ಕರ್ನಾಟಕ

karnataka

ETV Bharat / state

ಅಂತಾರಾಜ್ಯ ಮನೆಗಳ್ಳನ ಬಂಧನ: 25 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ - THEFT NEWS

ಬೆಂಗಳೂರಲ್ಲಿ ಅಂತಾರಾಜ್ಯ ಮನೆಗಳ್ಳ ಹಾಗೂ ವಿದೇಶಿ ಪ್ರಜೆಗಳ ಮೇಲೆ ಹಲ್ಲೆ ಮಾಡಿ ದೋಚಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಂತಾರಾಜ್ಯ ಮನೆಗಳ್ಳನ ಬಂಧನ
ಅಂತಾರಾಜ್ಯ ಮನೆಗಳ್ಳನ ಬಂಧನ (ETV Bharat)

By ETV Bharat Karnataka Team

Published : Nov 12, 2024, 3:54 PM IST

ಬೆಂಗಳೂರು:ಮನೆ ಬಾಗಿಲು ಒಡೆದು ಚಿನ್ನಾಭರಣ, ನಗದು ಕಳ್ಳತನ ಮಾಡಿದ್ದ ಅಂತಾರಾಜ್ಯ ಮನೆಗಳ್ಳನನ್ನ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗರಾಜ (68) ಬಂಧಿತ. ಆರೋಪಿಯಿಂದ 208 ಗ್ರಾಂ ಚಿನ್ನಾಭರಣ, 1.1 ಕೆಜಿ ಬೆಳ್ಳಿಯ ವಸ್ತುಗಳು, 2.5 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಅಕ್ಟೋಬರ್ 10ರಂದು ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಣನಕುಂಟೆ ಕ್ರಾಸ್‌ನಲ್ಲಿರುವ ಮನೆಯಲ್ಲಿ ಕಳ್ಳತನ ನಡೆದಿತ್ತು.

ಸ್ವೀಟ್ ಅಂಗಡಿ ನಡೆಸುತ್ತಿದ್ದ ಮನೆ ಮಾಲೀಕ ಆಯುಧ ಪೂಜೆ ಹಬ್ಬದ ನಿಮಿತ್ತ ಸ್ವೀಟ್ಸ್ ಆರ್ಡರ್ ಹೆಚ್ಚಿದ್ದ ಕಾರಣ ಅಕ್ಟೋಬರ್ 10ರಂದು ರಾತ್ರಿ ಮನೆಗೆ ಬಂದಿರಲಿಲ್ಲ. ಮಾರನೇ ದಿನ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ಒಡೆದು, ಕೊಠಡಿ ಬೀರುವಿನಲ್ಲಿಟ್ಟಿದ್ದ 182 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ ವಸ್ತುಗಳು ಮತ್ತು 5 ಲಕ್ಷ ನಗದು ಹಣ ಕದ್ದೊಯ್ಯಲಾಗಿತ್ತು. ಮನೆ ಮಾಲೀಕನ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅಕ್ಟೋಬರ್ 28ರಂದು ಅತ್ತಿಬೆಲೆ ಬಸ್ ನಿಲ್ದಾಣದ ಬಳಿ ಆರೋಪಿಯನ್ನ ಬಂಧಿಸಿದ್ದರು. ವಿಚಾರಣೆಗೊಳಪಡಿಸಿದಾಗ ಆತ ಕಳವು ಮಾಡಿದ್ದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಹಾಗೂ ನಗದು ಹಣವನ್ನ ತನ್ನ ಸ್ನೇಹಿತ ಹಾಗೂ ಬಾಮೈದನಿಗೆ ನೀಡಿರುವುದಾಗಿ ಬಾಯ್ಬಿಟ್ಟಿದ್ದ.

ಬಂಧಿತನ ವಿರುದ್ಧ ಕರ್ನಾಟಕ ಹಾಗೂ ಅಕ್ಕಪಕ್ಕದ ರಾಜ್ಯಗಳ ವಿವಿಧ ಠಾಣೆಗಳಲ್ಲಿ 30ಕ್ಕೂ ಅಧಿಕ ಪ್ರಕರಣಗಳ ದಾಖಲಾಗಿದ್ದವು. ಆರೋಪಿಯಿಂದ ಒಟ್ಟು 208 ಗ್ರಾಂ ಚಿನ್ನಾಭರಣ, 1.1 ಕೆಜಿ ಬೆಳ್ಳಿ ವಸ್ತುಗಳು ಹಾಗೂ 2.5 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ವಿದೇಶಿ ಪ್ರಜೆಗಳ ಮೇಲೆ ಹಲ್ಲೆ: ಬಂಧನ -ವಿದೇಶಿ ಪ್ರಜೆಗಳಿದ್ದ ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ಮಾಡಿ ಸುಲಿಗೆ ಮಾಡಿದ್ದ ನಾಲ್ವರನ್ನ ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭರತ್, ಗಯಾಜ್, ಅಭಿಷೇಕ್ ಹಾಗೂ ಶ್ರೇಯಸ್ ಬಂಧಿತರು. ಆರೋಪಿಗಳಿಂದ 2 ದ್ವಿಚಕ್ರ ವಾಹನ, 11 ಗ್ರಾಂ ತೂಕದ ಚಿನ್ನದ ಚೈನ್, 3 ಐಫೋನ್‌ಗಳನ್ನ ವಶಕ್ಕೆ ಪಡೆಯಲಾಗಿದೆ.

ಅಕ್ಟೋಬರ್ 27ರಂದು ರಾತ್ರಿ ಬಾಗಲಗುಂಟೆ ಠಾಣೆ ವ್ಯಾಪ್ತಿಯ ದೊರೆಸ್ವಾಮಿ ಪಾಳ್ಯದಲ್ಲಿ ಆಫ್ರಿಕಾ ಪ್ರಜೆಗಳು ವಾಸವಿದ್ದ ಮನೆಗೆ ನುಗ್ಗಿದ್ದ ಆರೋಪಿಗಳು ಚಾಕು ತೋರಿಸಿ, ಹಣ, ಐಫೋನ್‌ಗಳನ್ನ ಕೊಡುವಂತೆ ಬೆದರಿಸಿದ್ದರು. ನಿರಾಕರಿಸಿದಾಗ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಐಫೋನ್‌ಗಳು, 50 ಸಾವಿರ ಬೆಲೆ ಬಾಳುವ 11 ಗ್ರಾಂ ತೂಕದ ಚಿನ್ನದ ಚೈನ್, ನಗದು ಕಸಿದುಕೊಂಡು ಪರಾರಿಯಾಗಿದ್ದರು. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಬಾಗಲಗುಂಟೆ ಠಾಣೆ ಪೊಲೀಸರು, ಆರೋಪಿಗಳನ್ನ ಬಂಧಿಸಿ ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನ, 11 ಗ್ರಾಂ ತೂಕದ ಚಿನ್ನದ ಚೈನ್, 3 ಐಫೋನ್‌ಗಳನ್ನ ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಾಲೀಕನ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ, ನಗದು ದೋಚಿದ್ದ ಪ್ರಕರಣ ; ನೇಪಾಳ ಮೂಲದ ಮೂವರ ಬಂಧನ

ABOUT THE AUTHOR

...view details