾಗುತ್ತದೆ.