ಬೆಂಗಳೂರು:ಬೆಂಗಳೂರು ಉಪನಗರ ರೈಲು ಯೋಜನೆಗಾಗಿ ರಾಜ್ಯ ಸರ್ಕಾರದ ಕೆ-ರೈಡ್ ಸಂಸ್ಥೆಗೆ ಜರ್ಮನಿಯ ಲಕ್ಸಂಬರ್ಗ್ ನಗರದ ಕೆಎಫ್‌ಡಬ್ಲ್ಯೂ ಡೆವಲಪ್ಮೆಂಟ್ ಬ್ಯಾಂಕ್ 4,561 ಕೋಟಿ ರೂ. (500 ಮಿಲಿಯನ್ ಯೂರೋ) ಸಾಲ ನೀಡುತ್ತಿದೆ. ವಿಧಾನಸೌಧದಲ್ಲಿ ಇಂದು ಈ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಸಮ್ಮುಖದಲ್ಲಿ ಅಧಿಕೃತವಾಗಿ ಒಡಂಬಡಿಕೆಗೆ ಸಹಿ ಹಾಕಲಾಯಿತು. ಕೆ-ರೈಡ್ ಪರವಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿಯೂ ಆದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ ಹಾಗೂ ಕೆಎಫ್ ಡಬ್ಲ್ಯೂ ಪರವಾಗಿ ಅದರ ಭಾರತದ ನಿರ್ದೇಶಕ ವೂಲ್ಫ್ ಮೌತ್ ಅಂಕಿತ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ''ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆ ಮತ್ತು ಕೆಎಫ್‌ಡಬ್ಲ್ಯೂ ನಡುವೆ ಈ ಸಂಬಂಧ 2023ರ ಡಿ.15ರಂದು ಪ್ರಾಥಮಿಕ ಒಪ್ಪಂದವಾಗಿತ್ತು. ಈಗ ಕೆಎಫ್‌ಡಬ್ಲ್ಯೂ ಮತ್ತು ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ ಕೆ-ರೈಡ್ ನಡುವೆ ಪೂರಕ ಒಪ್ಪಂದ ಮಾಡಿಕೊಳ್ಳಲಾಗಿದೆ. ಯೋಜನೆಯ ಎಲ್ಲ ನಾಲ್ಕೂ ಕಾರಿಡಾರ್ ಕಾಮಗಾರಿಗಳನ್ನು 2027ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲು ಇದು ಮಹತ್ವದ ಒಪ್ಪಂದ. ಶೇ.4ರ ಬಡ್ಡಿ ದರದಲ್ಲಿ 20 ವರ್ಷಗಳ ಅವಧಿಗೆ ಈ ಸಾಲವನ್ನು ಜರ್ಮನಿಯ ಬ್ಯಾಂಕ್ ನೀಡುತ್ತಿದೆ'' ಎಂದು ಮಾಹಿತಿ ನೀಡಿದರು.
''ಕೆಎಫ್‌ಡಬ್ಲ್ಯೂ ನೀಡುತ್ತಿರುವ ಹಣವನ್ನು ಕೆಂಗೇರಿ-ವೈಟ್ಫೀಲ್ಡ್ ನಡುವಿನ ಕಾರಿಡಾರ್-3ರ ಅಡಿ ಬರುವ ಸ್ಟೇಷನ್ ವರ್ಕ್, ವಯಾಡಕ್ಟ್, ಹೀಳಲಿಗೆ-ರಾಜಾನುಕುಂಟೆ ನಡುವಿನ ಕಾರಿಡಾರ್-4ರ ವ್ಯಾಪ್ತಿಯಲ್ಲಿ ಬರುವ ದೇವನಹಳ್ಳಿಯಲ್ಲಿನ ಡಿಪೋ-1, ಸಿಗ್ನಲ್ ಮತ್ತು ಟೆಲಿಕಾಂ, ಪ್ಲಾಟ್ ಫಾರಂ ಸ್ಕ್ರೀನ್ ಡೋರ್, ಸ್ವಯಂಚಾಲಿತ ಪ್ರಯಾಣ ದರ ವಸೂಲಿ ವ್ಯವಸ್ಥೆ, ಸೌರಫಲಕ, ಭದ್ರತಾ ಸಾಧನಗಳು ಮತ್ತು ಎಂಎಐ (ಮ್ಯಾನ್ ಮಶೀನ್ ಇಂಟರ್ಫೇಸ್) ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುವುದು'' ಎಂದು ಸಚಿವರು ವಿವರಿಸಿದರು.