ಬೆಂಗಳೂರು: ಹೊಸ ವರ್ಷಾಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಷ್ಟರಲ್ಲಿಯೇ ಬೆಂಗಳೂರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಮೂವರನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದು, ಅವರ ಬಳಿ ಇದ್ದ 3.25 ಕೋಟಿ ಮೌಲ್ಯದ 318 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
"ಕೇರಳ ಮೂಲದ ಅಚ್ಚು, ಬೆಂಗಳೂರು ಮೂಲದ ಜಮೀರ್ ಹಾಗೂ ಆತನ ಪತ್ನಿ ರೇಷ್ಮಾ ಬಂಧಿತರು. ಒಡಿಶಾ ಹಾಗೂ ಆಂಧ್ರಪ್ರದೇಶದ ಗಡಿ ಭಾಗಗಳಿಂದ ಗಾಂಜಾ ಖರೀದಿಸಿ ಕಾರಿನ ಮೂಲಕ ಬೆಂಗಳೂರಿಗೆ ತರಲಾಗುತ್ತಿತ್ತು. ಪ್ರಮುಖ ಆರೋಪಿಯಾಗಿರುವ ಅಚ್ಚು ವಿರುದ್ಧ ಕೇರಳದ ವಿವಿಧ ಠಾಣೆಗಳಲ್ಲಿ ಮಾದಕ ವಸ್ತು ಸರಬರಾಜು, ರಾಬರಿ, ಹತ್ಯೆ ಯತ್ನ ಮಾತ್ರವಲ್ಲದೇ ಮೂರು ಬಾರಿ ಗೂಂಡಾ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದವು." ಎಂದರು.