ಬೆಂಗಳೂರು :ಪರ ಭಾಷಿಕರಿಗೆ ಕನ್ನಡ ಭಾಷೆ ಕಲಿಸುವ ಪ್ರಯತ್ನದ ಭಾಗವಾಗಿ ಆಟೋ ಚಾಲಕರಿಗೆ ಕನ್ನಡ/ಇಂಗ್ಲಿಷ್ನಲ್ಲಿರುವ ಕೆಲ ಬೇಸಿಕ್ ವಾಕ್ಯಗಳನ್ನೊಳಗೊಂಡ ಕಾರ್ಡ್‌ಗಳನ್ನ ಬೆಂಗಳೂರು ಪೊಲೀಸರು ಹಂಚಿದ್ದಾರೆ.
ಲ್ಯಾಮಿನೇಟೆಡ್ ಕಾರ್ಡ್‌ಗಳಲ್ಲಿ ಚಾಲಕರು ಮತ್ತು ಪ್ರಯಾಣಿಕರ ನಡುವಿನ ಸಂವಹನವನ್ನು ಸುಲಭಗೊಳಿಸಲು ವಿನ್ಯಾಸಗೊಳಿಸಲಾದ ವಾಕ್ಯಗಳು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮುದ್ರಿಸಲಾಗಿದೆ. 'ಲರ್ನ್ ಕನ್ನಡ ವಿತ್ ಆಟೋ ಕನ್ನಡಿಗ' ಎಂಬ ವಿಶಿಷ್ಟ ಕಾನ್ಸೆಪ್ಟ್ ಮೂಲಕ ಪರ ಭಾಷಿಗರಿಗೆ ಕೆಲವೊಂದು ಬೇಸಿಕ್ ಕನ್ನಡ ಪದಗಳನ್ನು ಕಲಿಸುವಂತಹ ಪ್ರಯತ್ನ ಇದಾಗಿದೆ. ಆಟೋದಲ್ಲಿ ಮಾತನಾಡುವಂತಹ ಕೆಲವೊಂದು ಬೇಸಿಕ್ ಪದಗಳನ್ನು ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ಪ್ರಿಂಟ್ ಮಾಡಿಸಿ ತಮ್ಮ ಆಟೋದಲ್ಲಿ ಅಂಟಿಸಿದ್ದಾರೆ.
ಪ್ರತಿ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಸಹ ಇದ್ದು, ಸ್ಕ್ಯಾನ್ ಮಾಡಿದರೆ ಕನ್ನಡ ಬಳಕೆಯ ಕುರಿತ ವಿಡಿಯೋ ಪ್ಲೇ ಆಗಲಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪರಭಾಷಿಕರಿಗೆ ಕನ್ನಡ ಕಲಿಸುವ ಸಣ್ಣ ಪ್ರಯತ್ನವಾಗಿದ್ದು, ಈ ತಿಂಗಳಿನಿಂದ ಈ ಅಭಿಯಾನ ಮುಂದುವರೆಯಲಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.