ಬೆಂಗಳೂರು:ದಿ ರಾಮೇಶ್ವರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಉಗ್ರರು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು 10 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳ ವಶಕ್ಕೆ ನೀಡಿ ಆದೇಶ ನೀಡಿದ್ದಾರೆ.
ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಆಗಿರುವ ಅಬ್ದುಲ್ ಮತೀನ್ ತಾಹಾ ಹಾಗೂ ಬಾಂಬರ್ ಮುಸಾವೀರ್ ಹುಸೇನ್ ಶಾಜಿದ್ ನನ್ನು ಇಂದು ಕೋರಮಂಗಲದ ಎನ್ಜಿವಿ ಬಡಾವಣೆಯಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ಅಧಿಕಾರಿಗಳು ಹಾಜರು ಪಡಿಸಿದರು.
ಸೆರೆಯಾಗಿರುವ ಇಬ್ಬರು ಬಂಧಿತ ಉಗ್ರರು ರಾಮೇಶ್ವರ ಕೆಫೆ ಸ್ಫೋಟವಲ್ಲದೇ ಶಿವಮೊಗ್ಗ ಟ್ರಯಲ್ ಬಾಂಬ್ ಬಾಸ್ಟ್ ಸೇರಿದಂತೆ ಇತರ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ವೇಳೆ ಮಹತ್ವದ ಸಾಕ್ಷ್ಯಾಧಾರಗಳು ಲಭಿಸಿವೆ.
ಕೆಫೆ ಸ್ಫೋಟದ ಸ್ಥಳಗಳಲ್ಲಿ ಬಳಸಿರುವ ಎಲೆಕ್ಟ್ರಾನಿಕ್ ಡಿವೈಸ್ಗಳು ಹಾಗೂ ಡಿಜಿಟಲ್ ಉಪಕರಣಗಳನ್ನು ಬಳಸಿ ಉಗ್ರರು ಕೃತ್ಯವೆಸಗಿರುವುದು ಕಂಡು ಬಂದಿದೆ. ಅಲ್ಲದೆ ಈಗಾಗಲೇ ಬಂಧನಕ್ಕೊಳಗಾಗಿರುವ ಮುಜಾಮಿಲ್ ಷರೀಫ್ ಹಾಗೂ ಮಾಜ್ ಮುನೀರ್ ವಿಚಾರಣೆಯಲ್ಲಿ ಇಬ್ಬರು ಅರೋಪಿಗಳ ಜೊತೆ ಸೇರಿ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆಯೂ ತಿಳಿದು ಬಂದಿದೆ. ಹೀಗಾಗಿ ಬಂಧಿತರಾಗಿರುವ ಉಗ್ರರೊಂದಿಗೆ ಕೈಜೋಡಿಸಿರುವುದು ಕೂಡ ಪತ್ತೆ ಮಾಡಬೇಕಿದೆ.
ಈ ಹಿನ್ನೆಲೆಯಲ್ಲಿ ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ನಿಟ್ಟಿನಲ್ಲಿ 10 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದರು. ಇವರ ಮನವಿಗೆ ಸ್ಪಂದಿಸಿದ ನ್ಯಾಯಾಧೀಶರು, 10 ದಿನಗಳ ಎನ್ಐಎ ವಶಕ್ಕೆ ನೀಡುವಂತೆ ಆದೇಶಿಸಿದರು. ಸದ್ಯ ಮಡಿವಾಳದ ಟೆಕ್ನಿಕಲ್ ಸೆಂಟರ್ಗೆ ಆರೋಪಿಗಳನ್ನು ಕರೆದುಕೊಂಡು ಬರಲಾಗಿದ್ದು, ಅಧಿಕಾರಿಗಳು ಉಗ್ರರ ಅಸಲಿ ವಿಚಾರಣೆಯನ್ನ ಇನ್ನಷ್ಟೇ ನಡೆಸಲಿದ್ದಾರೆ.
ಇದನ್ನೂ ಓದಿ: ಕೆಫೆ ಸ್ಫೋಟ: ಕಲಬುರಗಿ, ಥಾಣೆ ಜನರ ಹೆಸರಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿದ್ದ ಉಗ್ರರು - Cafe Blast